ಬೆಂಗಳೂರು: ರಾಜಧಾನಿಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ನಡೆಸಿದ ದಿಢೀರ್ ದಾಳಿ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಈ ಕಾರ್ಯಾಚರಣೆ ವೇಳೆ ಜೈಲಿನಲ್ಲಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಫೋನ್ ಪತ್ತೆಯಾಗಿರುವುದು ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ಈ ನಡುವೆ, ಈ ಹಠಾತ್ ಸಿಸಿಬಿ ದಾಳಿಯ ಹಿಂದಿನ ರೂವಾರಿ ಯಾರು ಎಂಬ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ ನೀಡಿದ್ದು, ಪರಪ್ಪನ ಅಗ್ರಹಾರದ ಮೇಲೆ ಸಿಸಿಬಿ ದಾಳಿ ಮಾಡಿಸಿದ್ದು ನಾನೇ ಎಂದು ಬಾಂಬ್ ಸಿಡಿಸಿದ್ದಾರೆ.
ಮುಖ್ಯಮಂತ್ರಿಗಳ ಅನುಮತಿ ಪಡೆದು ನಡೆಸಿದ ಬೃಹತ್ ಕಾರ್ಯಾಚರಣೆ
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಕಾರಾಗೃಹದ ಮೇಲೆ ದಾಳಿ ನಡೆಸಲು ಗೃಹ ಇಲಾಖೆಯ ಅಧಿಕೃತ ಅನುಮತಿ ಅಗತ್ಯವಿರುತ್ತದೆ. ಎರಡು ವಾರಗಳ ಹಿಂದೆ ನಾನೇ ಖುದ್ದಾಗಿ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆ. ಈ ವೇಳೆ ಜೈಲಿನಲ್ಲಿ ಕೆಲವು ಗಂಭೀರ ಲೋಪದೋಷಗಳು ಹಾಗೂ ಭದ್ರತಾ ಅಕ್ರಮಗಳು ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಅವರ ಅನುಮತಿ ಪಡೆದೇ ಸಿಸಿಬಿ ಅಧಿಕಾರಿಗಳಿಂದ ರೇಡ್ ಮಾಡಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಅಕ್ರಮಕ್ಕೆ ಸಾಥ್ ನೀಡಿದ ಅಧಿಕಾರಿಗಳ ಅಮಾನತಿಗೆ ಖಡಕ್ ಸೂಚನೆ
ದಾಳಿಯ ವೇಳೆ ಕೆಲ ಖೈದಿಗಳಿಗೆ ಅಕ್ರಮ ಸೌಲಭ್ಯ ನೀಡಲಾಗುತ್ತಿದ್ದುದು ಕಂಡುಬಂದಿದೆ. ಜೈಲಿನಲ್ಲಿನ ಕೆಲ ಅಧಿಕಾರಿಗಳು ತಮ್ಮ ಹಳೆಯ ಅಕ್ರಮ ಚಾಳಿಯನ್ನು ಇನ್ನೂ ಬಿಟ್ಟಿಲ್ಲ. ಸಿಸಿಬಿ ಅಧಿಕಾರಿಗಳು ನೀಡಿದ ನಿಖರ ಮಾಹಿತಿಯ ಆಧಾರದ ಮೇಲೆಯೇ ಈ ಕಾರ್ಯಾಚರಣೆ ನಡೆದಿದೆ. ಈ ಅಕ್ರಮ ಮತ್ತು ಲೋಪಗಳಿಗೆ ಸಹಕಾರ ನೀಡಿದ ಎಲ್ಲಾ ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತಕ್ಷಣವೇ ಅಮಾನತು ಮಾಡಲು ಸೂಚನೆ ನೀಡಿದ್ದೇನೆ. ಪ್ರಸ್ತುತ ಸ್ಥಳದಲ್ಲಿ ಮಹಜರು ಪ್ರಕ್ರಿಯೆ ನಡೆಯುತ್ತಿದ್ದು, ನಿಷೇಧಿತ ವಸ್ತುಗಳು ಯಾರ ಮೂಲಕ ಜೈಲಿನ ಒಳಗೆ ಹೋದವು ಮತ್ತು ಇದಕ್ಕೆ ಯಾರ ಬೆಂಬಲವಿತ್ತು ಎಂಬ ಕುರಿತು ಸಂಪೂರ್ಣ ತನಿಖೆ ನಡೆಯಲಿದೆ ಎಂದು ಹೇಳಿದರು.
ಕಾನೂನು ನಿಯಮದಂತೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ
ಅಧಿಕಾರಿಗಳ ಅಮಾನತು ಮತ್ತು ಸೇವೆಯಿಂದ ವಜಾಗೊಳಿಸುವ ಕುರಿತು ಮಾತನಾಡಿದ ಸಚಿವರು, ಜೈಲುಗಳಲ್ಲಿ ಇಂತಹ ಅಕ್ರಮಗಳು ಆಗಾಗ ನಡೆಯುತ್ತಿರುತ್ತವೆ. ಹಾಗಂತ ತಕ್ಷಣಕ್ಕೆ ಯಾರನ್ನೂ ನೇಣಿಗೆ ಹಾಕಲು ಸಾಧ್ಯವಿಲ್ಲ. ಯಾವುದೇ ಅಧಿಕಾರಿಯ ಮೇಲೆ ಕ್ರಮ ಜರುಗಿಸಲು ಅಥವಾ ಸೇವೆಯಿಂದ ಡಿಸ್ಮಿಸ್ ಮಾಡಲು ಸರ್ಕಾರಿ ಸೇವಾ ನಿಯಮಾವಳಿಗಳು ಹಾಗೂ ಕಾನೂನು ಮಾನದಂಡಗಳಿವೆ. ಅದರಂತೆಯೇ ನಾವು ಕೆಲಸ ಮಾಡಬೇಕಾಗುತ್ತದೆ. ನಾನು ಖಾತೆ ವಹಿಸಿಕೊಂಡು ಕೇವಲ 2 ತಿಂಗಳಿನಲ್ಲೇ ಇಷ್ಟೊಂದು ಪ್ರಮುಖ ದಾಳಿ ಮಾಡಿಸಿ, ಅಕ್ರಮ ತಡೆಯುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಂಡಿದ್ದೇನೆ ಎಂದು ತಿಳಿಸಿದರು.
ವಿಐಪಿ ಟ್ರೀಟ್‌ಮೆಂಟ್‌ಗೆ ಬ್ರೇಕ್, ಜಾಮರ್ ಡಿಜಿಟಲ್ ಆಡಿಟ್‌ಗೆ ಆದೇಶ
ಬಂಧಿಖಾನೆಯಲ್ಲಿ ಯಾರಿಗೂ ಯಾವುದೇ ಕಾರಣಕ್ಕೂ ವಿಐಪಿ ಟ್ರೀಟ್‌ಮೆಂಟ್ ನೀಡಬಾರದು ಎಂದು ಖಡಕ್ ಎಚ್ಚರಿಕೆ ನೀಡಿದ ಅವರು, ಜೈಲಿನಲ್ಲಿ ಜಾಮರ್‌ಗಳಿದ್ದರೂ ಕೆಲವು ಬ್ಯಾರಕ್‌ಗಳಲ್ಲಿ ಅವು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಜೈಲಿನ ಸಮಗ್ರ ಡಿಜಿಟಲ್ ವ್ಯವಸ್ಥೆಯ ಆಡಿಟ್‌ಗೆ ಆದೇಶಿಸಲಾಗಿದೆ. ಈ ಸಿಸಿಬಿ ದಾಳಿಯೇ ಅಕ್ರಮ ಎಸಗುವ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ನೀಡಿದ ದೊಡ್ಡ ಎಚ್ಚರಿಕೆಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.








