ನವದೆಹಲಿ: ದೇಶದಲ್ಲಿ ಮೀಸಲಾತಿ ಕುರಿತಾದ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಮೀಸಲಾತಿ ಪರವಾಗಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ. ಯಾರ ಒತ್ತಾಯಕ್ಕೂ ಮಣಿದು ಮೀಸಲಾತಿಯನ್ನು ರದ್ದುಪಡಿಸಲು ಸಾಧ್ಯವಿಲ್ಲ. ಇದು ಯಾರಿಗೂ ನೀಡುತ್ತಿರುವ ದಾನವಲ್ಲ, ಬದಲಾಗಿ ಸಂವಿಧಾನ ನೀಡಿರುವ ಹಕ್ಕು ಎಂದು ಅವರು ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಸಂವಿಧಾನ ನೀಡಿದ ರಕ್ಷಾಕವಚ ಮೀಸಲಾತಿ
ದೆಹಲಿಯ ಜಂತರ್ ಮಂತರ್ ನಲ್ಲಿ ಮೀಸಲಾತಿ ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿದ ಚಿರಾಗ್ ಪಾಸ್ವಾನ್, ಮೀಸಲಾತಿ ಎಂಬುದು ಯಾವುದೇ ಸರ್ಕಾರ ತನ್ನ ಇಚ್ಛೆಯಂತೆ ನೀಡುವ ಅಥವಾ ಕಿತ್ತುಕೊಳ್ಳುವ ಸವಲತ್ತು ಅಲ್ಲ. ತಲೆತಲಾಂತರಗಳಿಂದ ಸಾಮಾಜಿಕವಾಗಿ ಶೋಷಣೆಗೆ ಒಳಗಾದ ಮತ್ತು ಮುಖ್ಯವಾಹಿನಿಯಿಂದ ದೂರ ಉಳಿದ ಸಮುದಾಯಗಳನ್ನು ಮೇಲೆತ್ತಲು ಸಂವಿಧಾನ ಕಲ್ಪಿಸಿರುವ ಮಹತ್ತರ ಅವಕಾಶವಿದು. ಯಾರೋ ಕೇಳಿದ ತಕ್ಷಣ ಇದನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಸಾಮಾಜಿಕ ತಾರತಮ್ಯ ಇನ್ನೂ ಜೀವಂತವಾಗಿದೆ
ಸಮಾಜದಲ್ಲಿ ಮೀಸಲಾತಿ ಏಕೆ ಇಂದಿಗೂ ಅಗತ್ಯವಾಗಿದೆ ಎಂಬುದನ್ನು ವಿವರಿಸಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳು ಇಂದಿಗೂ ಅನೇಕ ಕಡೆಗಳಲ್ಲಿ ಸಾಮಾಜಿಕ ತಾರತಮ್ಯವನ್ನು ಎದುರಿಸುತ್ತಿವೆ. ಉತ್ತರಾಖಂಡದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಂಬಂಧಿಸಿದ ಘಟನೆಯನ್ನೇ ಉದಾಹರಣೆಯಾಗಿ ನೀಡಿದ ಅವರು, ದೊಡ್ಡ ನಾಯಕರೇ ಇಂತಹ ಪರಿಸ್ಥಿತಿ ಎದುರಿಸುತ್ತಿರುವಾಗ ಸಾಮಾನ್ಯ ಜನರ ಸ್ಥಿತಿ ಹೇಗಿರಬೇಡ? ಸಾಮಾಜಿಕ ನ್ಯಾಯವನ್ನು ಮತ್ತಷ್ಟು ಬಲಪಡಿಸುವ ಅವಶ್ಯಕತೆ ಇದೆಯೇ ಹೊರತು ಮೀಸಲಾತಿ ರದ್ದು ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ಸಂವಾದದ ಮೂಲಕ ಮನವೊಲಿಕೆ
ಮೀಸಲಾತಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಕುರಿತು ಮಾತನಾಡಿದ ಸಚಿವರು, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ. ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸುವ ಅವಶ್ಯಕತೆ ಇದೆ. ಮೀಸಲಾತಿಯ ನಿಜವಾದ ಉದ್ದೇಶ ಮತ್ತು ಅದರ ಅನಿವಾರ್ಯತೆಯನ್ನು ಅವರಿಗೆ ಮನವರಿಕೆ ಮಾಡಿಕೊಟ್ಟರೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ತೇಜಸ್ವಿ ಯಾದವ್ ಗೆ ಕಿವಿಮಾತು
ಬಿಹಾರದ ಆರ್ಥಿಕತೆಯ ಬಗ್ಗೆ ಟೀಕೆ ಮಾಡುತ್ತಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರಿಗೆ ತಿರುಗೇಟು ನೀಡಿದ ಚಿರಾಗ್ ಪಾಸ್ವಾನ್, ಕೇವಲ ಗಾಳಿಯಲ್ಲಿ ಆರೋಪ ಮಾಡುವುದಕ್ಕಿಂತ ವಿಧಾನಸಭೆಯಲ್ಲಿ ಸೂಕ್ತ ದಾಖಲೆಗಳೊಂದಿಗೆ ಅಂಕಿ ಅಂಶಗಳನ್ನು ಮಂಡಿಸಿ ಎಂದು ಸವಾಲು ಹಾಕಿದರು. ವಿರೋಧ ಪಕ್ಷ ಕೇವಲ ಟೀಕೆ ಮಾಡುವುದಕ್ಕೆ ಸೀಮಿತವಾಗಬಾರದು, ರಾಜ್ಯದ ಅಭಿವೃದ್ಧಿಗೆ ರಚನಾತ್ಮಕ ಸಲಹೆಗಳನ್ನು ನೀಡಬೇಕು. ಬಿಹಾರದಲ್ಲಿ ಈಗಿರುವ ಡಬಲ್ ಎಂಜಿನ್ ಸರ್ಕಾರ ರಾಜ್ಯದ ಆದಾಯ ಹೆಚ್ಚಿಸಲು ಮತ್ತು ಉದ್ಯೋಗ ಸೃಷ್ಟಿಗೆ ಬದ್ಧವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.







