ಬೆಂಗಳೂರು: “ಮತ ಚಲಾಯಿಸುವುದು ಈ ದೇಶದ ಪ್ರಜೆಯ ಮೂಲಭೂತ ಹಕ್ಕು. ಆ ಹಕ್ಕನ್ನು ಚಲಾಯಿಸಲು ನಮ್ಮನ್ನು ಚುನಾವಣಾ ಆಯೋಗದ ಅಧಿಕಾರಿಗಳ ಮುಂದೆ ಭಿಕ್ಷೆ ಬೇಡುವ ಸ್ಥಿತಿಗೆ ತಳ್ಳಬೇಡಿ” ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಚುನಾವಣಾ ಆಯೋಗದ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಕಾಶ್ ರಾಜ್, ಚುನಾವಣಾ ಆಯೋಗವು ಸದ್ಯ ಕೈಗೊಂಡಿರುವ ವಿಶೇಶ ಮುಖ್ಯಾಂಶಗಳ ಪರಿಷ್ಕರಣೆ (SIR) ಪ್ರಕ್ರಿಯೆಯ ವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಚುನಾವಣಾ ಆಯೋಗ ಇಡೀ ದೇಶದ ಜನರಿಂದ ಪರೀಕ್ಷೆ ಬರೆಸುತ್ತಿದೆಯೇ? ಕರ್ನಾಟಕದಲ್ಲಿರುವ 5.54 ಕೋಟಿ ಮತದಾರರ ಮಾಹಿತಿಯನ್ನು ಕೇವಲ ಒಂದು ತಿಂಗಳ ಅಲ್ಪಾವಧಿಯಲ್ಲಿ ಪಡೆದುಕೊಳ್ಳಲು ಹೇಗೆ ಸಾಧ್ಯ? ಬಿಎಲ್‌ಒ (ಬೂತ್ ಮಟ್ಟದ ಅಧಿಕಾರಿಗಳು)ಗಳ ಮೇಲೆ ಏಕಾಏಕಿ ಯಾಕೆ ಇಷ್ಟೊಂದು ತೀವ್ರ ಒತ್ತಡ ಹೇರುತ್ತಿದ್ದೀರಿ? ಪ್ರಜೆಗಳು ತಮ್ಮ ಮತ ಹಕ್ಕನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳ ಕಚೇರಿಗಳ ಸುತ್ತ ದಿನವಿಡೀ ಅಲೆಯುವಂತೆ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿದರು.
ದೇಶದಲ್ಲಿ ಬದುಕಿಗಾಗಿ ವಲಸೆ ಹೋಗುವ ಬಡ ಸಮುದಾಯಗಳ ಸ್ಥಿತಿಯನ್ನು ಎತ್ತಿಹಿಡಿದ ನಟ, ನಾಗರಹೊಳೆ ಮತ್ತು ಬಂಡೀಪುರದ ಗಡಿ ಭಾಗದ ಜನರು ವರ್ಷದ ಆರು ತಿಂಗಳು ಕೇರಳಕ್ಕೆ ವಲಸೆ ಹೋಗುತ್ತಾರೆ. ಇತ್ತ ಉತ್ತರ ಕರ್ನಾಟಕದ ರೈತರು ಹಾಗೂ ದಿನಗೂಲಿ ನೌಕರರು ಬದುಕಿನ ಬಂಡಿ ಸಾಗಿಸಲು ಗೋವಾ, ಮಹಾರಾಷ್ಟ್ರ ಮುಂತಾದ ನೆರೆ ರಾಜ್ಯಗಳಿಗೆ ಗುಳೇ ಹೋಗುತ್ತಾರೆ. ಈ ಜನರಿಗೆ ಯಾವುದೇ ಮುನ್ಸೂಚನೆ ನೀಡದೆ, ಬಿಎಲ್‌ಒಗಳು ಮನೆಗೆ ಹೋದಾಗ ಲಭ್ಯವಿಲ್ಲ ಎಂಬ ಒಂದೇ ಕಾರಣಕ್ಕೆ ಮತಪಟ್ಟಿಯಿಂದ ಹೆಸರುಗಳನ್ನು ಡಿಲೀಟ್ ಮಾಡುವುದು ಎಷ್ಟು ಸರಿ? ಮನೆ ಸ್ಥಳಾಂತರಿಸಿದವರು ಅಥವಾ ಕೆಲಸಕ್ಕೆ ಹೋದವರು ಯಾವುದೇ ಅಪರಾಧಿಗಳಲ್ಲ. ಅವರು ಗುರು ಗ್ರಹಕ್ಕಾಗಲಿ ಅಥವಾ ಮಂಗಳ ಗ್ರಹಕ್ಕಾಗಲಿ ಹೋಗಿಲ್ಲ, ಇಲ್ಲೇ ದೇಶದೊಳಗೆ ಇದ್ದಾರೆ ಎಂದು ಗರಂ ಆದರು.
ಏಕಾಏಕಿ ಎಸ್‌ಐಆರ್ ತಂದು ಬಡ ಜನರ ಮತಹಕ್ಕನ್ನು ಕಸಿಯಲಾಗುತ್ತಿದೆ. ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸ್ಥಳಾಂತರಗೊಂಡವರಿಗೆ ನಮೂನೆ-8 ನೀಡಿ ಸರಿಪಡಿಸಬೇಕೇ ಹೊರತು, ಮತಪಟ್ಟಿಯಿಂದ ಅವರ ಹೆಸರನ್ನೇ ಸಂಪೂರ್ಣವಾಗಿ ತೆಗೆದುಹಾಕಬಾರದು. ಹೆಸರು ಡಿಲೀಟ್ ಮಾಡುವ ಮುನ್ನ ಪ್ರತಿಯೊಬ್ಬ ಮತದಾರನಿಗೂ ನೋಟಿಸ್ ನೀಡಬೇಕು. ಈ ಪ್ರಕ್ರಿಯೆಯ ಬಗ್ಗೆ ಆರು ತಿಂಗಳ ಮುಂಚೆಯೇ ಸಾರ್ವಜನಿಕವಾಗಿ ಅರಿವು ಮೂಡಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಚುನಾವಣಾ ಆಯೋಗ ತನ್ನ ಧೋರಣೆಯನ್ನು ತಕ್ಷಣವೇ ಬದಲಾಯಿಸಿಕೊಳ್ಳಬೇಕು. ಎಸ್‌ಐಆರ್ ಪ್ರಕ್ರಿಯೆಗೆ ಕನಿಷ್ಠ ಒಂದು ವರ್ಷದ ಕಾಲಾವಕಾಶ ನೀಡಬೇಕು. ಬಿಎಲ್‌ಒಗಳು ಭೇಟಿ ನೀಡಿದಾಗ ಸಿಗದ ವಲಸೆ ಕಾರ್ಮಿಕರಿಗೆ ಕನಿಷ್ಠ 3 ತಿಂಗಳ ಕಾಲಾವಕಾಶ ನೀಡಬೇಕು. ಈಗಾಗಲೇ ಡಿಲೀಟ್ ಮಾಡಲಾಗಿರುವ ಅರ್ಹ ಮತದಾರರನ್ನು ತಕ್ಷಣವೇ ಪಟ್ಟಿಗೆ ಮರುಸೇರ್ಪಡೆಗೊಳಿಸಬೇಕು. ಆಯೋಗವು ನಮ್ಮ ಬೇಡಿಕೆಗಳಿಗೆ ಸರಿಯಾಗಿ ಸ್ಪಂದಿಸದಿದ್ದರೆ, ರಾಜ್ಯಾದ್ಯಂತ ಜನಪರ ಹೋರಾಟ ತೀವ್ರಗೊಳಿಸುವುದರ ಜೊತೆಗೆ ನ್ಯಾಯಾಂಗ ಹೋರಾಟವನ್ನೂ ಆರಂಭಿಸುತ್ತೇವೆ ಎಂದು ಪ್ರಕಾಶ್ ರಾಜ್ ಎಚ್ಚರಿಕೆ ನೀಡಿದ್ದಾರೆ.







