ಬೆಂಗಳೂರು: ಕನ್ನಡ ಮಾಧ್ಯಮ ರಂಗದಲ್ಲಿ ಇದೇ ಮೊದಲ ಬಾರಿಗೆ ವಿಭಿನ್ನ ಪರಿಕಲ್ಪನೆಯೊಂದಿಗೆ ಮಾಧ್ಯಮ ಸ್ನೇಹಿತರನ್ನು ಒಂದೇ ವೇದಿಕೆಯಲ್ಲಿ ಒಂದುಗೂಡಿಸುವ ವಿನೂತನ ಕ್ರಿಕೆಟ್ ಟೂರ್ನಿಗೆ 9 ಡ್ರೀಮ್ಸ್ ಸಂಸ್ಥೆ ಮುನ್ನುಡಿ ಬರೆದಿದೆ.
ಇಷ್ಟು ದಿನ ಐಪಿಎಲ್, ಕೆಪಿಎಲ್ ಸೇರಿದಂತೆ ವಿವಿಧ ಕ್ರಿಕೆಟ್ ಟೂರ್ನಿಗಳಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿತ್ತು. ಅದೇ ಮಾದರಿಯಲ್ಲಿ ಇದೀಗ ಮಾಧ್ಯಮ ರಂಗದ ಆಟಗಾರರನ್ನು ಹರಾಜಿನ ಮೂಲಕ ಆಯ್ಕೆ ಮಾಡಿಕೊಂಡು ತಂಡಗಳನ್ನು ಕಟ್ಟುವ ಹೊಸ ಪ್ರಯೋಗಕ್ಕೆ 9 ಡ್ರೀಮ್ಸ್ ಸಂಸ್ಥೆ ಕೈ ಹಾಕಿದೆ.
ಸಾಮಾನ್ಯವಾಗಿ ಮಾಧ್ಯಮ ಕ್ರಿಕೆಟ್ ಟೂರ್ನಿಗಳು ಆಯಾ ಮಾಧ್ಯಮ ಸಂಸ್ಥೆಗಳ ನಡುವೆ ಅಥವಾ ವಿವಿಧ ವಿಭಾಗಗಳ ತಂಡಗಳ ನಡುವೆ ನಡೆಯುತ್ತವೆ. ಆದರೆ 9 ಡ್ರೀಮ್ಸ್ ಸಂಸ್ಥೆ ಆಯೋಜಿಸುತ್ತಿರುವ ಬಿ ಝೆಡ್ ಕಪ್ ಮೀಡಿಯಾ ಕ್ರಿಕೆಟ್ ಟೂರ್ನಿ ಇದಕ್ಕಿಂತ ಭಿನ್ನವಾಗಿದೆ. ಕನ್ನಡ ಮಾಧ್ಯಮ ರಂಗದ ಸ್ನೇಹಿತರನ್ನೇ ಹರಾಜು ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಿ, ಹೊಸ ಮಾದರಿಯ ಟೂರ್ನಿಗೆ ಚಾಲನೆ ನೀಡಲಾಗಿದೆ.
ಈ ಹರಾಜು ಪ್ರಕ್ರಿಯೆಯಲ್ಲಿ 150ಕ್ಕೂ ಹೆಚ್ಚು ಆಟಗಾರರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು. ಅಂತಿಮವಾಗಿ 84 ಮಂದಿ ಮಾಧ್ಯಮ ರಂಗದ ಆಟಗಾರರನ್ನು 12 ತಂಡಗಳ ಮಾಲೀಕರು ಹರಾಜಿನ ಮೂಲಕ ಖರೀದಿಸಿ ತಮ್ಮ ತಂಡಗಳಿಗೆ ಸೇರ್ಪಡೆ ಮಾಡಿಕೊಂಡಿದ್ದಾರೆ.
ಈ ಟೂರ್ನಿಯ ಮತ್ತೊಂದು ವಿಶೇಷವೆಂದರೆ ಪ್ರತಿ ತಂಡದಲ್ಲೂ ಮೂವರು ಮಹಿಳಾ ಆಟಗಾರ್ತಿಯರು ಕಣಕ್ಕಿಳಿಯಲಿದ್ದಾರೆ. ಇದರ ಜೊತೆಗೆ ಪೆÇಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳ ಆಪ್ತ ಸಹಾಯಕರು ಹಾಗೂ ಕಲಾವಿದರು ಕೂಡ ವಿವಿಧ ತಂಡಗಳ ಪರವಾಗಿ ಆಡಲಿದ್ದಾರೆ.
ಆರು ಓವರ್ಗಳ ಮಾದರಿಯಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಲಿದ್ದು, ಸೆಪ್ಟೆಂಬರ್ 5 ಮತ್ತು 6ರಂದು ಬೆಂಗಳೂರಿನ ವೆಟರ್ನರಿ ಕಾಲೇಜು ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ.
ನೈನ್ ಡ್ರೀಮ್ಸ್ ಹಾಗೂ ಸಿಎಂ ಕಪ್ ಆಯೋಜಕರ ಸಹಯೋಗದಲ್ಲಿ ನಡೆಯುತ್ತಿರುವ ಈ ಟೂರ್ನಿಯ ಟ್ರೋಫಿ ಮತ್ತು ಜೆರ್ಸಿಗಳನ್ನು ನಿಕಟಪೂರ್ವ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ವಿ. ಪ್ರಭಾಕರ್ ಅವರು, ಮಾಧ್ಯಮ ಸ್ನೇಹಿತರು ಸದಾ ಕೆಲಸದ ಒತ್ತಡದಲ್ಲಿರುತ್ತಾರೆ. ಕ್ರಿಕೆಟ್ ಆಟದ ಮೂಲಕ ಈ ಒತ್ತಡವನ್ನು ನಿವಾರಿಸಿಕೊಳ್ಳಲು ಇಂತಹ ಟೂರ್ನಿಗಳು ಉತ್ತಮ ವೇದಿಕೆಯಾಗಿವೆ. ಆಟದ ನೆಪದಲ್ಲಿ ಎಲ್ಲರೂ ಒಂದಾಗಿ ಸೇರಿ ಸ್ನೇಹ, ಸೌಹಾರ್ದತೆಯನ್ನು ಬೆಳೆಸಿಕೊಳ್ಳುವುದು ಈ ಟೂರ್ನಿಯ ಪ್ರಮುಖ ಉದ್ದೇಶವಾಗಿದೆ. ಆಟದಲ್ಲಿ ಸೋಲು-ಗೆಲುವು ಸಹಜವಾಗಿದ್ದು, ಕ್ರೀಡಾ ಸ್ಫೂರ್ತಿಯೇ ಮುಖ್ಯ ಎಂದು ಹೇಳಿದರು.
ನಂತರ ಮಾತನಾಡಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಮಾಧ್ಯಮ ಸಲಹೆಗಾರ ಲಕ್ಷ್ಮಿನಾರಾಯಣ, ಈ ಟೂರ್ನಿಯ ಪರಿಕಲ್ಪನೆ ಬ್ಯಾಡ್ಮಿಂಟನ್ ಕೋರ್ಟ್ನಲ್ಲಿ ಹುಟ್ಟಿಕೊಂಡಿತು. ಅಲ್ಲಿ ಚಿಗುರಿದ ಕನಸನ್ನು ಸಾಕಾರಗೊಳಿಸಿದವರು ಸಚಿವ ಜಮೀರ್ ಅಹ್ಮದ್ ಖಾನ್. ಟೂರ್ನಿಯ ಬಗ್ಗೆ ಪ್ರಸ್ತಾಪಿಸಿದ ಕ್ಷಣವೇ, “ಆಯೋಜನೆ ಮಾಡಿ, ನಾನು ನಿಮ್ಮೊಂದಿಗೆ ಸದಾ ಇರುತ್ತೇನೆ” ಎಂದು ಸಚಿವರು ಭರವಸೆ ನೀಡಿದ್ದರು ಎಂದು ಹೇಳಿದರು.
ಹಿಂದೆ ನೈನ್ ಡ್ರೀಮ್ಸ್ ತಂಡ ಆಯೋಜಿಸಿದ್ದ ಬ್ಯಾಡ್ಮಿಂಟನ್ ಟೂರ್ನಿ ಕ್ರೀಡಾ ಜಾತ್ರೆಯ ವಾತಾವರಣವನ್ನು ಸೃಷ್ಟಿಸಿತ್ತು. ಇದೀಗ ಈ ಕ್ರಿಕೆಟ್ ಟೂರ್ನಿಯಲ್ಲೂ ಅದೇ ರೀತಿಯ ಸ್ನೇಹ, ಸಂಭ್ರಮ ಮತ್ತು ಕ್ರೀಡಾ ಸ್ಫೂರ್ತಿಯ ವಾತಾವರಣ ನಿರ್ಮಾಣವಾಗಲಿ ಎಂದು ಅವರು ಆಶಿಸಿದರು.
ಸಮಾರಂಭದಲ್ಲಿ 9 ಡ್ರೀಮ್ಸ್ ಸಂಸ್ಥೆಯ ಸಂಸ್ಥಾಪಕ ಮಂಜುನಾಥ್, ಹಿರಿಯ ಪತ್ರಕರ್ತರಾದ ಪೆÇನ್ನಪ್ಪ, ಜೋಸೆಫ್ ಹೂವರ್, ಚಲನಚಿತ್ರ ನಿರ್ಮಾಪಕ ಭಾ. ಮ. ಹರೀಶ್ ಸೇರಿದಂತೆ ಹಿರಿಯ ಪತ್ರಕರ್ತರು ಹಾಗೂ ಮಾಧ್ಯಮ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು.
ಟೂರ್ನಿಯಲ್ಲಿ ಭಾಗವಹಿಸುವ ತಂಡಗಳು
ವಿನಿಷಾ ವಾರಿಯರ್ಸ್
ಬಿಎಸ್ ಬುಲ್ಸ್
ಅರುಣ್-ವಿನಯ ಸ್ಟ್ರೈಕರ್ಸ್
ಅರವಿಂದ್ ಅವೆಂಜರ್ಸ್
ಡಿವೈನ್ ವಂಡರ್ಸ್ ವಾರಿಯರ್ಸ್
ಬಿ ಝೆಡ್ ವಾರಿಯರ್ಸ್
ಪೆÇ್ರ ವಿನ್ ಪ್ರೈಡ್ಸ್
ಪ್ರತಿಧ್ವನಿ ಚಾಲೆಂಜರ್ಸ್
ಟೀಮ್ ಅಪ್ಪು
ಟೀಮ್ ಪರ್ವಮ್
ದೇವು ಬ್ಯಾಟಲರ್ಸ್
ನಂದಿ ಬ್ಲಾಸ್ಟರ್ಸ್








