ಬೆಳಗಾವಿ : ಸಂಡೇ ಲಾಕ್ ಡೌನ್ ಗೆ ಕುಂದಾನಗರಿ ಬೆಳಗಾವಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಚೆನ್ನಮ್ಮ ವೃತ್ತ, ಅಶೋಕ ವೃತ್ತ ಹಾಗೂ ಸದಾಶಿವ ನಗರದ ಪ್ರಮುಖ ರಸ್ತೆ ಮಾರ್ಗದಲ್ಲಿ ಅನಗತ್ಯ ವಾಹನಗಳ ತಡೆಗೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದರೂ ಕೆಲ ಬೈಕ್ ಸವಾರರು ಅನಗತ್ಯವಾಗಿ ಸಂಚರಿಸುತ್ತಿದ್ದಾರೆ. ಅಗತ್ಯ ಸೇವೆಗೆ ತೆರಳುವವರ ಐಡಿ ಕಾರ್ಡ್ ಗಳನ್ನು ಪರಿಶೀಲನೆ ನಡೆಸಿ ರಸ್ತೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಇನ್ನು ಲಾಕ್ ಡೌನ್ ಹಿನ್ನೆಲೆ ನಗರದಲ್ಲಿ ಬಸ್, ಆಟೋಗಳ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ನಗರದ ಮುಖ್ಯ ಬಸ್ ನಿಲ್ದಾಣ ಸಂಪೂರ್ಣ ಖಾಲಿ ಖಾಲಿ ಆಗಿದೆ. ನಾಳೆ ಬೆಳಗ್ಗೆ 5 ಗಂಟೆಯವರೆಗೂ ಅಂಗಡಿ ಮುಂಗಟ್ಟು ಬಂದ್ ಆಗಿರಲಿವೆ. ಈಗಾಗಲೇ ಬೆಳಗಾವಿಯ ಗೋಕಾಕ್, ಮೂಡಲಗಿ, ಕಾಗವಾಡ, ನಿಪ್ಪಾಣಿ, ಅಥಣಿಯಲ್ಲಿ ಲಾಕ್ ಡೌನ್ ಮಾಡಲಾಗಿದ್ದು, ಬೈಲಹೊಂಗಲ, ಖಾನಾಪುರ, ಹುಕ್ಕೇರಿ ತಾಲೂಕಿನಲ್ಲೂ ಹಾಫ್ ಡೇ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.








