ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಒಂದು ನೊಂದಾಯಿತ ಸಂಸ್ಥೆಯಲ್ಲ ಎಂದು ಪುನರುಚ್ಚರಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಸಂಘಟನೆಯನ್ನು ಕಾನೂನಾತ್ಮಕ ಚೌಕಟ್ಟಿಗೆ ತರುವಂತೆ ಬಹಿರಂಗ ಸವಾಲು ಹಾಕಿದ್ದಾರೆ. ಅಷ್ಟೇ ಅಲ್ಲದೆ, ಆರ್ಎಸ್ಎಸ್ ನೊಂದಣಿಗೆ ಬೇಕಾಗುವ ಶುಲ್ಕವನ್ನು ನಾನೇ ಭರಿಸುತ್ತೇನೆ ಎಂದು ಹೇಳುವ ಮೂಲಕ ಹೊಸ ರಾಜಕೀಯ ಸಂಚಲನ ಮೂಡಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್ಎಸ್ಎಸ್ ವಿರುದ್ಧ ಯಾವುದೇ ಪ್ರಕರಣಗಳಿಲ್ಲ ಎಂದು ಸರ್ಕಾರ ಹೇಳಿರುವುದಕ್ಕೆ ಅಸಲಿ ಕಾರಣವೇ ನೊಂದಣಿಯ ಕೊರತೆ. ನೊಂದಣಿಯೇ ಇಲ್ಲದ ಸಂಘಟನೆಯ ಮೇಲೆ ಕೇಸ್ ದಾಖಲಿಸುವುದು ಹೇಗೆ? ಕಾನೂನುಬದ್ಧವಾಗಿ ಅಸ್ತಿತ್ವದಲ್ಲಿಲ್ಲದ ಸಂಸ್ಥೆಯನ್ನು ನಿಷೇಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮೊದಲು ಸಂಘಟನೆಯನ್ನು ನೊಂದಣಿ ಮಾಡಿಸಿ, ಕಾನೂನಿನ ಚೌಕಟ್ಟಿನೊಳಗೆ ಬನ್ನಿ. ನೀವು ಸಂವಿಧಾನ ಅಥವಾ ಎಲ್ಲರಿಗಿಂತ ದೊಡ್ಡವರಲ್ಲ ಎಂದು ವಾಗ್ದಾಳಿ ನಡೆಸಿದರು.
ಆರ್ಎಸ್ಎಸ್ ನೊಂದಣಿ ಮಾಡಿಸಲು ಆಸಕ್ತಿ ತೋರಿದರೆ, ಕರ್ನಾಟಕದ ಎಲ್ಲಾ ಶಾಖೆಗಳ ನೊಂದಣಿ ಶುಲ್ಕವನ್ನು ನನ್ನ ಶಾಸಕರ ಅನುದಾನ ಅಥವಾ ಸ್ವಂತ ಸಂಬಳದಿಂದ ಪಾವತಿಸಲು ಸಿದ್ಧನಿದ್ದೇನೆ. ಬೇಕಿದ್ದರೆ ಇಡೀ ದೇಶಾದ್ಯಂತ ಇರುವ ಸಂಘಟನೆಯ ನೊಂದಣಿಗೂ ಆರ್ಥಿಕ ನೆರವು ನೀಡುತ್ತೇನೆ ಎಂದು ವ್ಯಂಗ್ಯವಾಡಿದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಮಾಜಿ ಸಿಎಂ ಯಡಿಯೂರಪ್ಪ ಅವರಂತಹ ಪ್ರಭಾವಿ ನಾಯಕರು ಆರ್ಎಸ್ಎಸ್ನಿಂದ ಬಂದವರಾಗಿದ್ದರೂ, ಈವರೆಗೆ ಸಂಘಟನೆಯನ್ನು ಯಾಕೆ ನೊಂದಣಿ ಮಾಡಿಸಿಲ್ಲ ಎಂದು ಅವರು ಪ್ರಶ್ನಿಸಿದರು.
ತಮ್ಮ ಹೇಳಿಕೆಗಳಿಗೆ ಬಿಜೆಪಿ ನಾಯಕರು ನೀಡುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ಕಿಡಿಕಾರಿದ ಖರ್ಗೆ, ನನ್ನ ಮಾತುಗಳು ಅಪ್ರಸ್ತುತವಾಗಿದ್ದರೆ ಅವರು ಯಾಕೆ ಇಷ್ಟೊಂದು ತಲೆಕೆಡಿಸಿಕೊಳ್ಳುತ್ತಿದ್ದಾರೆ? ನನ್ನ ಮೇಲೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರೂ ಅದಕ್ಕೆ ಹೆದರುವುದಿಲ್ಲ. ಕಾನೂನು ಹೋರಾಟ ಮಾಡಲು ಮತ್ತು ನ್ಯಾಯಾಲಯದಲ್ಲಿ ಸಮರ್ಥವಾಗಿ ಉತ್ತರ ನೀಡಲು ನಾನು ಸಿದ್ಧನಿದ್ದೇನೆ ಎಂದು ಗುಡುಗಿದರು. ಈ ಹೇಳಿಕೆಯು ಈಗ ರಾಜ್ಯ ರಾಜಕಾರಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.








