ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮರುಪರಿಶೀಲನೆ (SIR) ಪ್ರಕ್ರಿಯೆ ವೇಳೆ, ತಮ್ಮ ಮಾಹಿತಿ ಮತ್ತು ದಾಖಲೆಗಳನ್ನು ದೃಢೀಕರಿಸದ ಮತದಾರರ ಹೆಸರುಗಳು ಅಂತಿಮ ಮತದಾರರ ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.
ಮನೆ-ಮನೆಗೆ ಭೇಟಿ ನೀಡಿ ಬಿಎಲ್ಒ (BLO)ಗಳು ಸಂಗ್ರಹಿಸಿರುವ ವರದಿಯ ಆಧಾರದ ಮೇಲೆ, ಸುಮಾರು 48.90 ಲಕ್ಷಕ್ಕೂ ಹೆಚ್ಚು ಮತದಾರರನ್ನು ‘ASDDO’ ವರ್ಗಕ್ಕೆ ಸೇರಿಸಿ ಹೆಚ್ಚಿನ ಪರಿಶೀಲನೆಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಇದರ ಪರಿಣಾಮವಾಗಿ, ಬೆಂಗಳೂರು ನಗರದ ಸುಮಾರು 47% ಮತದಾರರ ಹೆಸರುಗಳು ಅಂತಿಮ ಮತದಾರರ ಪಟ್ಟಿಯಿಂದ ಹೊರಬೀಳುವ ಸಾಧ್ಯತೆ ಇದೆ ಎಂಬ ಚರ್ಚೆ ನಡೆಯುತ್ತಿದೆ. ಆದರೆ, ಇದು ಅಂತಿಮವಾಗಿ ಹೆಸರುಗಳನ್ನು ಕೈಬಿಟ್ಟಿದ್ದಾರೆ ಎಂಬುದಲ್ಲ. ಸಂಬಂಧಿತ ಮತದಾರರು ತಮ್ಮ ವಿವರಗಳನ್ನು ದೃಢೀಕರಿಸಿದ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.
ಚುನಾವಣಾ ಅಧಿಕಾರಿಗಳು, ಮತದಾರರು ಬಿಎಲ್ಒಗಳು ಅಥವಾ ಚುನಾವಣಾ ಆಯೋಗ ಸೂಚಿಸಿರುವ ವಿಧಾನಗಳ ಮೂಲಕ ತಮ್ಮ ವಿವರಗಳನ್ನು ಪರಿಶೀಲಿಸಿ, ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಮನವಿ ಮಾಡಿದ್ದಾರೆ. ಇದರಿಂದ ಅರ್ಹ ಮತದಾರರ ಹೆಸರುಗಳು ಅಂತಿಮ ಪಟ್ಟಿಯಲ್ಲಿ ಉಳಿಯಲು ನೆರವಾಗಲಿದೆ.







