ರಾಜ್ಯ ರಾಜಕಾರಣದಲ್ಲಿ ಈಗ ಸಚಿವ ಸಂಪುಟ ಕಸರತ್ತಿನ ನಂತರದ ಅಲೆಗಳು ತಲ್ಲಣ ಸೃಷ್ಟಿಸಿವೆ. ಮಂತ್ರಿಸ್ಥಾನ ವಂಚಿತರಾದ ಕೈ ಶಾಸಕರ ಆಕ್ರೋಶ ಈಗ ಬೀದಿಗೆ ಬಂದಿದ್ದು, ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಆರಂಭದಲ್ಲೇ ದೊಡ್ಡ ತಲೆನೋವು ಶುರುವಾಗಿದೆ. ಹಿರಿಯ ಶಾಸಕರ ಈ ಅಸಮಾಧಾನದ ಬೆಂಕಿಯನ್ನು ನಂದಿಸಲು ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ತುರ್ತಾಗಿ ಬೆಂಗಳೂರಿಗೆ ಧಾವಿಸುತ್ತಿದ್ದಾರೆ.
ಸಚಿವ ಸ್ಥಾನ ಸಿಗದೇ ಇದ್ದಿದ್ದಕ್ಕೆ ತೀವ್ರ ಬೇಸರಗೊಂಡಿರುವ ಶಿರಾ ಕ್ಷೇತ್ರದ ಹಿರಿಯ ಶಾಸಕ ಟಿ.ಬಿ. ಜಯಚಂದ್ರ ಅವರು ಅತ್ಯಂತ ಕಠಿಣ ನಿರ್ಧಾರಕ್ಕೆ ಮುಂದಾಗಿದ್ದಾರೆ. ತಮಗೆ ಆಡಳಿತ ಪಕ್ಷದ ಸಾಲಿನಲ್ಲಿ ಕುಳಿತುಕೊಳ್ಳಲು ಇಷ್ಟವಿಲ್ಲ, ಬದಲಾಗಿ ವಿರೋಧ ಪಕ್ಷದ ಸಾಲಿನಲ್ಲಿ ಪ್ರತ್ಯೇಕ ಆಸನ ಕಲ್ಪಿಸಿಕೊಡಬೇಕು ಎಂದು ಸ್ಪೀಕರ್ ಅವರಿಗೆ ಪತ್ರ ಬರೆಯಲು ಸಿದ್ಧತೆ ನಡೆಸಿದ್ದಾರೆ. ಹಂಗಾಮಿ ಸ್ಪೀಕರ್ ಜವಾಬ್ದಾರಿಯನ್ನೂ ನಿರಾಕರಿಸಿರುವ ಅವರು, ವಿಪಕ್ಷದ ಸಾಲಿನಲ್ಲಿ ಕುಳಿತು ಸರ್ಕಾರದ ತಪ್ಪುಗಳನ್ನು ತಿದ್ದುವ ಕೆಲಸ ಮಾಡುವುದಾಗಿ ಹೇಳಿರುವುದು ಪಕ್ಷಕ್ಕೆ ದೊಡ್ಡ ಮುಜುಗರ ತಂದಿದೆ.
ಹೆಚ್.ಡಿ. ಕುಮಾರಸ್ವಾಮಿ ನೆನೆದ ಎಸ್.ಆರ್. ಶ್ರೀನಿವಾಸ್
ಇನ್ನೊಂದೆಡೆ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಅವರ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡಿಸಿದೆ. ನಾನು ಹಿಂದೆ ಜೆಡಿಎಸ್ನಲ್ಲಿದ್ದಾಗ ಸಚಿವ ಸ್ಥಾನ ಸಿಗಲ್ಲ ಎಂದು ಮನೆಯಲ್ಲಿದ್ದೆ, ಆಗ ಕುಮಾರಸ್ವಾಮಿ ಅವರೇ ನನಗೆ ಕರೆ ಮಾಡಿ ಮಂತ್ರಿ ಮಾಡಿದ್ದರು ಎಂದು ಸ್ಮರಿಸಿದ್ದಾರೆ. ಸದ್ಯ ಕಾಂಗ್ರೆಸ್ ಪಕ್ಷದಲ್ಲಿದ್ದರೂ ಕೂಡ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರ ಪರವಾಗಿ ಬ್ಯಾಟ್ ಬೀಸಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಕಾಂಗ್ರೆಸ್ ಪಕ್ಷದಲ್ಲಿ ಈಗ ಸಚಿವ ಸ್ಥಾನಕ್ಕಾಗಿ ಅಸಮಾಧಾನದ ಜ್ವಾಲೆ ಹೊತ್ತಿ ಉರಿಯುತ್ತಿದೆ. ಈ ಬಂಡಾಯದ ಬಿಸಿಯನ್ನು ತಣ್ಣಗಾಗಿಸಲು ಸುರ್ಜೆವಾಲಾ ಅವರು ಅಸಮಾಧಾನಿತ ಶಾಸಕರೊಂದಿಗೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ. ಹಿರಿಯ ನಾಯಕರನ್ನು ಮನವೊಲಿಸುವಲ್ಲಿ ಹೈಕಮಾಂಡ್ ಯಶಸ್ವಿಯಾಗುತ್ತದೆಯೇ ಅಥವಾ ಈ ಭಿನ್ನಮತ ಮತ್ತೊಂದು ಸ್ವರೂಪ ಪಡೆಯಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.








