ಫಿಯರ್‍ಲೆಸ್ ಕ್ರಿಕೆಟರ್ ರಿಷಬ್ ಪಂತ್ ಶ್ರೀಲಂಕಾ ಪ್ರವಾಸಕ್ಕೆ ರೆಡಿಯಾಗುತ್ತಿದ್ದಾರೆ. ಅಪಘಾತ, ಸತತ ಗಾಯ, ಸ್ಥಿರ ಪ್ರದರ್ಶನದ ಕೊರತೆಯ ನಡುವೆಯೂ ಪಂತ್ ಟೀಮ್ ಇಂಡಿಯಾದ ಟೆಸ್ಟ್ ತಂಡದ ಆಧಾರಸ್ತಂಭವಾಗಿದ್ದಾರೆ. ಏಕದಿನ ಮತ್ತು ಟಿ-20 ಪಂದ್ಯಗಳಲ್ಲಿ ಪಂತ್‍ಗೆ ಟೀಮ್ ಇಂಡಿಯಾದಲ್ಲಿ ಸ್ಥಾನವಿಲ್ಲ. ಆದ್ರೆ ಟೆಸ್ಟ್ ಕ್ರಿಕೆಟ್ ಬಂದಾಗ ಪಂತ್ ಸ್ಪೇಷಲ್ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದೀಗ ಆಗಸ್ಟ್ 15ರಿಂದ ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ಈಗಾಗಲೇ ಟೀಮ್ ಇಂಡಿಯಾದ ಟೆಸ್ಟ್ ಆಟಗಾರರು ಅಂತಿಮ ಹಂತದ ಸಿದ್ದತೆ ನಡೆಸುತ್ತಿದ್ದಾರೆ.
ಆದ್ರೆ ರಿಷಬ್ ಪಂತ್ ಲಂಕಾ ಪ್ರವಾಸಕ್ಕೆ ಮುನ್ನ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿ ಕೆಲವೊಂದು ಸಲಹೆಗಳನ್ನು ಪಡೆದುಕೊಂಡಿದ್ದಾರೆ.
ಸ್ವತಃ ರಿಷಬ್ ಪಂತ್ ರಾಂಚಿಯಲ್ಲಿರುವ ಧೋನಿಯನ್ನು ಭೇಟಿ ಮಾಡಿರುವ ವಿಡಿಯೋ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಮಾಜಿ ವಿಕೆಟ್ ಕೀಪರ್ ಧೋನಿ, ಭಾರತದ ಮಾಜಿ ಸ್ಪಿನ್ನರ್ ಶಹಬಾಜ್ ನದೀಮ್ ಅವರೊಂದಿಗೆ ಪಂತ್ ತರಬೇತಿ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಗಮನ ಸೆಳೆಯುತ್ತಿದೆ.
ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ದ ಸೋತ ನಂತರ ಪಂತ್ ಕೀಪಿಂಗ್ ಮತ್ತು ಬ್ಯಾಟಿಂಗ್ ಮೇಲೆ ಗಮನ ಹರಿಸುತ್ತಿದ್ದಾರೆ. ಹಾಗಂತ ಧೋನಿಯ ಸಲಹೆ, ಮಾರ್ಗದರ್ಶನ ಪಡೆಯುತ್ತಿರುವುದು ಪಂತ್ ಇದೇನೂ ಮೊದಲ ಸಲವಲ್ಲ. ಈ ಹಿಂದೆಯೂ ಪಂತ್ ಧೋನಿಯ ಸಲಹೆ, ಸೂಚನೆಗಳನ್ನು ಪಡೆಯುತ್ತಿದ್ದರು. ಇವರಿಬ್ಬರ ನಡುವಿನ ಬಾಂಧವ್ಯ ತುಂಬಾ ಚೆನ್ನಾಗಿದೆ. ಇದೀಗ ಪಂತ್ ಧೋನಿಯ ಫಾರ್ಮ್‍ಹೌಸ್‍ಗೆ ಹೋಗಿ ಕೆಲವೊಂದು ಟಿಪ್ಸ್‍ಗಳನ್ನು ಪಡೆದುಕೊಂಡಿದ್ದಾರೆ.








