ಬೆಂಗಳೂರು: ರಾಜ್ಯ ರಾಜಕಾರಣದ ಇಬ್ಬರು ಪ್ರಮುಖ ನಾಯಕರ ನಡುವಿನ ವಾಗ್ವಾದ ಈಗ ತಾರಕಕ್ಕೇರಿದೆ. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಕುಮಾರಣ್ಣನಿಗೆ ನನ್ನ ವಿರುದ್ಧ ಮುಗಿಬೀಳಲು ಕೇಂದ್ರ ಸಚಿವ ಅಮಿತ್ ಶಾ ಏನಾದರೂ ವಿಶೇಷ ಟಾಸ್ಕ್ ನೀಡಿದ್ದಾರೆಯೇ ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದ್ದಾರೆ.
ನನ್ನ ಹೆಸರು ಬಿಜೆಪಿಯವರಿಗೆ ಉದ್ಯೋಗ ನೀಡುತ್ತಿತ್ತು
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಇಷ್ಟು ದಿನ ಬಿಜೆಪಿಯವರು ಸುದ್ದಿಯಲ್ಲಿರಲು ಅಥವಾ ರಾಜಕೀಯವಾಗಿ ಅಸ್ತಿತ್ವ ಉಳಿಸಿಕೊಳ್ಳಲು ಪ್ರಿಯಾಂಕ್ ಖರ್ಗೆ ಎಂಬ ಹೆಸರನ್ನು ಬಳಸಿಕೊಳ್ಳುತ್ತಿದ್ದರು. ಈಗ ಜೆಡಿಎಸ್ ನವರಿಗೂ ನನ್ನ ಹೆಸರು ಅಚ್ಚುಮೆಚ್ಚಿನದಾಗಿದೆ. ಕೆಪಿಎಸ್ ಸಿ ಅಕ್ರಮಗಳ ಬಗ್ಗೆ ಮಾತನಾಡಲು ಬಿಜೆಪಿ ನಾಯಕರಿಗೆ ನೈತಿಕತೆ ಇಲ್ಲದ ಕಾರಣ ಕುಮಾರಸ್ವಾಮಿ ಅವರನ್ನು ವೇದಿಕೆಯ ಮುಂಚೂಣಿಗೆ ತಂದು ಕೂರಿಸಿರಬಹುದು ಎಂದು ಲೇವಡಿ ಮಾಡಿದ್ದಾರೆ.
ಕೆಪಿಎಸ್ ಸಿ ಅಕ್ರಮದ ಬಗ್ಗೆ ಕೇಸರಿ ಮಿತ್ರರನ್ನೇ ಕೇಳಿ
ಕೆಪಿಎಸ್ ಸಿ ಅಧ್ಯಕ್ಷರ ನೇಮಕಾತಿ ಮತ್ತು ಅದರಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಕುಮಾರಸ್ವಾಮಿ ಅವರು ಮೊದಲು ತಮ್ಮ ಮೈತ್ರಿ ಪಕ್ಷದ ನಾಯಕರನ್ನೇ ಕೇಳಬೇಕು. ಆ ಹುದ್ದೆಯನ್ನು ಎಷ್ಟು ಕೋಟಿಗೆ ಮಾರಾಟ ಮಾಡಲಾಗಿತ್ತು, ನೇಮಕ ಮಾಡಿದ್ದು ಯಾರು ಮತ್ತು ಯಾರ ಸಂಬಂಧಿ ಎಂಬ ಸತ್ಯ ಜಗನ್ನಾಥ ಭವನದಲ್ಲೇ (ಬಿಜೆಪಿ ಕಚೇರಿ) ಇದೆ. ನಿಮ್ಮ ಅಡ್ಜಸ್ಟ್ ಮೆಂಟ್ ರಾಜಕಾರಣ ಈ ಸತ್ಯವನ್ನು ಹೊರಹಾಕಲು ಅಡ್ಡಿಯಾಗುತ್ತಿದೆಯೇ ಎಂದು ಖರ್ಗೆ ಖಾರವಾಗಿ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಬಗ್ಗೆ ಬಿಜೆಪಿ ರೆಬೆಲ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಳಿ ಕೇಳಿದರೆ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ಟಾಂಗ್ ನೀಡಿದ್ದಾರೆ.
ಹಳೆಯ ಹಗರಣಗಳನ್ನು ನೆನಪಿಸಿದ ಸಚಿವರು
ಕುಮಾರಸ್ವಾಮಿ ಅವರ ಈ ಹಿಂದಿನ ಹೇಳಿಕೆಗಳನ್ನು ನೆನಪಿಸಿದ ಪ್ರಿಯಾಂಕ್ ಖರ್ಗೆ, ಈ ಹಿಂದೆ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ ನಾಯಕರೊಬ್ಬರ ವಿರುದ್ಧ ಮಾತನಾಡುವಾಗ ಅವರ ಸಂಬಂಧಿಕರಿಗೆ ಹಲವು ಕ್ಲಾಸ್ ಒನ್ ಹುದ್ದೆ ಕೊಡಿಸಿದ್ದೆ ಎಂದು ನೀವೇ ಹೇಳಿದ್ದಿರಿ. ಅಂದರೆ ಕೆಪಿಎಸ್ ಸಿಯಲ್ಲಿ ನೀವೂ ಪ್ರಭಾವ ಬೀರಿದ್ದೀರಿ ಎಂದಾಯಿತು. ನಿಮ್ಮ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದ 1998ರ ಕೆಎಎಸ್ ಅಧಿಕಾರಿಗಳ ನೇಮಕಾತಿ ಅಕ್ರಮವನ್ನು ರಾಜ್ಯದ ಜನತೆ ಇಂದಿಗೂ ಮರೆತಿಲ್ಲ ಎಂದು ಗುಡುಗಿದ್ದಾರೆ.
ನನ್ನ ಮೇಲೆ ಕೆಸರು ಎರಚುವ ಕುಮಾರಸ್ವಾಮಿ ಅವರ ಪ್ರಯತ್ನ ಸಫಲವಾಗುವುದಿಲ್ಲ. ನಿಮ್ಮೆಲ್ಲಾ ಸುಳ್ಳು ಆರೋಪಗಳಿಗೆ ನಾನು ವಾಸ್ತವಾಂಶಗಳ ಮೂಲಕವೇ ಉತ್ತರ ನೀಡುತ್ತೇನೆ. ನನ್ನ ವಿರುದ್ಧ ಟೀಕೆ ಮಾಡಲು ಬಿಜೆಪಿ ಕೊಟ್ಟಿರುವ ಸ್ಕ್ರಿಪ್ಟ್ ಓದುವುದನ್ನು ಬಿಟ್ಟು, ನಿಮ್ಮ ಅವಧಿಯಲ್ಲಿ ನಡೆದ ಅಕ್ರಮಗಳ ಬಗ್ಗೆ ನೀವು ಮೊದಲು ಜನರಿಗೆ ಸ್ಪಷ್ಟನೆ ನೀಡಬೇಕು ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ. ಈ ಮೂಲಕ ಮೈತ್ರಿಕೂಟ ಮತ್ತು ರಾಜ್ಯ ಸರ್ಕಾರದ ನಡುವಿನ ರಾಜಕೀಯ ಸಮರ ಹೊಸ ತಿರುವು ಪಡೆದುಕೊಂಡಿದೆ.








