ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ನಡೆದ ಮುಸ್ಲಿಂ ಸಮುದಾಯದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವ ಬಸವರಾಜ ರಾಯರೆಡ್ಡಿ ಅವರ ಮಾತುಗಳು ಈಗ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿವೆ. ಬೇರೆಲ್ಲಾ ಧರ್ಮಗಳಿಗಿಂತ ಇಸ್ಲಾಂ ಧರ್ಮವೇ ಅತ್ಯಂತ ಶ್ರೇಷ್ಠವಾದುದು ಎಂದು ಸಚಿವರು ಮುಕ್ತವಾಗಿ ಹೊಗಳಿದ್ದಾರೆ.
ನನಗೆ ಹಜ್ ಯಾತ್ರೆಗೆ ಹೋಗುವ ಹಂಬಲವಿದೆ
ಕಾರ್ಯಕ್ರಮದಲ್ಲಿ ಸಮಾಜವನ್ನು ಉದ್ದೇಶಿಸಿ ಮಾತನಾಡಿದ ರಾಯರೆಡ್ಡಿ, ತಮಗೆ ಪವಿತ್ರ ಹಜ್ ಯಾತ್ರೆಗೆ ಹೋಗಬೇಕೆಂಬ ಬಲವಾದ ಆಸೆ ಇದೆ ಎಂದು ಹೇಳಿದರು. ಆದರೆ ಅಲ್ಲಿಗೆ ಹೋಗಲು ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿರಬೇಕಾದ ನಿಯಮ ಇರುವುದರಿಂದ ತಮಗೆ ಅವಕಾಶ ಸಿಗುತ್ತಿಲ್ಲ ಎಂಬ ಬೇಸರ ವ್ಯಕ್ತಪಡಿಸಿದರು. ಮುಸ್ಲಿಂ ಧರ್ಮದ ಬಗ್ಗೆ ಸಮಾಜದಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕಿದೆ ಎಂದ ಸಚಿವರು, ಇದೇ ವೇಳೆ ತಾವು ಕುರಾನ್ ಅನ್ನು ಆಳವಾಗಿ ಅಧ್ಯಯನ ಮಾಡಲು ಸಿದ್ಧವಿರುವುದಾಗಿ ಘೋಷಿಸಿದರು.
ಮಠ ಮಂದಿರಗಳ ಭೇಟಿಗೆ ರಾಯರೆಡ್ಡಿ ನಿರಾಸಕ್ತಿ
ದೇವಸ್ಥಾನ ಮತ್ತು ಮಠಮಾನ್ಯಗಳಿಗೆ ಹೋಗುವುದರ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ನಾನು ಮಠಗಳಿಗೆ ಮತ್ತು ದೇವಸ್ಥಾನಗಳಿಗೆ ಅಷ್ಟಾಗಿ ಹೋಗುವುದಿಲ್ಲ. ಸುಮ್ಮನೆ ಕೈ ಮುಗಿಯುವ ಬದಲು ಅವುಗಳ ಹಿಂದಿನ ಇತಿಹಾಸವನ್ನು ಅಭ್ಯಾಸ ಮಾಡಬೇಕು. ಅಂಧಾಭಿಮಾನಕ್ಕಿಂತ ಧರ್ಮದ ಮೂಲ ತತ್ವಗಳನ್ನು ಅರಿಯುವುದು ಮುಖ್ಯ ಎಂದು ಸಚಿವರು ಮಾರ್ಮಿಕವಾಗಿ ನುಡಿದರು.
ಇಸ್ಲಾಂ ಧರ್ಮದ ಸಾರ್ವತ್ರಿಕ ಮೌಲ್ಯಗಳನ್ನು ಮತ್ತು ಅಲ್ಲಿನ ಸಮಾನತೆಯನ್ನು ಶ್ಲಾಘಿಸಿದ ಸಚಿವರ ಈ ಹೇಳಿಕೆಗಳು ಸದ್ಯ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿವೆ.ರಾಯರೆಡ್ಡಿ ನೀಡಿರುವ ಈ ಹೇಳಿಕೆಗಳು ರಾಜಕೀಯ ವಲಯದಲ್ಲಿ ಯಾವ ರೀತಿಯ ತಿರುವು ಪಡೆಯಲಿವೆ ಎಂಬ ಕುತೂಹಲ ಮೂಡಿಸಿದೆ. ಇಸ್ಲಾಂ ಶ್ರೇಷ್ಠ ಮತ್ತು ಮಠಗಳಿಗೆ ಹೋಗಲ್ಲ ಎಂಬ ಸಚಿವರ ಹೇಳಿಕೆಗೆ ಈಗ ಪರ ವಿರೋಧದ ಅಲೆ ಎದ್ದಿದೆ.







