ಬೆಂಗಳೂರು: ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ವಾಕ್ಸಮರ ಈಗ ಮರಿ ಹಾಗೂ ಹಿರಿ ಮಟ್ಟಕ್ಕೆ ತಲುಪಿದೆ. ಪ್ರಿಯಾಂಕ್ ಖರ್ಗೆ ಅವರನ್ನು ಪದೇ ಪದೇ ಮರಿ ಖರ್ಗೆ ಎಂದು ವ್ಯಂಗ್ಯವಾಡುತ್ತಿದ್ದ ಆರ್ ಅಶೋಕ್ ಅವರಿಗೆ ಸಚಿವರು ತಮ್ಮದೇ ಶೈಲಿಯಲ್ಲಿ ಖಡಕ್ ಕೌಂಟರ್ ನೀಡಿದ್ದಾರೆ. ಅಶೋಕ್ ಅವರ ಮಗನನ್ನೇ ಗುರಿಯಾಗಿಸಿಕೊಂಡು ಪ್ರಿಯಾಂಕ್ ಖರ್ಗೆ ಸರಣಿ ಪ್ರಶ್ನೆಗಳನ್ನು ಕೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ಅಶೋಕ್ ಅಣ್ಣಾ ಮರಿ ಅಶೋಕ್ ಬಗ್ಗೆ ಯಾವಾಗ ಉತ್ತರಿಸುತ್ತೀರಿ
ಸಾಮಾಜಿಕ ಜಾಲತಾಣದಲ್ಲಿ ಆರ್ ಅಶೋಕ್ ಅವರಿಗೆ ನೇರ ಸವಾಲು ಹಾಕಿರುವ ಪ್ರಿಯಾಂಕ್ ಖರ್ಗೆ, ಅಶೋಕ್ ಅಣ್ಣಾ ಆರ್‌ಎಸ್ಎಸ್ ಕುರಿತು ನಾನು ಕೇಳಿದ ಪ್ರಶ್ನೆಗಳ ಬಗ್ಗೆ ನೀವು ತುಂಬಾ ಚಿಂತಿತರಾದಂತಿದೆ. ಆದರೆ ನೀವು ಮೊದಲು ಉತ್ತರಿಸಬೇಕಾದ ಕೆಲವು ಪ್ರಮುಖ ಪ್ರಶ್ನೆಗಳಿವೆ. ನಿಮ್ಮ ಮಗ ಮರಿ ಅಶೋಕ್ ಏಕೆ ಇನ್ನೂ ಆರ್‌ಎಸ್ಎಸ್ ಗಣವೇಶ ಧರಿಸಿಲ್ಲ? ಮರಿ ಅಶೋಕ್ ಏಕೆ ಗೋಶಾಲೆಯಲ್ಲಿ ಗೋಮೂತ್ರ ಸೇವಿಸುತ್ತಿಲ್ಲ? ನಿಮ್ಮ ಮಗ ಇನ್ನೂ ಧರ್ಮರಕ್ಷಕನಾಗಿ ಯಾಕೆ ಬದಲಾಗಿಲ್ಲ? ಈ ಪ್ರಶ್ನೆಗಳಿಗೆ ಹಿರಿ ಅಶೋಕ್ ಅವರು ಯಾವಾಗ ಉತ್ತರ ಕೊಡುತ್ತಾರೆ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಬಿಜೆಪಿ ಅವಧಿಯ ಹಗರಣಗಳ ಬಗ್ಗೆ ಪ್ರಶ್ನೆಗಳ ಸುರಿಮಳೆ
ಕೇವಲ ವೈಯಕ್ತಿಕ ಟೀಕೆಗಳಿಗೆ ಸೀಮಿತವಾಗದ ಪ್ರಿಯಾಂಕ್ ಖರ್ಗೆ, ಬಿಜೆಪಿ ಆಡಳಿತಾವಧಿಯ ಹಗರಣಗಳ ಬಗ್ಗೆಯೂ ಆರ್ ಅಶೋಕ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಿವಶಂಕರಪ್ಪ ಸಾಹುಕಾರ್ ಬಗ್ಗೆ ನೀವು ಯಾವಾಗ ಮಾತನಾಡುತ್ತೀರಿ? ಬಸವರಾಜ ಕನ್ನಾಳೆ ಪ್ರಕರಣದ ಬಗ್ಗೆ ನಿಮ್ಮ ಮೌನ ಯಾವಾಗ ಮುರಿಯುತ್ತದೆ? ಎಂದು ಪ್ರಶ್ನಿಸಿರುವ ಅವರು, ಕೆಪಿಎಸ್‌ಸಿ ಸದಸ್ಯರು ಮತ್ತು ಅಧ್ಯಕ್ಷರ ನೇಮಕಾತಿಗಾಗಿ ಬಿಜೆಪಿ ನಾಯಕರಿಗೆ ಎಷ್ಟು ಕೋಟಿ ಹಣ ಸಂದಾಯವಾಗಿದೆ ಎಂಬ ಸತ್ಯವನ್ನು ಯಾವಾಗ ಬಿಚ್ಚಿಡುತ್ತೀರಿ ಎಂದು ಕೇಳಿದ್ದಾರೆ.
ನಿಮ್ಮ ಪಕ್ಷದವರ ಚಿತ್ರಗಳ ಬಗ್ಗೆ ಮಾತನಾಡಿ
ಬಿಜೆಪಿ ನಾಯಕರ ಕೆಲವು ವಿವಾದಿತ ಚಿತ್ರಗಳ ಬಗ್ಗೆ ಪ್ರಸ್ತಾಪಿಸಿರುವ ಸಚಿವರು, ನಿಮ್ಮದೇ ಪಕ್ಷಕ್ಕೆ ಸೇರಿದವರ ವಿವಾದಿತ ಚಿತ್ರಗಳ ಬಗ್ಗೆ ನೀವು ಯಾವಾಗ ಪ್ರತಿಕ್ರಿಯೆ ನೀಡುತ್ತೀರಿ? ನನ್ನನ್ನು ಮರಿ ಖರ್ಗೆ ಎಂದು ಕರೆಯುವ ಮೂಲಕ ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದೀರಿ. ಆದರೆ ಜನರ ಮುಂದಿರುವ ಈ ಗಂಭೀರ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ತೋರಿಸಿ ಎಂದು ಆರ್ ಅಶೋಕ್ ಅವರಿಗೆ ಸವಾಲು ಹಾಕಿದ್ದಾರೆ. ಈ ವಾಕ್ಸಮರವು ಈಗ ರಾಜ್ಯ ರಾಜಕಾರಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.







