ಪಿತೂರಿ ಪಿಎಲ್‌ಎ ಜೊತೆ ಸಂಪರ್ಕ. ಹುವಾವೇ, ಅಲಿಬಾಬಾ ಸೇರಿದಂತೆ 7 ಚೀನಾದ ಕಂಪನಿಗಳ ಮೇಲೆ ಕ್ರಮಕ್ಕೆ ಮುಂದಾದ ಕೇಂದ್ರ ಸರಕಾರ
ಹೊಸದಿಲ್ಲಿ, ಜುಲೈ 19: ಚೀನಾದ ಜಾಗತಿಕ ದೈತ್ಯರಾದ ಹುವಾವೇ, ಅಲಿಬಾಬಾ ಮತ್ತು ಇತರ ಐದು ಚೀನಾದ ಕಂಪನಿಗಳ ನೇರ ಅಥವಾ ಪರೋಕ್ಷವಾಗಿ ಚೀನಾ ಸೇನೆಯ ಜೊತೆ ನಿಕಟ ಸಂಪರ್ಕವನ್ನು ಹೊಂದಿದ್ದು , ಶೀಘ್ರದಲ್ಲೇ ಈ ಕಂಪನಿಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ . ಹುವಾವೇ, ಅಲಿಬಾಬಾ ಮತ್ತು ಇತರ 7 ಚೀನಾದ ಕಂಪನಿಗಳು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯೊಂದಿಗೆ ಆಳವಾದ ಸಂಪರ್ಕ ಹೊಂದಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಸರ್ಕಾರದ ಮೂಲಗಳ ಪ್ರಕಾರ ಕ್ಸಿಂಡಿಯಾ ಸ್ಟೀಲ್ಸ್, ಕ್ಸಿನ್ಕ್ಸಿಂಗ್ ಕ್ಯಾಥೆ ಇಂಟರ್ನ್ಯಾಷನಲ್, ಚೀನಾ ಎಲೆಕ್ಟ್ರಾನಿಕ್ ಟೆಕ್ನಾಲಜಿ ಗ್ರೂಪ್, ಹುವಾವೇ, ಅಲಿಬಾಬಾ, ಟೆನ್ಸೆಂಟ್, ಎಸ್ಎಐಸಿ ಮೋಟಾರ್ ಕಾರ್ಪೊರೇಶನ್ ಕಂಪನಿಗಳು ಸರಕಾರದ ಕಣ್ಗಾವಲಿನಲ್ಲಿದ್ದು ಶೀಘ್ರದಲ್ಲೇ ಕ್ರಮ ಕೈಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಹುವಾವೇ ಯುಎಸ್, ಜಪಾನ್, ಯುಕೆ, ಆಸ್ಟ್ರೇಲಿಯಾದಂತಹ ದೇಶಗಳಲ್ಲಿ 5 ಜಿ ಯಲ್ಲಿ ಜಾಗತಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಹುವಾವೇ ಸ್ಥಾಪಕ ರೇನ್ ಜ್ಹೆಂಗ್ಫೆನ್ , ಪಿಎಲ್‌ಎಯ ಎಂಜಿನಿಯರಿಂಗ್ ಕಾರ್ಪ್ಸ್ ನಲ್ಲಿ ಮಾಜಿ ಉಪ ನಿರ್ದೇಶಕರಾಗಿದ್ದರು ಎನ್ನುವುದು ಅಚ್ಚರಿಗೆ ಕಾರಣವಾಗಿದೆ.

ಅಲಿಬಾಬಾ, ಬೈದು, ಟೆನ್ಸೆಂಟ್ ಕಂಪನಿಯಾ ಮೂಲಗಳು ಚೀನಾದ ಮಿಲಿಟರಿ-ನಾಗರಿಕ ಸಮ್ಮಿಲನ ಮತ್ತು ಕೃತಕ ಗುಪ್ತಚರ ಯೋಜನೆಗಳ ಭಾಗವಾಗಿದೆ. ಇನ್ನು ಅಲಿಬಾಬಾ ದೇಶದಲ್ಲಿ ಜನಪ್ರಿಯವಾದ ಪೇಟಿಎಂ, ಝೋಮ್ಯಾಟೋ, ಬಿಗ್ ಬಾಸ್ಕೆಟ್, ಸ್ನ್ಯಾಪ್‌ಡೀಲ್, ಎಕ್ಸ್‌ಪ್ರೆಸ್‌ಬೀಸ್ ಸೇರಿದಂತೆ ಭಾರತದ ಸ್ಟಾರ್ಟ್ ಅಪ್‌ಗಳಲ್ಲಿ ಹೂಡಿಕೆ ಮಾಡಿದೆ. ಟೆನ್ಸೆಂಟ್ ಓಲಾ ಕ್ಯಾಬ್‌ಗಳಲ್ಲಿ ಪ್ಲಿಪ್ ಕಾರ್ಟ್‌ನಲ್ಲಿ ಮತ್ತು ಇತರ ಭಾರತೀಯ ಟೆಕ್ ಜಾಗದಲ್ಲಿ ಮೆಗಾ ಹೂಡಿಕೆ ಮಾಡಿದೆ.
ಚೀನಾದ ಸರ್ಕಾರಿ ಸ್ವಾಮ್ಯದ ಆಟೋಮೊಬೈಲ್ ಕಂಪನಿಯಾದ ಎಸ್’ಐಸಿ ಮೋಟಾರ್ ಕಾರ್ಪೊರೇಷನ್ ಭಾರತದಲ್ಲಿ ಸ್ಪೋರ್ಟ್ ಯುಟಿಲಿಟಿ ವಾಹನ ಎಂಜಿ ಹೆಕ್ಟರ್ ಅನ್ನು ಮಾರಾಟ ಮಾಡುತ್ತಿದ್ದು ಈ ಕಂಪನಿಯ ಅಂಗಸಂಸ್ಥೆಗಳಲ್ಲಿ ಒಂದಾದ ನಾನ್‌ಜಿಂಗ್ ಆಟೋಮೊಬೈಲ್, ಈ ಹಿಂದೆ ಪಿಎಲ್‌ಎಯ ವಾಹನ ಸೇವಾ ಘಟಕವಾಗಿತ್ತು.
ಕ್ಸಿಂಡಿಯಾ ಸ್ಟೀಲ್ಸ್ ಲಿಮಿಟೆಡ್ ಸೇರಿದಂತೆ ವಿವಿಧ ಲೋಹದ ಉತ್ಪನ್ನಗಳ ಉತ್ಪಾದನಾ ಕಂಪನಿ ಕ್ಸಿನ್ಕ್ಸಿಂಗ್ ಕ್ಯಾಥೆ ಇಂಟರ್ನ್ಯಾಷನಲ್ ಗ್ರೂಪ್ ಕೂಡ ಭಾರತದಲ್ಲಿದೆ. ಈಗಾಗಲೇ ಚೀನಾ ಎಲೆಕ್ಟ್ರಾನಿಕ್ಸ್ ಟೆಕ್ನಾಲಜಿ ಗ್ರೂಪ್ ಕಾರ್ಪೊರೇಷನ್ (ಸಿಇಟಿಸಿ) ಯ ನೌಕರರು ತಂತ್ರಜ್ಞಾನ ಪೂರೈಕೆಯಡಿ ಮಿಲಿಟರಿ ಬೇಹುಗಾರಿಕೆಯ ಶಿಕ್ಷೆಗೊಳಗಾಗಿದ್ದಾರೆ.
ಒಟ್ಟಿನಲ್ಲಿ ಗಡಿ ತಂಟೆಗೆ ಬಂದ ಚೀನಾ ಇದೀಗ ದಿನದಿಂದ ದಿನಕ್ಕೆ ನಿಷೇಧಕ್ಕೆ ಒಳಗಾಗುತ್ತಿರುವುದು ವಿಪರ್ಯಾಸ . ಆದರೆ ದೇಶದ ಭದ್ರತೆಯನ್ನು ಕಡೆಗಣಿಸಿ ಇಷ್ಟೆಲ್ಲ ಕಂಪನಿಗಳಿಗೆ ಪ್ರವೇಶ ನೀಡಿದ್ದ ಸರಕಾರದ ನಿರ್ಧಾರವೂ ನಿಜಕ್ಕೂ ಹಾಸ್ಯಾಸ್ಪದವಾಗಿದೆ.








