ಬೆಂಗಳೂರು:
ದಕ್ಷಿಣ ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಹಾಗೂ ಜನಪ್ರಿಯ ಪ್ರಶಸ್ತಿ ಸಮಾರಂಭವಾದ ‘ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್’ (SIIMA 2026) ಮತ್ತೆ ಬಂದಿದೆ. ಈ ಬಾರಿಯ 14ನೇ ಆವೃತ್ತಿಯ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭವು ಬರುವ ಸೆಪ್ಟೆಂಬರ್ 11 ಮತ್ತು 12 ರಂದು ವೈಭವಯುತವಾಗಿ ನಡೆಯಲಿದೆ.
ಈ ಸಂಬಂಧ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಪತ್ರಿಕಾಗೋಷ್ಠಿಯಲ್ಲಿ ಸೈಮಾ ಅಧ್ಯಕ್ಷೆ ಬೃಂದಾ ಪ್ರಸಾದ್, ನಟ ಶ್ರೀಮುರಳಿ, ನಟಿಯರಾದ ಪ್ರಣೀತಾ ಸುಭಾಷ್, ಶಾನ್ವಿ ಶ್ರೀವಾಸ್ತವ ಹಾಗೂ ಫಾರಿಯಾ ಅಬ್ದುಲ್ಲಾ ಉಪಸ್ಥಿತರಿದ್ದು ಕಾರ್ಯಕ್ರಮದ ಮಾಹಿತಿಯನ್ನು ಹಂಚಿಕೊಂಡರು.
ಕನ್ನಡ ಚಿತ್ರರಂಗ ಪ್ರತಿನಿಧಿಸುತ್ತಿರುವುದಕ್ಕೆ ಹೆಮ್ಮೆಯಿದೆ: ರೋರಿಂಗ್ ಸ್ಟಾರ್ ಶ್ರೀಮುರಳಿ
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ನಟ ಶ್ರೀಮುರಳಿ, “ಈ ಬಾರಿ ಸೈಮಾ ಕಡೆಯಿಂದ ನನಗೆ ಒಂದು ಮುಖ್ಯ ಜವಾಬ್ದಾರಿ ಸಿಕ್ಕಿದ್ದು, ನಮ್ಮ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಈ ಆವೃತ್ತಿಯು ಅತ್ಯಂತ ವೈಭವಯುತವಾಗಿ ಮೂಡಿಬರಲಿದೆ ಎಂಬ ಭರವಸೆ ನನಗಿದೆ” ಎಂದರು.
ತಮ್ಮ ಕುಟುಂಬ ಹಾಗೂ ಸೈಮಾ ನಡುವಿನ ಸುದೀರ್ಘ ಬಾಂಧವ್ಯವನ್ನು ಸ್ಮರಿಸಿದ ಅವರು, “ಸೈಮಾ ನಮಗೆ ಹೊಸದೇನಲ್ಲ; ಕಳೆದ 14 ವರ್ಷಗಳಿಂದ ಸೈಮಾ ಜೊತೆ ನಮಗೆ ಸುದೀರ್ಘ ಹಾಗೂ ಆತ್ಮೀಯ ನಂಟಿದೆ. ಅದರಲ್ಲೂ ನಮ್ಮ ಕುಟುಂಬಕ್ಕೂ ಸೈಮಾಗೂ ವಿಶೇಷವಾದ ಬಾಂಧವ್ಯವಿದೆ. ನನ್ನ ಕಸಿನ್ ಅಪ್ಪು ಮಾಮ ಅವರು ನಾಲ್ಕು ಬಾರಿ, ಶಿವಣ್ಣ ಮಾಮ ಅವರು ಮೂರು ಬಾರಿ ಇಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಹಾಗೆಯೇ ನಮ್ಮ ಅಣ್ಣ (ವಿಜಯ್ ರಾಘವೇಂದ್ರ) ಎರಡು ಬಾರಿ ಕಾರ್ಯಕ್ರಮದ ನಿರೂಪಣೆ ಮಾಡಿದ್ದಾರೆ. ನನಗೂ ‘ಮಫ್ತಿ’ ಚಿತ್ರದ ನಟನೆಗಾಗಿ ‘ಬೆಸ್ಟ್ ಲೀಡ್ (ಕ್ರಿಟಿಕ್)’ ಪ್ರಶಸ್ತಿ ಲಭಿಸಿತ್ತು” ಎಂದು ನೆನಪಿಸಿಕೊಂಡರು.








