ಬೆಂಗಳೂರು: ಅಧಿಕಾರದ ಮೇಲಿನ ಅತಿಯಾದ ವ್ಯಾಮೋಹದಿಂದ ದೇಶದ ವ್ಯವಸ್ಥೆಯನ್ನು ಹಾಳುಗೆಡವುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅತ್ಯಂತ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ್ದಾರೆ. ಇಂದಿನ ಯುವ ಪೀಳಿಗೆ ಅಥವಾ ಜೆನ್ ಝೀಗಳು ನಿಮ್ಮನ್ನು ಬೆನ್ನಟ್ಟಿ ಹೊಡೆಯುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಅವರು ಗುಡುಗಿದ್ದಾರೆ.
ಕೋಮು ವಿಷ ಬಿತ್ತಿದರೆ ಯುವ ಸಮೂಹ ಸುಮ್ಮನಿರಲ್ಲ
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರ ಧೋರಣೆಯ ವಿರುದ್ಧ ಕೆಂಡಾಮಂಡಲರಾದರು. ಕೇವಲ ಅಧಿಕಾರ ಹಿಡಿಯುವ ಒಂದೇ ಉದ್ದೇಶದಿಂದ ದೇಶದುದ್ದಗಲಕ್ಕೂ ಕೋಮು ಭಾವನೆ ಬಿತ್ತುತ್ತಾ ಹೊರಟರೆ, ಈ ದೇಶದ ಜಾಗೃತ ಯುವಕರು ನಿಮ್ಮನ್ನು ಅಟ್ಟಾಡಿಸಿಕೊಂಡು ಬರುತ್ತಾರೆ. ಯುವಜನತೆಗೆ ಶಿಕ್ಷಣ ನೀಡುವುದು ಮತ್ತು ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುವುದನ್ನು ಬಿಟ್ಟು, ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿರುವುದು ಅಕ್ಷಮ್ಯ ಎಂದು ಎಚ್ಚರಿಸಿದರು.
ದೇಶದ್ರೋಹಿ ಪಟ್ಟ ಕಟ್ಟುವುದನ್ನು ಬಿಡಿ
ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಹಾಡುವವರನ್ನು ದೇಶದ್ರೋಹಿ ಎನ್ನುವುದು ಮತ್ತು ಸಮಾಜದ ಪರವಾಗಿ ಧ್ವನಿ ಎತ್ತುವ ಪ್ರಗತಿಪರ ಚಿಂತಕರಿಗೆ ಅರ್ಬನ್ ನಕ್ಸಲ್ ಎಂಬ ಹಣೆಪಟ್ಟಿ ಹಚ್ಚುವುದನ್ನು ಬಿಜೆಪಿ ಮೊದಲು ನಿಲ್ಲಿಸಬೇಕು. ದೇಶಭಕ್ತಿಯನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸಬೇಡಿ. ಜನರಿಗೆ ಈಗ ಬೇಕಾಗಿರುವುದು ಶಿಕ್ಷಣ ಮತ್ತು ಉದ್ಯೋಗವೇ ಹೊರತು ನಿಮ್ಮ ವಿಭಜಕ ನೀತಿಗಳಲ್ಲ ಎಂದು ಖರ್ಗೆ ಚಾಟಿ ಬೀಸಿದರು.
ಮನ್ ಕೀ ಬಾತ್ ಬಿಟ್ಟು ಜನ್ ಕೀ ಬಾತ್ ಹೇಳಲಿ
ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ ಮುಂದುವರಿಸಿದ ಖರ್ಗೆ, ಮೋದಿಯವರು ಕೇವಲ ತಮ್ಮ ಮನದ ಮಾತನ್ನು ಹೇಳುವ ಮನ್ ಕೀ ಬಾತ್ ಮಾಡುವುದನ್ನು ಬಿಟ್ಟು, ಜನರ ಸಮಸ್ಯೆಗಳನ್ನು ಕೇಳುವ ಜನ್ ಕೀ ಬಾತ್ ಆರಂಭಿಸಲಿ ಎಂದು ಸಲಹೆ ನೀಡಿದರು. ದೇಶದ ಶಿಕ್ಷಣ ಕ್ಷೇತ್ರದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಯುವಕರು ಉದ್ಯೋಗವಿಲ್ಲದೆ ದಂಗೆ ಏಳುತ್ತಿದ್ದಾರೆ. ಆದರೆ ಪ್ರಧಾನಿಗಳಿಗೆ ಇವೆಲ್ಲವೂ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬುಲೆಟ್ ಟ್ರೇನ್ ಕೇವಲ ಭಾಷಣಕ್ಕೆ ಸೀಮಿತ
ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಬುಲೆಟ್ ಟ್ರೇನ್ ಯೋಜನೆಯನ್ನು ಲೇವಡಿ ಮಾಡಿದ ಖರ್ಗೆ, ಬುಲೆಟ್ ಟ್ರೇನ್ ಕೇವಲ ಮೋದಿಯವರ ಭಾಷಣಗಳಲ್ಲಿ ಮಾತ್ರ ವೇಗವಾಗಿ ಓಡುತ್ತಿದೆ. ಆದರೆ ವಾಸ್ತವದಲ್ಲಿ ಮೋದಿ ಸರ್ಕಾರವು ನ್ಯಾಯ ಕೇಳುವ ವಿದ್ಯಾರ್ಥಿಗಳ ಮೇಲೆ ಅಸಲಿ ಬುಲೆಟ್ ಗಳನ್ನು ಹಾರಿಸುತ್ತಿದೆ. ಅನ್ಯಾಯ ಮತ್ತು ದೌರ್ಜನ್ಯಗಳು ಮಿತಿಮೀರಿದ್ದು, ಯುವ ಸಮೂಹ ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದೆ ಎಂದು ಆಕ್ರೋಶ ಹೊರಹಾಕಿದರು.








