ನಮ್ಮ ಊರು ನಮ್ಮ ಹೆಮ್ಮೆ ಅಭಿಯಾನದ ಯಶಸ್ವಿ ಹೆಜ್ಜೆಗಳು
ಮಾಡರಹಳ್ಳಿಯಲ್ಲಿ ಮೂಡಿಬಂದ ಜನಪರ ಕಾಳಜಿ
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ದೂರದೃಷ್ಟಿಯ ಕಲ್ಪನೆಗೆ ಜನರ ಸಾಥ್
ಮಂಡ್ಯ: ಆಗಸ್ಟ್ 18ರಂದು ಮೇಲುಕೋಟೆ ವಿಧಾನಸಭೆ ವ್ಯಾಪ್ತಿಯ ಮಾಡರಹಳ್ಳಿ ಗ್ರಾಮದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ದೂರದೃಷ್ಟಿಯ ಕಲ್ಪನೆಯಾದ “ನಮ್ಮ ಊರು ನಮ್ಮ ಹೆಮ್ಮೆ” ಕಾರ್ಯಕ್ರಮದಡಿ ಗ್ರಾಮಸ್ಥರ ಸಭೆಯು ಅತ್ಯಂತ ಅರ್ಥಪೂರ್ಣವಾಗಿ ಜರುಗಿತು. ತಮ್ಮ ಊರನ್ನು ಹೆಮ್ಮೆ ಪಡುವ ನಿಟ್ಟಿನಲ್ಲಿ ಸ್ವತಃ ಗ್ರಾಮಸ್ಥರೆ ಮಾಡಬೇಕಾದ ಕೆಲಸ ಕಾರ್ಯಗಳ ಕುರಿತು ಕಾರ್ಯತಂತ್ರಗಳನ್ನು ರೂಪಿಸಿ, ಸಮಸ್ಯೆಗಳು ಮತ್ತು ಅಭಿವೃದ್ಧಿಯ ರೂಪುರೇಷೆಗಳ ಕುರಿತು ಗ್ರಾಮಸ್ಥರೆಲ್ಲರೂ ಒಂದೆಡೆ ಸೇರಿ ಮುಕ್ತವಾಗಿ ಚರ್ಚಿಸಿದರು.
ಸಭೆಯ ಪ್ರಮುಖ ಮುಖ್ಯಾಂಶಗಳು:
ಶಾಲಾ ಅಭಿವೃದ್ಧಿ ಹಾಗೂ ಗ್ರಂಥಾಲಯ: ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಹೆಚ್ಚಿನ ಕೊಠಡಿಗಳನ್ನು ನಿರ್ಮಿಸುವುದು ಮತ್ತು ಸುಂದರ ಗ್ರಂಥಾಲಯವನ್ನು ಸ್ಥಾಪಿಸುವ ಕುರಿತು ಚರ್ಚಿಸಲಾಯಿತು.
ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯ: ಹೊಸ ರಸ್ತೆಯ ನಿರ್ಮಾಣದೊಂದಿಗೆ ನೀರು ಸರಾಗವಾಗಿ ಹರಿಯಲು ಸೂಕ್ತ ಚರಂಡಿ ವ್ಯವಸ್ಥೆಯನ್ನು ಕಲ್ಪಿಸುವುದಕ್ಕೆ ಒತ್ತು ನೀಡಲಾಯಿತು.
ಸಾವಯವ ಕೃಷಿಗೆ ಮರಳುವಿಕೆ: ಮಣ್ಣಿನ ಫಲವತ್ತತೆ ಮತ್ತು ಆರೋಗ್ಯ ಕಾಪಾಡಿಕೊಳ್ಳಲು ನಮ್ಮ ಹಿರಿಯರು ಅನುಸರಿಸುತ್ತಿದ್ದ ಹಳೆಯ ಸಾವಯವ ಕೃಷಿ ಪದ್ಧತಿಗಳನ್ನು ಮೈಗೂಡಿಸಿಕೊಳ್ಳುವ ಬಗ್ಗೆ ರೈತರು ಒಮ್ಮತ ವ್ಯಕ್ತಪಡಿಸಿದರು.
ಊರಿನ ಕೆರೆ ಮತ್ತು ಜೀವನಾಡಿ: ಗ್ರಾಮದ ಕೆರೆಯೊಂದಿಗೆ ಜನರ ಭಾವನಾತ್ಮಕ ನಂಟಿನ ಬಗ್ಗೆ ಸಭೆಯಲ್ಲಿ ವಿಶೇಷವಾಗಿ ಪ್ರಸ್ತಾಪಿಸಲಾಯಿತು. ಕೆರೆತುಂಬಿ ತುಳುಕಾಡುವಾಗ ಕಾಣುವ ಸೌಂದರ್ಯ ಮತ್ತು ಅದು ನಂಬಿಕೊಂಡಿರುವ ನೂರಾರು ರೈತರ ಜೀವನೋಪಾಯದ ಕುರಿತು ಜನತೆ ಮೆಲುಕು ಹಾಕಿದರು.
ಸವಾಲುಗಳು ಮತ್ತು ಮುಂದಿನ ಹೆಜ್ಜೆ: ಈ ವರ್ಷ ಮಳೆಯ ಕೊರತೆಯಿಂದ ಕೆರೆಯ ನೀರು ತಗ್ಗಿದ್ದು, ಕೆರೆಯ ಸುತ್ತಮುತ್ತಲಿನ ರೈತರ ಬೋರ್‌ವೆಲ್‌ಗಳು ಬತ್ತಲಾರಂಭಿಸಿರುವುದು ಆತಂಕ ಮೂಡಿಸಿದೆ. ಈ ಸಮಸ್ಯೆಯನ್ನು ಮೆಟ್ಟಿ ನಿಲ್ಲಲು ಮತ್ತು ಕೆರೆಯನ್ನು ಉಳಿಸಿಕೊಳ್ಳಲು ಊರಿನ ಜನರೆಲ್ಲರೂ ಸೇರಿ ವಿಶೇಷ ಸಮಿತಿಯೊಂದನ್ನು ರಚಿಸಿದ್ದು, ಕೆರೆ ಸಂರಕ್ಷಣೆಗೆ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.








