ಬೆಂಗಳೂರು: ದೇಶದ ಅತ್ಯಂತ ಹಿರಿಯ ವಿಧಾನ ಪರಿಷತ್ ಸದಸ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ಸರ್ಕಾರ ಅನುಸರಿಸಿದ ಹಾದಿ ಅತ್ಯಂತ ಕೆಟ್ಟದಾಗಿದ್ದು, ಇದು ಸಂವಿಧಾನ ಮತ್ತು ಸಭಾಪತಿ ಸ್ಥಾನಕ್ಕೆ ಎಸಗಿದ ಅಪಮಾನ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ಈ ಕುರಿತು ಸುದೀರ್ಘ ಪತ್ರಿಕಾ ಹೇಳಿಕೆ ನೀಡಿರುವ ಬೊಮ್ಮಾಯಿ ಅವರು, ಕರ್ನಾಟಕ ವಿಧಾನ ಪರಿಷತ್ತಿನ ಇತಿಹಾಸದಲ್ಲಿ ಇಂದಿನ ಘಟನೆ ಒಂದು ಕಪ್ಪು ಚುಕ್ಕೆಯಾಗಿ ಉಳಿಯಲಿದೆ. ಯಾವುದೇ ಸತ್ಸಂಪ್ರದಾಯಗಳನ್ನು ಪಾಲಿಸದೆ ಸರ್ಕಾರ ನಡೆದುಕೊಂಡಿರುವ ರೀತಿ ಖಂಡನೀಯ ಎಂದು ಟೀಕಿಸಿದ್ದಾರೆ.
ಒತ್ತಾಯಪೂರ್ವಕ ರಾಜೀನಾಮೆ ಆರೋಪ
ಸಭಾಪತಿಗಳಾಗಿದ್ದ ಬಸವರಾಜ ಹೊರಟ್ಟಿ ಅವರನ್ನು ಮುಖ್ಯಮಂತ್ರಿಗಳ ಮನೆಗೆ ಕರೆಯಿಸಿಕೊಂಡು ಮಾತನಾಡಿದ ನಂತರ, ವಿಧಾನಸೌಧದಲ್ಲಿಯೇ ಕುಳಿತು ಅವರಿಂದ ಒತ್ತಾಯಪೂರ್ವಕವಾಗಿ ರಾಜೀನಾಮೆ ಪಡೆದಿರುವುದು ಪ್ರಜಾಪ್ರಭುತ್ವ ವಿರೋಧಿ ಕೆಲಸವಾಗಿದೆ. ಇನ್ನು ರಾಜೀನಾಮೆ ನೀಡಿದ ಕೇವಲ ಐದು ನಿಮಿಷಗಳಲ್ಲಿ ಅದನ್ನು ಅಂಗೀಕರಿಸಿ ಅಧಿಕೃತ ಪ್ರಕಟಣೆ ಹೊರಡಿಸಿರುವುದು ಸರ್ಕಾರದ ದುರಾಲೋಚನೆ ಮತ್ತು ತರಾತುರಿಯನ್ನು ಎತ್ತಿ ತೋರಿಸುತ್ತದೆ. ಈ ಪ್ರಕ್ರಿಯೆಯು ಸಭಾಪತಿ ಸ್ಥಾನದ ಘನತೆಗೆ ಧಕ್ಕೆ ತಂದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
46 ವರ್ಷಗಳ ಸುದೀರ್ಘ ಸೇವೆಗೆ ಅವಮಾನ
ಬಸವರಾಜ ಹೊರಟ್ಟಿ ಅವರು ಕಳೆದ 46 ವರ್ಷಗಳಿಂದ ಸತತವಾಗಿ ವಿಧಾನ ಪರಿಷತ್ ಸದಸ್ಯರಾಗಿ, ಸಚಿವರಾಗಿ ಮತ್ತು ಸಭಾಪತಿಯಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಅವರು ಪಕ್ಷಾತೀತವಾಗಿ ವಿಷಯಾಧಾರಿತ ರಾಜಕಾರಣಕ್ಕೆ ಹೆಸರಾದವರು. ಇಂತಹ ಹಿರಿಯ ಮುತ್ಸದ್ದಿಯನ್ನು ಗೌರವಯುತವಾಗಿ ನಡೆಸಿಕೊಳ್ಳುವ ಬದಲು ರಾಜಕೀಯ ಕಾರಣಗಳಿಗಾಗಿ ಈ ರೀತಿ ನಡೆದುಕೊಂಡಿರುವುದು ಇತಿಹಾಸದಲ್ಲಿ ಕೆಟ್ಟ ನಡವಳಿಕೆಯಾಗಿ ದಾಖಲಾಗಲಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಮಾರ್ಗದರ್ಶನ ಅಗತ್ಯ
ಸಭಾಪತಿಯಾಗಿ ಬಸವರಾಜ ಹೊರಟ್ಟಿ ಅವರು ನೀಡಿದ ಕೊಡುಗೆ ಮತ್ತು ಮಾಡಿದ ಕೆಲಸಗಳು ಇತಿಹಾಸದಲ್ಲಿ ಶಾಶ್ವತವಾಗಿರಲಿವೆ. ರಾಜೀನಾಮೆಯ ನಂತರವೂ ಅವರು ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿ ಮುಂದುವರಿಯಬೇಕು. ಯುವಕರಿಗೆ ಹಾಗೂ ಹೊಸ ರಾಜಕಾರಣಿಗಳಿಗೆ ತಮ್ಮ ಸುದೀರ್ಘ ಅನುಭವದ ಮೂಲಕ ಮಾರ್ಗದರ್ಶನ ನೀಡಬೇಕು ಎಂಬುದು ಸಾರ್ವಜನಿಕರ ಅಪೇಕ್ಷೆಯಾಗಿದೆ. ಅವರ ಹಿರಿತನ ಮತ್ತು ಅಪಾರ ಅನುಭವಕ್ಕೆ ರಾಜ್ಯದ ಜನತೆ ಸದಾ ಗೌರವಪೂರ್ವಕವಾಗಿ ಋಣಿಯಾಗಿರುತ್ತಾರೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.








