ಪರಿಶಿಷ್ಟ ಜಾತಿಯ ಒಳಮೀಸಲಾತಿ ವರ್ಗೀಕರಣದ ಆಧಾರದ ಮೇಲೆ ಉಪಜಾತಿಗೆ ಅನುಗುಣವಾಗಿ ಜಾತಿ ಪ್ರಮಾಣಪತ್ರ ಪಡೆಯುವ ಪ್ರಕ್ರಿಯೆಯನ್ನು ಸರಳೀಕರಿಸಬೇಕು ಎಂದು ಎಂಎಲ್ಸಿ ಕೆ. ಶಿವಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಿಧಾನಮಂಡಲ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಜಾತಿ ಪ್ರಮಾಣಪತ್ರ ಪಡೆಯುವ ಸಂದರ್ಭದಲ್ಲಿ ಕಠಿಣ ನಿಯಮಗಳಿಂದ ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಉಪಜಾತಿಯನ್ನು ದೃಢೀಕರಿಸುವ ನೆಪದಲ್ಲಿ ಕಂದಾಯ ಅಧಿಕಾರಿಗಳು ಹಳೆಯ ದಾಖಲೆಗಳು, ವಂಶಾವಳಿ ಹಾಗೂ ಇತರೆ ಪುರಾವೆಗಳನ್ನು ಕೇಳುತ್ತಿದ್ದಾರೆ. ಇಂತಹ ದಾಖಲೆಗಳನ್ನು ಸಂಗ್ರಹಿಸಲು ಸಾಧ್ಯವಾಗದೆ ಹಲವು ಅರ್ಜಿದಾರರು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದರು.
ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳಿಗೆ ತೊಂದರೆ
ಜಾತಿ ಪ್ರಮಾಣಪತ್ರವು ಶಿಕ್ಷಣ ಪ್ರವೇಶ, ವಿದ್ಯಾರ್ಥಿವೇತನ ಹಾಗೂ ಸರ್ಕಾರಿ ಉದ್ಯೋಗ ಸೇರಿದಂತೆ ಹಲವು ಸಂದರ್ಭಗಳಲ್ಲಿ ಅಗತ್ಯವಾಗಿರುವುದರಿಂದ, ಪ್ರಮಾಣಪತ್ರ ಪಡೆಯುವ ಪ್ರಕ್ರಿಯೆ ಸರಳವಾಗಬೇಕು ಎಂದು ಎಂಎಲ್ಸಿ ಮನವಿ ಮಾಡಿದ್ದಾರೆ.
ಅಗತ್ಯ ದಾಖಲೆಗಳ ಆಧಾರದ ಮೇಲೆ ಸುಲಭವಾಗಿ ಜಾತಿ ಪ್ರಮಾಣಪತ್ರ ನೀಡುವ ವ್ಯವಸ್ಥೆ ರೂಪಿಸಿ, ಅನಗತ್ಯ ದಾಖಲೆಗಳ ಬೇಡಿಕೆಗೆ ಕಡಿವಾಣ ಹಾಕಬೇಕು ಎಂದು ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.








