ನಟಿ ತ್ರಿಶಾ ಕೃಷ್ಣನ್ ಕುರಿತು ವಿವಾದಾತ್ಮಕ ಹೇಳಿಕೆ ಪ್ರಕರಣದಲ್ಲಿ ಠಾಣಾ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ, ತಮಿಳುನಾಡಿನ ಮಾಜಿ ಉಪಮುಖ್ಯಮಂತ್ರಿ ಹಾಗೂ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ಟಿವಿಕೆ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತಿರುಚಿರಾಪಳ್ಳಿಯ ಸೆಂಗಿಪಟ್ಟಿ ಪೊಲೀಸ್ ಠಾಣೆಯಲ್ಲಿ ಸುಮಾರು ಒಂದೂವರೆ ಗಂಟೆಗಳ ವಿಚಾರಣೆ ಬಳಿಕ ಮಾತನಾಡಿದ ಅವರು, ನಾನು ನಟಿ ತ್ರಿಶಾ ವಿರುದ್ಧ ಯಾವುದೇ ಅವಹೇಳನಕಾರಿ ಅಥವಾ ಆಕ್ಷೇಪಾರ್ಹ ಹೇಳಿಕೆ ನೀಡಿಲ್ಲ. ನನ್ನ ಮಾತುಗಳಿಗೆ ಒಂದೇ ಅರ್ಥವಿತ್ತು. ಕಾವೇರಿ ನೀರು ಬಿಡುಗಡೆ ಮಾಡಿ ರೈತರ ಹಿತ ಕಾಪಾಡುವಂತೆ ಒತ್ತಾಯಿಸುವ ಉದ್ದೇಶದಿಂದಲೇ ನಾನು ಮಾತನಾಡಿದ್ದೆ ಎಂದು ಸಮರ್ಥಿಸಿಕೊಂಡರು.
ಇದೇ ವೇಳೆ, ನಾನು ಯಾವುದೇ ತಪ್ಪು ಅಥವಾ ದುರುದ್ದೇಶದಿಂದ ಮಾತನಾಡಿಲ್ಲ. ರೈತರ ಪರವಾಗಿ ಧ್ವನಿ ಎತ್ತಿದ್ದಕ್ಕಾಗಿ ನನ್ನನ್ನು ಬಂಧಿಸಲಾಗಿದೆ. ಈ ಬಂಧನಕ್ಕೆ ನಾನು ಹೆದರುವುದಿಲ್ಲ ಎಂದು ಹೇಳಿದ್ದಾರೆ.
ಟಿವಿಕೆ ಸರ್ಕಾರವನ್ನು ಟೀಕಿಸಿದ ಉದಯನಿಧಿ, ಇದು ಸರ್ಕಾರವಲ್ಲ, ಸರ್ಕಸ್ ಕ್ಯಾಂಪ್. ಡಿಎಂಕೆ ನಾಯಕರನ್ನು ಕಂಡರೆ ಮೊದಲು ಬಂಧಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಇದಲ್ಲದೆ, ನನ್ನನ್ನು ಭಯೋತ್ಪಾದಕನಂತೆ ನಡೆಸಿಕೊಂಡು ರಸ್ತೆ ಮಾರ್ಗವಾಗಿ ತಂಜಾವೂರಿಗೆ ಕರೆದೊಯ್ಯಲಾಯಿತು. ಇದು ಅವಮಾನಕರ ನಡೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಉದಯನಿಧಿ ಅವರ ಈ ಹೇಳಿಕೆಗಳು ತಮಿಳುನಾಡಿನ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಪ್ರಕರಣದ ಮುಂದಿನ ಬೆಳವಣಿಗೆಗಳತ್ತ ಗಮನ ಹರಿದಿದೆ.








