ಒಡಿಯೂರಿನ ಒಡಲಲ್ಲಿ ಮೂಡಿದ ಆಧ್ಯಾತ್ಮಿಕ ಬೆಳಕು…ನಂಬಿದವರ ಬಾಳಿನ ಶಾಂತಿ ಧಾಮ..ಧರ್ಮ ಸಂಸ್ಕೃತಿ, ಧಾರ್ಮಿಕತೆಯ ಪಾವನ ಬೀಡು.. ಶ್ರೀ ಗುರುದೇವದತ್ತ ಪೀಠದ ಅವಧೂತ ಶ್ರೀ ಗುರುದೇವಾನಂದ ಸ್ವಾಮೀಜಿಯವರು..!
=====
ಮಂದಹಾಸದಿಂದ ಕಂಗೊಳಿಸುತ್ತಿರುವ ಮುಖದ ತೇಜಸ್ಸು.. ಕಾಂತಿಯಂತೆ ಹೊಳೆಯುವ ಕಣ್ಣುಗಳು.. ದಿವ್ಯ ಪ್ರಭೆಯ ನೋಟ.. ಗಾಂಭೀರ್ಯದ ನಡೆ.. ದೈವಿಕ ವರ್ಚಸ್ಸಿನಿಂದಲೇ ಆಕರ್ಷಿಸುತ್ತಿರುವ ವ್ಯಕ್ತಿತ್ವ.. ಮನಸ್ಸಿಗೆ ಹಿತ ನೀಡುವ ಮಾತುಗಳು.. ನೊಂದವರ ಬಾಳಿಗೆ ಬೆಳಕು ನೀಡಿ ಮುನ್ನಡೆಸುವ ಕೈಗಳು.. ಕರುಣೆ, ಪ್ರೀತಿ, ದಯೆ ಮತ್ತು ಮಾನವೀಯತೆಯಿಂದ ತುಂಬಿದ ಪವಿತ್ರ ಹೃದಯ.. ಪರರ ಸುಖ-ದುಃಖ, ನೋವು-ನಲಿವುಗಳಿಗೆ ಸ್ಪಂದಿಸುವ ಮನಸ್ಸು..
ಸದಾ ಲೋಕಕಲ್ಯಾಣದ ಚಿಂತನೆಯಲ್ಲಿರುವ ಅಂತರಂಗ.. ದಣಿವನ್ನರಿಯದೆ ಸೇವೆಯ ಹಾದಿಯಲ್ಲಿ ಸಾಗುವ ಪಾವನ ಚರಣಗಳು.. ಭಕ್ತಿ, ಪ್ರೀತಿ ಮತ್ತು ಶ್ರದ್ಧೆಯಿಂದ ಪೂಜಿಸಲ್ಪಡುವ ಪಾದಕಮಲಗಳು. ಹೆಜ್ಜೆಯ ಕುರುಹುಗಳಲ್ಲಿ ಸೇವೆಯ ಸಾರ್ಥಕತೆಯ ದರ್ಶನ..ಸರಳತೆಯ ಸಾಕಾರಮೂರ್ತಿ..ತನ್ನ ಬದುಕನ್ನು ಧರ್ಮ, ಸಂಸ್ಕøತಿ, ಸಮಾಜಕ್ಕೆ ಸಮರ್ಪಿಸಿಕೊಂಡಿರುವ ಮಹಾತ್ಯಾಗಿ.
ಹೌದು, ಅವರ ಪ್ರತಿಯೊಂದು ಹೆಜ್ಜೆಯ ಗುರುತುಗಳಲ್ಲೂ ಪರೋಪಕಾರದ ಸಂದೇಶವಿದೆ.. ಪ್ರತಿಯೊಂದು ನಡೆಯಲ್ಲೂ ನಿಸ್ವಾರ್ಥ ಸೇವೆಯ ಸಂಕಲ್ಪವಿದೆ.. ಪ್ರತಿ ನುಡಿ ಮತ್ತು ಹಿತವಚನಗಳಲ್ಲಿ ಬದುಕಿಗೆ ದಾರಿ ತೋರುವ ಜ್ಞಾನದ ಬೆಳಕಿದೆ.. ಆಶೀರ್ವಚನ ಮಂಟಪದ ಪದಗಳಲ್ಲಿ ಸಮಾಜವನ್ನು ಜಾಗೃತಗೊಳಿಸುವ ಶಕ್ತಿ ಇದೆ. ಪ್ರತಿ ಪಾದಸ್ಪರ್ಶದಲ್ಲೂ ಭಕ್ತಿಭಾವದ ಅನುಭೂತಿ ಇದೆ.. ಪ್ರತಿಯೊಂದು ಸೇವಾ ಕೈಂಕರ್ಯವೂ ಸಮಾಜಕ್ಕೆ ದಾರಿದೀಪವಾಗಿದೆ..
ನಂಬಿದ ಭಕ್ತರಿಗೆ ಅಭಯ ನೀಡುವ.. ಸರಳತೆಯಲ್ಲೇ ಶ್ರೇಷ್ಠತೆಯನ್ನು ಕಾಣುವ.. ಸೇವೆಯನ್ನೇ ಬದುಕಿನ ಧ್ಯೇಯವನ್ನಾಗಿಸಿಕೊಂಡಿರುವ.. ಜಾತಿ-ಧರ್ಮ ಭೇದವಿಲ್ಲದೆ ಎಲ್ಲರನ್ನು ಸಮಾನತೆಯಿಂದ ಕಾಣುವ.. ಸಮಾಜದ ಒಳಿತಿಗಾಗಿ ಸದಾ ಶ್ರಮಿಸುತ್ತಿರುವ.. ತುಳುನಾಡಿನ ಸಂಸ್ಕøತಿ, ಪರಂಪರೆ ಹಾಗೂ ತುಳು ಭಾಷೆಯ ಬಗ್ಗೆ ಮಿಡಿಯುತ್ತಿರುವ..
ಆ ದಿವ್ಯ ಚೇತನವೇ..
ಒಡಿಯೂರು ಶ್ರೀಗಳು..!
ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರು.
ಆಗಸ್ಟ್ 8..
ಒಡಿಯೂರು ಶ್ರೀಗಳಿಗೆ ಇಂದು ಜನ್ಮದಿನದ ಸಂಭ್ರಮ.. ಅಸಂಖ್ಯಾತ ಭಕ್ತವೃಂದಕ್ಕೆ ಶ್ರೀಗಳ ಹುಟ್ಟುಹಬ್ಬವೇ ಭಕ್ತಿಯ ಮಹಾಸಂಗಮ.. ಗುರುಗಳ ಸೇವಾ ಕಾರ್ಯಗಳಿಗೆ ಶ್ರದ್ಧೆಯಿಂದ ನಮನ ಸಲ್ಲಿಸುವ ಸುದಿನ.. ಸಮಾಜಕ್ಕೆ ಮಾದರಿ ಹಾಗೂ ಆದರ್ಶಮಯ ಬದುಕನ್ನು ಸಾಗಿಸುತ್ತಿರುವ ಸ್ವಾಮೀಜಿಯವರ ಆಶೀರ್ವಾದ ಪಡೆಯುವ ಪುಣ್ಯದಿನ.
ಹಾಗಾಗಿಯೇ ಒಡಿಯೂರು ಕ್ಷೇತ್ರದಲ್ಲಿ ಭಕ್ತರು, ಗುರುಗಳ ಹುಟ್ಟುಹಬ್ಬವನ್ನು ಉತ್ಸವದಂತೆ ಆಚರಿಸುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವೂ ಶ್ರೀಗಳ ಆಶೀರ್ವಾದದೊಂದಿಗೆ, ಗ್ರಾಮೋತ್ಸವ ಹಾಗೂ ಗುರುವಂದನ ಸೇವಾ ಸಂಭ್ರಮದೊಂದಿಗೆ ಪರಮ ಪೂಜ್ಯರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ.
ಎಲ್ಲಿದೆ ಒಡಿಯೂರು ಕ್ಷೇತ್ರ..!
ಒಡಿಯೂರು..ಪರಶುರಾಮ ಸೃಷ್ಟಿಯ ಪುಣ್ಯಭೂಮಿಯ ಧಾರ್ಮಿಕ ಕ್ಷೇತ್ರ. ಪ್ರಕೃತಿಯ ರಮಣೀಯ ತಾಣದಲ್ಲಿರುವ ಆಧ್ಯಾತ್ಮಿಕ ಧಾಮ. ಧರ್ಮ, ಸಂಸ್ಕøತಿ, ಭಕ್ತಿ, ಸೇವೆ, ಆಚಾರ, ವಿಚಾರ, ನಂಬಿಕೆಯ ಪವಿತ್ರ ತಾಣ. ಶ್ರದ್ಧೆ, ನಿಷ್ಠೆ, ಭಕ್ತಿಯಿಂದ ನಂಬಿ ಬರುವ ಪ್ರತಿಯೊಬ್ಬರ ಮನಸ್ಸಿಗೆ ನೆಮ್ಮದಿಯ ಸ್ಪರ್ಶ ನೀಡುವ ಪುಣ್ಯ ಕ್ಷೇತ್ರ.
ಒಡಿಯೂರು ಅಂದ್ರೆ ಧಾರ್ಮಿಕ ಅಥವಾ ಆಧ್ಯಾತ್ಮಿಕ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಅಲ್ಲಿದೆ ಕರುನಾಡಿನ ಮತ್ತು ತುಳುನಾಡಿನ ಸಂಸ್ಕøತಿ ಮತ್ತು ಪರಂಪರೆಯ ಕಂಪು. ಅಲ್ಲಿ ಮಿಡಿಯುತ್ತಿದೆ ತುಳು ಭಾಷೆಯ ಇಂಪು. ಹಾಗೇ ಶ್ರದ್ಧೆ, ಭಕ್ತಿಯ ಭಾವನೆಯೂ ಇದೆ. ಸೇವೆಯ ಸಂಕಲ್ಪವಿದೆ. ಮಾನವೀಯತೆಯ ಸಂದೇಶವಿದೆ. ಹೀಗಾಗಿಯೇ ಒಡಿಯೂರು ಅಸಂಖ್ಯಾತ ಭಕ್ತರ ನಂಬಿಕೆಯ ನೆಲೆಯಾಗಿದೆ.
ಇನ್ನು, ಶಿಕ್ಷಣ, ಆರೋಗ್ಯ, ಸಹಕಾರಿ ಬ್ಯಾಂಕ್, ಸ್ವಸಹಾಯ ಗುಂಪು, ಗ್ರಾಮ ವಿಕಾಸ, ಬಾಲ ವಿಕಾಸ, ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳ ಮೂಲಕ ವಿವಿಧ ವರ್ಗಗಳ ಜನರ ಬದುಕಿಗೆ ಆಸರೆಯಾಗಿದೆ. ಶ್ರೀಗಳ ಆಶೀರ್ವಾದದಲ್ಲಿ ನೆಮ್ಮದಿ ಮತ್ತು ಪರಿಹಾರ ಕಾಣುವ ಭಕ್ತರಿಗೆ ಈ ಕ್ಷೇತ್ರವು ಶಾಂತಿಧಾಮವಾಗಿದೆ.
ಇಂತಹ ಪುಣ್ಯಕ್ಷೇತ್ರವು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿದೆ. ಈ ಕ್ಷೇತ್ರವನ್ನು ದಕ್ಷಿಣದ ಗಾಣಗಾಪುರ ಕರೆಯಲಾಗುತ್ತಿದೆ. ಶ್ರೀ ದತ್ತಾಂಜನೇಯ ಇಲ್ಲಿನ ಆರಾಧ್ಯಮೂರ್ತಿ. 1 ಅಡಿ 1 ಇಂಚು ಎತ್ತರದ ದತ್ತಾತ್ರೇಯರ ಸ್ಪಟಿಕ ವಿಗ್ರಹ ಮತ್ತು ಕೃಷ್ಣ ಶಿಲೆಯ 5 ಅಡಿ 4 ಇಂಚು ಎತ್ತರದ ಆಂಜನೇಯ ಸ್ವಾಮಿಯೇ ಇಲ್ಲಿನ ಆರಾಧ್ಯ ದೇವರು. ಬಲಮುರಿ ಗಣಪತಿ, ಪ್ರಸನ್ನ ಸ್ವರೂಪಿ ಶ್ರೀ ಮಹಾವಜ್ರಮಾತೆ, ಸುಬ್ರಹ್ಮಣ್ಯ ಸ್ವಾಮಿ, ಮೂಲ ರಾಮ ಮತ್ತು ಭದ್ರಕಾಳಿಯನ್ನು ಇಲ್ಲಿ ಆರಾಧಿಸಲಾಗುತ್ತಿದೆ.
ಒಡಿಯೂರು ಕ್ಷೇತ್ರದ ಇನ್ನೊಂದು ವಿಶೇಷತೆ ಅಂದ್ರೆ ಇಲ್ಲಿ, ಅತ್ತಿ, ನೆಲ್ಲಿ ಮತ್ತು ಪಾರಿಜಾತ ವೃಕ್ಷಗಳು ಪ್ರಾಕೃತಿಕವಾಗಿ ಹುಟ್ಟಿ ಬೆಳೆದಿವೆ. ಅತ್ತಿಮರದಲ್ಲಿ ಲಕ್ಷ್ಮೀ ನಾರಾಯಣ (ಇಲ್ಲಿ ದತ್ತನ ಸಾನ್ನಿಧ್ಯ), ಪಾರಿಜಾತದಲ್ಲಿ ಆಂಜನೆಯ ಸ್ವಾಮಿ ಹಾಗೂ ನೆಲ್ಲಿ ಮರದಲ್ಲಿ ವಿಷ್ಣುವಿನ ಸಾನ್ನಿಧ್ಯದ ಪ್ರತೀಕ ಎಂಬುದು ಇಲ್ಲಿನ ನಂಬಿಕೆಯಾಗಿದೆ.
ನಿತ್ಯಾನಂದ ಗುಹೆ, ಧರ್ಮಶಾಲೆ, ಜ್ಞಾನಮಂದಿರ, ಆಧ್ಯಾತ್ಮಿಕ
ಕೇಂದ್ರ, ಗೋಶಾಲೆಗಳನ್ನು ನಿರ್ಮಿಸಲಾಗಿದೆ. ಭಜನೆ, ಯಜ್ಞ, ಪೂಜೆ, ಅನ್ನದಾಸೋಹ ನಿರಂತರವಾಗಿ ನಡೆಯುತ್ತಿದೆ. ಶ್ರೀ ಗುರುದೇವದತ್ತ ಪೀಠದಲ್ಲಿ ಗುರುವಾರ, ಶನಿವಾರ ಮತ್ತು ಭಾನುವಾರ ಶ್ರೀಗಳು ಭಕ್ತರ ಸಂಕಷ್ಟಗಳನ್ನು ಆಲಿಸಿ ಪರಿಹಾರ ನೀಡುತ್ತಾರೆ.
ಶ್ರೀ ಗುರುದೇವಾನಂದ ಸ್ವಾಮೀಜಿಯವರ ಪೂರ್ವಾಶ್ರಮ ಹಿನ್ನೆಲೆ..!
ಸುಮಾರು 30 ವರ್ಷಗಳ ಹಿಂದೆ ಒಡಿಯೂರು ಕುಗ್ರಾಮವಾಗಿತ್ತು. ಅಭಿವೃದ್ಧಿಯ ಹೆಜ್ಜೆ ಗುರುತುಗಳಿಲ್ಲದ ಈ ನೆಲ, ಇಂದು ಧರ್ಮದ ಬೀಡಾಗಿದೆ. ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಮಾಜಮುಖಿ ಚಟುವಟಿಕೆಗಳ ಕೇಂದ್ರವಾಗಿದೆ. ಇದರ ಹಿಂದೆ ಒಡಿಯೂರು ಶ್ರೀಗಳ ದೂರದೃಷ್ಟಿ, ಸಂಕಲ್ಪ, ತ್ಯಾಗ ಮತ್ತು ನಿರಂತರ ಪರಿಶ್ರಮವಿದೆ. ಹಾಗಾಗಿಯೇ ಒಡಿಯೂರು ಎಂಬ ಹೆಸರು ಇಂದು ಜಗದಗಲ ಪಸರಿಸಿದೆ.
ಹೌದು, ಶ್ರೀಗಳ ಪೂರ್ವಾಶ್ರಮದ ಹೆಸರು ನಾರಾಯಣ. ಒಡಿಯೂರು ಪೆರ್ಗಡೆ ಶೆಟ್ರು ಮತ್ತು ಅಂತಕ್ಕ ದಂಪತಿಯ ಪುತ್ರ . ಒಬ್ಬ ಸಹೋದರ ಮತ್ತು ಸಹೋದರಿ. ಕೃಷಿ ಕುಟುಂಬದ ಹಿನ್ನೆಲೆ. ಆದ್ರೆ ಅವರಿಗೆ ಎಳವೆಯಲ್ಲೇ ಆಧ್ಯಾತ್ಮಿಕತೆಯ ಬಗ್ಗೆ ಆಕರ್ಷಣೆ ಇತ್ತು. ಪ್ರತಿಯೊಬ್ಬರ ಬದುಕಿನಲ್ಲೂ ಒಂದು ತಿರುವು ಇರುತ್ತದೆ. ಅದೇ ರೀತಿ ಇವರ ಬದುಕಿಗೂ ಒಂದು ತಿರುವು ಸಿಕ್ಕಿತ್ತು. ತನ್ನ ಸಹೋದರಿ ಅನಾರೋಗ್ಯದಿಂದ ಬಳಲುತ್ತಿರುವುದನ್ನು ನೋಡಿ ಅವರ ಮನಸ್ಸು ಪರಿವರ್ತನೆಗೊಂಡಿತ್ತು. ಆಗಲೇ ಅವರು ಜೀವನದ ಬಗ್ಗೆ ಗಂಭೀರವಾಗಿ ಯೋಚನೆ ಮಾಡಲು ಪ್ರಾರಂಭಿಸಿದ್ರು. ಆಗ ಗಣೇಶಪುರಿಯ ಭಗವಾನ್ ನಿತ್ಯಾನಂದ ಶ್ರೀಗಳ ಆಧ್ಯಾತ್ಮಿಕ ಜೀವನ ಅವರಿಗೆ ಪ್ರೇರಣೆ ನೀಡಿತ್ತು.
ಪ್ರೌಢ ಶಿಕ್ಷಣ ಮುಗಿಸಿದ ನಂತರ ಮಂಗಳೂರಿನಲ್ಲಿ ಮೂರು ವರ್ಷಗಳ ಕಾಲ ಒಬ್ಬ ವಕೀಲರ ಜೊತೆ ಕ್ಲರ್ಕ್ ಆಗಿ ಕೆಲಸ ಮಾಡಿದ್ದರು. ನಂತರ ಖಾಸಗಿ ಕಂಪೆನಿಯಲ್ಲೂ ಕೆಲಸ ಮಾಡಿದ್ದರು. ಆದ್ರೆ ಮನಸ್ಸು ಆಧ್ಯಾತ್ಮಿಕತೆಯತ್ತ ಸೆಳೆಯುತ್ತಿತ್ತು. ಹಾಗಾಗಿ ಅವರು ತನ್ನ ಗುರುವಿಗಾಗಿ ಹುಡುಕಾಟ ನಡೆಸಿದ್ದರು.
ಕೆಲವು ವರ್ಷ ಗಾಣಗಾಪುರದಲ್ಲಿ ಆಧ್ಯಾತ್ಮಿಕತೆಯಲ್ಲಿ ಸಾಧನೆ ಮಾಡಿದ್ರು. ಕೊನೆಗೆ ಪುಣೆಯ ದತ್ತ ಯೋಗಾಶ್ರಮದಲ್ಲಿ ಅವಧೂತ ಮುನಿ ವಿವೇಕಾನಂದರ ದರ್ಶನವಾಯ್ತು. ಅಲ್ಲಿ ದೀಕ್ಷೆ ಪಡೆದು ಗುರುದೇವಾನಂದ ಹೆಸರಿನೊಂದಿಗೆ ದೈವಿಕ ಜಗತ್ತಿಗೆ ಪ್ರವೇಶಿಸಿದ್ರು. ಅಲ್ಲಿಂದ ಅವಧೂತ ಪರಂಪರೆಯ ಪಥವನ್ನು ಹಿಡಿದು ಲೋಕ ಕಲ್ಯಾಣದ ಸೇವಾ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ.
ದತ್ತಾತ್ರೇಯ ಅಂದರೆ ಬ್ರಹ್ಮ, ವಿಷ್ಣು, ಶಿವ ಸ್ವರೂಪಿ. ಆಂಜನೇಯ ಅಂದ್ರೆ ಶಕ್ತಿಯ ಪ್ರತೀಕ. ಈ ನಂಬಿಕೆಯೊಂದಿಗೆ 15-2-1989ರಲ್ಲಿ ಒಡಿಯೂರಿನಲ್ಲಿ ಓಂ ಶ್ರೀ ವೀರಾಂಜನೆಯ ಸ್ವಾಮಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಬಳಿಕ ಶ್ರೀ ಗುರುದೇವದತ್ತ ಸಂಸ್ಥಾನವಾಗಿ ಭಕ್ತರ ಆರಾಧನಾ ಕ್ಷೇತ್ರವಾಗಿದೆ.
ಹುಟ್ಟೂರಿನಲ್ಲೇ ದೇಗುಲ ನಿರ್ಮಿಸಿ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಮಾಜಮುಖಿ ಸೇವೆಗಳ ಮಂತ್ರ ಪಠಿಸುವ ಆ ಅವಧೂತರೇ..
ಇಂದು ಒಡಿಯೂರಿನ ದೈವಿಕ ಶಕ್ತಿ. ಭಕ್ತರ ನಂಬಿಕೆಯ ಗುರೂಜಿ. ಸೇವಾ ಸಂಕಲ್ಪದ ಸಾಕಾರರೂಪ. ಸರ್ವರ ಸುಖ-ಶಾಂತಿಗಾಗಿ ಶ್ರಮಿಸುತ್ತಿರುವ ದಿವ್ಯ ಚೇತನ.
ಅಂದಿನ ನಾರಾಯಣ, ನಾರಾಯಣ ಸ್ವಾಮೀಜಿಯವರೇ ಇಂದಿನ ಒಡಿಯೂರು ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರು.
ಸನತ್ ರೈ
saakshatv.com
#ಒಡಿಯೂರುಶ್ರೀಗಳು #ಶ್ರೀಗುರುದೇವಾನಂದಸ್ವಾಮೀಜಿ #OdiurSri #GurudevanandaSwamiji #OdiuruKshetra #Guruvandana







