ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯವಾಗಿ ಸೈಲೆಂಟ್ ಆಗಿದ್ದಾರೆ, ಹೈಕಮಾಂಡ್ ನಡೆ ಹಾಗೂ ಮುಂಬರುವ ರಾಜಕೀಯ ಚಟುವಟಿಕೆಗಳ ಬಗ್ಗೆ ತೀವ್ರ ಆಲೋಚನೆಯಲ್ಲಿದ್ದಾರೆ ಎನ್ನುವ ಮಾತುಗಳಿಗೆ ಸ್ವತಃ ಸಿದ್ದರಾಮಯ್ಯ ಅವರೇ ಈಗ ತೆರೆ ಎಳೆದಿದ್ದಾರೆ. ತಮ್ಮ ಮೌನದ ಕುರಿತು ಹರಿದಾಡುತ್ತಿರುವ ವದಂತಿಗಳಿಗೆ ಬೆಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ತಮ್ಮದೇ ಖಡಕ್ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ತಾವು ಯಾವುದೇ ಕಾರಣಕ್ಕೂ ಸೈಲೆಂಟ್ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸ್ಥಾನಮಾನ ಬದಲಾದಾಗ ಮಾತಿನ ಪ್ರಮಾಣ ಬದಲಾಗುತ್ತದೆ
ಸುದ್ದಿಗಾರರ ಪ್ರಶ್ನೆಗಳಿಗೆ ಅತ್ಯಂತ ನೇರವಾಗಿ ಉತ್ತರಿಸಿದ ಸಿದ್ದರಾಮಯ್ಯ, ನಾನೇನೂ ಸೈಲೆಂಟ್ ಆಗಿಲ್ಲಪ್ಪಾ. ನಾನೀಗ ಮುಖ್ಯಮಂತ್ರಿಯಲ್ಲ, ಬರಿ ಎಂಎಲ್‌ಎ ಅಷ್ಟೇ. ಹಾಗಾಗಿ ಹೆಚ್ಚು ಮಾತನಾಡುತ್ತಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಇಡೀ ರಾಜ್ಯದ ಜವಾಬ್ದಾರಿ ನನ್ನ ಮೇಲಿತ್ತು. ಸರ್ಕಾರದ ನಿರ್ಧಾರಗಳು, ಅಭಿವೃದ್ಧಿ ಕಾರ್ಯಗಳು ಮತ್ತು ರಾಜ್ಯದ ಹಿತದೃಷ್ಟಿಯಿಂದ ನಿರಂತರವಾಗಿ ಮಾತನಾಡಬೇಕಾದ ಅನಿವಾರ್ಯತೆ ಇತ್ತು. ಆದರೆ ಈಗ ಆ ಮಟ್ಟದ ಆಡಳಿತಾತ್ಮಕ ಜವಾಬ್ದಾರಿಗಳಿಲ್ಲ. ಹಾಗಾಗಿ ಮಾತನಾಡುವುದು ಕಡಿಮೆಯಾಗಿದೆ. ಜವಾಬ್ದಾರಿ ಕಡಿಮೆಯಾದಾಗ ಮಾತನಾಡುವುದು ಕಡಿಮೆಯಾಗುವುದು ಸಹಜ. ಹಾಗೆಂದ ಮಾತ್ರಕ್ಕೆ ನಾನು ಸೈಲೆಂಟ್ ಆಗಿದ್ದೇನೆ ಎಂದು ಅರ್ಥವೇ ಎಂದು ಪ್ರಶ್ನಿಸಿದರು.
ನಾನು ಸಕ್ರಿಯವಾಗಿದ್ದೇನೆ ಎಂಬುದಕ್ಕೆ ಇವೇ ಸಾಕ್ಷಿ
ಹೆಚ್ಚು ಮಾತನಾಡದಿದ್ದರೆ ಸೈಲೆಂಟ್ ಆಗಿದ್ದಾರೆ ಎಂದು ವ್ಯಾಖ್ಯಾನಿಸುವುದು ತಪ್ಪು ಎಂದ ಮಾಜಿ ಸಿಎಂ, ತಾವು ಭಾಗವಹಿಸುತ್ತಿರುವ ಸಾರ್ವಜನಿಕ ಕಾರ್ಯಕ್ರಮಗಳ ಪಟ್ಟಿಯನ್ನೇ ಮಾಧ್ಯಮಗಳ ಮುಂದಿಟ್ಟರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ, ಇದು ಸೈಲೆಂಟಾ? ಶಾಸಕನಾಗಿ ಅಧಿವೇಶನದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದೇನೆ, ಸೈಲೆಂಟ್ ಆಗಿದ್ದರೆ ಅಧಿವೇಶನಕ್ಕೆ ಹೋಗುತ್ತಿದ್ದೆನಾ? ಇತ್ತೀಚೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದೇನೆ. ಇದೆಲ್ಲವೂ ಸೈಲೆಂಟ್ ಆಗಿರುವ ಲಕ್ಷಣವೇ ಎಂದು ಮಾರ್ಮಿಕವಾಗಿ ಪ್ರಶ್ನಿಸುವ ಮೂಲಕ ತಮ್ಮ ವಿರುದ್ಧದ ವದಂತಿಗಳನ್ನು ತಳ್ಳಿಹಾಕಿದರು.
ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ
ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಕೆಳಗಿಳಿದ ನಂತರ ರಾಜ್ಯ ರಾಜಕಾರಣದಲ್ಲಿ ಅವರ ಮುಂದಿನ ನಡೆ ಏನು ಎಂಬ ಕುರಿತು ಅನೇಕ ಊಹಾಪೋಹಗಳು ಹರಿದಾಡುತ್ತಿದ್ದವು. ಪಕ್ಷದ ಆಂತರಿಕ ವಿದ್ಯಮಾನಗಳು ಹಾಗೂ ವಿಪಕ್ಷಗಳ ಟೀಕೆಗಳಿಗೆ ಸಿದ್ದರಾಮಯ್ಯ ತಕ್ಷಣವೇ ಪ್ರತಿಕ್ರಿಯಿಸದಿರುವುದು ಈ ವದಂತಿಗಳಿಗೆ ಪುಷ್ಟಿ ನೀಡಿತ್ತು. ಆದರೆ, ಈಗ ತಾವು ಶಾಸಕನಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದೇನೆ, ಸುಮ್ಮನೆ ಅನಗತ್ಯವಾಗಿ ಮಾತನಾಡುವ ಅಗತ್ಯವಿಲ್ಲ ಎಂದು ಹೇಳುವ ಮೂಲಕ ತಮ್ಮ ವಿರೋಧಿಗಳಿಗೆ ಮತ್ತು ರಾಜಕೀಯ ವಿಶ್ಲೇಷಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ನಾನು ರಾಜಕೀಯವಾಗಿ ಎಂದಿನಂತೆಯೇ ಸಕ್ರಿಯನಾಗಿದ್ದೇನೆ ಎಂಬುದನ್ನು ಸಿದ್ದರಾಮಯ್ಯ ತಮ್ಮ ಈ ಮಾತಿನ ಮೂಲಕ ಪ್ರಕಟಿಸಿದ್ದಾರೆ.







