ಬಿಡದಿ ಟೌನ್ಶಿಪ್ ಯೋಜನೆ ವಿರೋಧಿಸಿ ಮತ್ತು ರೈತರ ಭೂಮಿಯನ್ನು ಉಳಿಸಲು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಹಮ್ಮಿಕೊಂಡಿದ್ದ ಹೋರಾಟವು ಈಗ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ. ಅಜ್ಜಿ ಚನ್ನಮ್ಮ ಅವರ ನಿಧನದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದ್ದ ಬಿಡದಿ ಉಳಿಸಿ ರೈತರ ರಕ್ಷಿಸಿ ಪಾದಯಾತ್ರೆಗೆ ಇದೀಗ ಹೊಸ ವೇಳಾಪಟ್ಟಿ ಪ್ರಕಟವಾಗಿದೆ.
ಹೊಸ ವೇಳಾಪಟ್ಟಿಯಂತೆ ಆಗಸ್ಟ್ 9 ರಿಂದ 11 ರವರೆಗೆ ಮೂರು ದಿನಗಳ ಕಾಲ ಬೃಹತ್ ಪಾದಯಾತ್ರೆ ನಡೆಯಲಿದೆ. ಆಗಸ್ಟ್ 9 ರಂದು ಬಿಡದಿಯ ಬೈರಮಂಗಲ ವೃತ್ತದಿಂದ ಪಾದಯಾತ್ರೆ ಅಧಿಕೃತವಾಗಿ ಚಾಲನೆ ಪಡೆಯಲಿದ್ದು, ಆಗಸ್ಟ್ 11 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ್ನು ತಲುಪಲಿದೆ. ಈ ಹೋರಾಟದ ಅಂತಿಮ ಹಂತವಾಗಿ ಆಗಸ್ಟ್ 14 ರಂದು ಸ್ವಾತಂತ್ರ್ಯ ಉದ್ಯಾನದಿಂದ ವಿಧಾನಸೌಧದವರೆಗೆ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ.
ರೈತರ ಒಪ್ಪಿಗೆಯಿಲ್ಲದೆ ಕಾಂಗ್ರೆಸ್ ಸರ್ಕಾರವು ಬಿಡದಿಯ ಆರು ಕಂದಾಯ ಗ್ರಾಮಗಳ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಅಂತಿಮ ಅಧಿಸೂಚನೆ ಹೊರಡಿಸಿದೆ. ಇದು ಸರ್ಕಾರದ ದಬ್ಬಾಳಿಕೆಗೆ ಸಾಕ್ಷಿಯಾಗಿದ್ದು, ತಲೆತಲಾಂತರಗಳಿಂದ ವ್ಯವಸಾಯವನ್ನೇ ನಂಬಿ ಬದುಕುತ್ತಿರುವ ರೈತರನ್ನು ಬೀದಿಗೆ ತಳ್ಳಲು ಬಿಡುವುದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಕುಟುಂಬದಲ್ಲಿನ ದುಃಖದ ನಡುವೆಯೂ ರೈತರಿಗಾಗಿ ಈ ಹೋರಾಟವನ್ನು ಮುಂದುವರಿಸಲು ತಾವು ಸಜ್ಜಾಗಿರುವುದಾಗಿ ಅವರು ತಿಳಿಸಿದ್ದಾರೆ.
ಬಿಡದಿ ಟೌನ್ಶಿಪ್ ನೆಪದಲ್ಲಿ ಒಟ್ಟು 9 ಕಂದಾಯ ಗ್ರಾಮಗಳ ಪೈಕಿ 6 ಗ್ರಾಮಗಳ ರೈತರನ್ನು ಒಕ್ಕಲೆಬ್ಬಿಸುವ ಈ ಯೋಜನೆಯು ಜನವಿರೋಧಿಯಾಗಿದೆ. ಅನ್ನ ನೀಡುವ ರೈತನ ಭೂಮಿ ಉಳಿಸಲು ಜೆಡಿಎಸ್ ಬದ್ಧವಾಗಿದೆ. ಈ ಹೋರಾಟದಲ್ಲಿ ರೈತ ಬಾಂಧವರು, ಪಕ್ಷದ ಮುಖಂಡರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಧ್ವನಿ ಎತ್ತಬೇಕು ಎಂದು ನಿಖಿಲ್ ಮನವಿ ಮಾಡಿದ್ದಾರೆ. ಒಟ್ಟಾರೆಯಾಗಿ ಚನ್ನಮ್ಮ ಅವರ ನಿಧನದಿಂದ ತಣ್ಣಗಾಗಿದ್ದ ಹೋರಾಟದ ಕಿಚ್ಚು ಈಗ ಮತ್ತೆ ಹೊತ್ತಿಕೊಂಡಿದ್ದು, ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ.






