ಬೆಂಗಳೂರು: ಶಸ್ತ್ರಸಜ್ಜಿತ ನಕ್ಸಲಿಸಂ ಗಿಂತಲೂ ಇಂದು ದೇಶವನ್ನು ಒಳಗಿನಿಂದಲೇ ನಶಿಸುವಂತೆ ಮಾಡುತ್ತಿರುವ ಬೌದ್ಧಿಕ ಅಥವಾ ದಿಮಾಗಿ ನಕ್ಸಲಿಸಂ ಅತ್ಯಂತ ಅಪಾಯಕಾರಿಯಾಗಿದೆ. ಈ ಅದೃಶ್ಯ ಶತ್ರುಗಳ ವಿರುದ್ಧ ಸಮಾಜದಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಅನಿವಾರ್ಯತೆ ಇದೆ ಎಂದು ಪ್ರಖರ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ಎಚ್ಚರಿಸಿದ್ದಾರೆ.
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ದಿಮಾಗಿ ನಕ್ಸಲಿಸಂ ಕುರಿತ ವಿಶೇಷ ಚರ್ಚಾಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶದ ಭದ್ರತಾ ವ್ಯವಸ್ಥೆಗೆ ಹೊಸ ರೂಪದ ಸವಾಲಾಗಿ ಪರಿಣಮಿಸಿರುವ ನಗರ ನಕ್ಸಲರ ಕಾರ್ಯವೈಖರಿಯನ್ನು ಅವರು ಈ ಸಂದರ್ಭದಲ್ಲಿ ಬಿಚ್ಚಿಟ್ಟರು.
ಹಿಂದೆ ಪಶುಪತಿನಾಥದಿಂದ ತಿರುಪತಿಯವರೆಗಿನ ರೆಡ್ ಕಾರಿಡಾರ್ ಪ್ರದೇಶದಲ್ಲಿ ನಕ್ಸಲರು ಶಸ್ತ್ರ ಹಿಡಿದು ಸಂಘರ್ಷದಲ್ಲಿ ತೊಡಗಿದ್ದರು. ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಈ ಶಸ್ತ್ರಸಜ್ಜಿತ ಹೋರಾಟದ ಪ್ರಭಾವ ಕುಗ್ಗಿದೆ. ಆದರೆ, ಇದೇ ಸಿದ್ಧಾಂತ ಈಗ ನಗರ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದು, ಸುಶಿಕ್ಷಿತ ವರ್ಗದವರ ಮುಖವಾಡ ಧರಿಸಿ ಹೊಸ ರೂಪದಲ್ಲಿ ಕಾರ್ಯಾಚರಿಸುತ್ತಿದೆ ಎಂದು ಅವರು ಪ್ರತಿಪಾದಿಸಿದರು.
ಸಾಮಾಜಿಕ ಜಾಲತಾಣಗಳ ಮೂಲಕ ದೇಶವಿರೋಧಿ ಚಿಂತನೆ ಬಿತ್ತುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ನಗರಗಳಲ್ಲಿರುವ ಕೆಲವರು ವ್ಯವಸ್ಥಿತವಾಗಿ ಸಾಮಾಜಿಕ ಜಾಲತಾಣಗಳ ಅಲ್ಗಾರಿದಂಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ಹಿಂದೂ ವಿಚಾರಧಾರೆಗಳನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ದೇಶದ ಸಾರ್ವಭೌಮತೆಗೆ ಧಕ್ಕೆ ತರುವಂತಹ ಬರಹಗಳಿಗೆ ಮತ್ತು ಪ್ರಚೋದನಾಕಾರಿ ವಿಚಾರಗಳಿಗೆ ಯೋಜನಾಬದ್ಧವಾಗಿ ಉತ್ತೇಜನ ನೀಡಲಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಇಂತಹ ಬೌದ್ಧಿಕ ಭಯೋತ್ಪಾದನೆಯನ್ನು ಹತ್ತಿಕ್ಕಲು ಯುವಜನತೆ ಮತ್ತು ಸಮಾಜದ ಪ್ರಜ್ಞಾವಂತ ನಾಗರಿಕರು ಎಚ್ಚೆತ್ತುಕೊಳ್ಳಬೇಕು. ದೇಶದ ಹಿತಾಸಕ್ತಿ ಕಾಪಾಡಲು ಇಂತಹ ಸಿದ್ಧಾಂತಗಳ ನೈಜ ಮುಖವನ್ನು ಬಯಲಿಗೆಳೆಯಬೇಕಿದೆ ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ, ರಾಷ್ಟ್ರಧರ್ಮ ಸಂಘಟನೆಯ ಸಂಸ್ಥಾಪಕ ಸಂತೋಷ್ ಕೆಂಚಂಬ ಸೇರಿದಂತೆ 150ಕ್ಕೂ ಅಧಿಕ ಗಣ್ಯರು ಮತ್ತು ರಾಷ್ಟ್ರಭಕ್ತರು ಉಪಸ್ಥಿತರಿದ್ದರು. ಸಮಕಾಲೀನ ಭಾರತ ಎದುರಿಸುತ್ತಿರುವ ಬೌದ್ಧಿಕ ಸವಾಲುಗಳ ಬಗ್ಗೆ ಗಂಭೀರ ಮಂಥನ ಈ ಸಭೆಯಲ್ಲಿ ನಡೆಯಿತು.








