ಬೆಂಗಳೂರು: ಪೊಲೀಸ್ ನೇಮಕಾತಿ ಪರೀಕ್ಷೆಯ ಗೊಂದಲಗಳ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ನೀಡಿರುವ ಹೇಳಿಕೆ ಈಗ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಪರೀಕ್ಷಾ ಅಕ್ರಮ ಹಾಗೂ ಗೊಂದಲದ ಹಿನ್ನೆಲೆಯಲ್ಲಿ ರಾಜೀನಾಮೆ ಕೇಳುತ್ತಿರುವವರಿಗೆ ಖರ್ಗೆ ಅವರು ಅತ್ಯಂತ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.
ಪೊಲೀಸ್ ನೇಮಕಾತಿ ಪರೀಕ್ಷೆಯ ವೇಳೆ ಪ್ರಶ್ನೆ ಪತ್ರಿಕೆ ವಿತರಣೆಯಲ್ಲಿ ವಿಳಂಬ ಮತ್ತು ಒಎಂಆರ್ ಶೀಟ್ ಗಳ ಸರಣಿ ಸಂಖ್ಯೆಯ ಗೊಂದಲದಿಂದಾಗಿ ಸಾವಿರಾರು ಅಭ್ಯರ್ಥಿಗಳು ಸಂಕಷ್ಟ ಅನುಭವಿಸಿದ್ದರು. ಈ ಎಡವಟ್ಟಿನಿಂದ ಬೇಸತ್ತ ಹಲವು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಿಂದ ಹೊರನಡೆದಿದ್ದರು. ಈ ಬೆಳವಣಿಗೆಯ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೊದಲು ವಿದ್ಯಾರ್ಥಿಗಳು 25 ದಿನ ಉಪವಾಸ ಸತ್ಯಾಗ್ರಹ ಕೂರಲಿ, ಬಳಿಕ ಲಾಠಿ ಚಾರ್ಜ್ ಆಗಲಿ, ಆಮೇಲೆ ನಾನು ರಾಜೀನಾಮೆ ಕೊಡ್ತೀನಿ ಎಂದು ಸವಾಲು ಹಾಕಿದ್ದಾರೆ.
ಗೊಂದಲಕ್ಕೆ ಅಸಲಿ ಕಾರಣವೇನು?
ಪರೀಕ್ಷಾ ಕೇಂದ್ರಗಳಲ್ಲಿ ಸಂವಹನ ಕೊರತೆಯಿಂದಾಗಿ ಈ ಸಮಸ್ಯೆ ಸೃಷ್ಟಿಯಾಗಿದೆ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ. ಅಭ್ಯರ್ಥಿಗಳ ನಡುವೆ ಒಎಂಆರ್ ಶೀಟ್ ಮತ್ತು ಕ್ವೆಶ್ಚನ್ ಬ್ಯಾಂಕ್ ಸೀರಿಯಲ್ ನಂಬರ್ ಒಂದೇ ಆಗಿರಬೇಕು ಎನ್ನುವ ತಪ್ಪು ತಿಳುವಳಿಕೆ ಇತ್ತು. ಆದರೆ ವಾಸ್ತವದಲ್ಲಿ ಅಂತಹ ಯಾವುದೇ ನಿಯಮ ಇರಲಿಲ್ಲ. ಈ ಗೊಂದಲದಿಂದಾಗಿ ಕೆಲವರು ತಾವಾಗಿಯೇ ಪರೀಕ್ಷಾ ಕೇಂದ್ರದಿಂದ ಹೊರಗೆ ಹೋದರು. ಒಮ್ಮೆ ಹೊರಗೆ ಹೋದ ಮೇಲೆ ನಿಯಮದ ಪ್ರಕಾರ ಮತ್ತೆ ಒಳಗೆ ಬಿಟ್ಟುಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಮುಂದಿನ ಕ್ರಮದ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ವಿರೋಧ ಪಕ್ಷಗಳಿಗೆ ಖಡಕ್ ಉತ್ತರ
ತಮ್ಮ ರಾಜೀನಾಮೆ ಕೇಳುತ್ತಿರುವ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ ಪ್ರಿಯಾಂಕ್ ಖರ್ಗೆ, ಈ ಹಿಂದೆ ಪಿಎಸ್ಐ ಹಗರಣ ನಡೆದಾಗ ಅಂದಿನ ಮುಖ್ಯಮಂತ್ರಿ ಬೊಮ್ಮಾಯಿ ಆಗಲಿ ಅಥವಾ ಗೃಹ ಸಚಿವರಾಗಿದ್ದ ಅರಗ ಜ್ಞಾನೇಂದ್ರ ಅವರಾಗಲಿ ಯಾಕೆ ರಾಜೀನಾಮೆ ನೀಡಲಿಲ್ಲ ಎಂದು ಪ್ರಶ್ನಿಸಿದ್ದಾರೆ. ದೆಹಲಿಯ ಪ್ರತಿಭಟನೆಗಳನ್ನು ಉಲ್ಲೇಖಿಸಿ ವ್ಯಂಗ್ಯವಾಡಿದ ಅವರು, ಮೊದಲು ಇವರು ಉಪವಾಸ ಸತ್ಯಾಗ್ರಹ ಮಾಡಲಿ ಎಂದು ಲೇವಡಿ ಮಾಡಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ಲಕ್ಷಾಂತರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೇವಲ ಬೆರಳೆಣಿಕೆಯಷ್ಟು ಕೇಂದ್ರಗಳಲ್ಲಿ ಮಾತ್ರ ಇಂತಹ ಸಣ್ಣಪುಟ್ಟ ಸಮಸ್ಯೆಗಳಾಗಿವೆ. ಅದನ್ನೇ ದೊಡ್ಡದು ಮಾಡುವುದು ಸರಿಯಲ್ಲ. ಒಂದು ವೇಳೆ ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಸರ್ಕಾರ ಸುಮ್ಮನಿರಲ್ಲ, ಕಠಿಣ ಕ್ರಮ ಅನಿವಾರ್ಯವಾಗುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ. ಸಚಿವರ ಈ ಸ್ಫೋಟಕ ಹೇಳಿಕೆ ಈಗ ಅಭ್ಯರ್ಥಿಗಳ ವಲಯದಲ್ಲಿ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.






