ಮೈಸೂರು: ಜೆಡಿಎಸ್ ಹಿರಿಯ ಶಾಸಕ ಜಿ ಟಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನಡುವಿನ ಶೀತಲ ಸಮರ ಈಗ ಬಹಿರಂಗ ಸಂಘರ್ಷಕ್ಕೆ ತಿರುಗಿದೆ. ಕಳೆದ ಮೂರು ವರ್ಷಗಳಿಂದ ಜೆಡಿಎಸ್ ನಲ್ಲಿ ತಮಗೆ ಅವಮಾನವಾಗುತ್ತಿದೆ ಎಂದು ಆರೋಪಿಸಿರುವ ಜಿ ಟಿ ದೇವೇಗೌಡ, ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷಕ್ಕಿಂತ ವ್ಯಕ್ತಿಯೇ ಶಕ್ತಿಶಾಲಿ ಎಂಬ ಸಂದೇಶ ರವಾನಿಸಿದ್ದಾರೆ.
ಜೆಡಿಎಸ್ ನಲ್ಲಿ ನನಗೆ ಬೆಲೆ ಇಲ್ಲ
ಚಾಮುಂಡೇಶ್ವರಿ ಕ್ಷೇತ್ರದ ಜನರು ನಡೆಸಿದ ರಾಜಕೀಯ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಜಿ ಟಿ ದೇವೇಗೌಡ, ಪಕ್ಷದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಾನು ಜೆಡಿಎಸ್ ಶಾಸಕನಾಗಿದ್ದರೂ ಯಾವುದೇ ಪಕ್ಷದ ಕಾರ್ಯಕ್ರಮ ಅಥವಾ ಸಮಾವೇಶಗಳಿಗೆ ನನ್ನನ್ನು ಕರೆಯುತ್ತಿಲ್ಲ. ಸತತವಾಗಿ ನನಗೆ ಅವಮಾನ ಮಾಡಲಾಗುತ್ತಿದೆ. ನನ್ನ ಈ ನೋವಿಗೆ ಮತ್ತು ನನಗೆ ಆಗುತ್ತಿರುವ ಅವಮಾನಕ್ಕೆ ಕ್ಷೇತ್ರದ ಜನರೇ ಈ ಮೆರವಣಿಗೆಯ ಮೂಲಕ ಉತ್ತರ ನೀಡುತ್ತಿದ್ದಾರೆ ಎಂದು ಅವರು ಗುಡುಗಿದರು.
ಹೆಚ್ ಡಿ ಕುಮಾರಸ್ವಾಮಿಗೆ ನೇರ ಕೌಂಟರ್
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಭ್ಯರ್ಥಿ ಯಾರೇ ಇರಲಿ ಜನ ನನ್ನ ಮುಖ ನೋಡಿ ಮತ ಹಾಕುತ್ತಾರೆ ಎಂಬ ಹೆಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಜಿ ಟಿ ದೇವೇಗೌಡ ಖಡಕ್ ತಿರುಗೇಟು ನೀಡಿದ್ದಾರೆ. ಚಾಮುಂಡೇಶ್ವರಿಯಲ್ಲಿ ಪಕ್ಷ ಮುಖ್ಯವಲ್ಲ, ಇಲ್ಲಿ ಜಿ ಟಿ ದೇವೇಗೌಡ ಮಾತ್ರ ಮುಖ್ಯ. ನನ್ನ ವಿರುದ್ಧ ಎಂತಹ ಪ್ರಭಾವಿ ನಾಯಕರು ನಿಂತರೂ ಈ ಕ್ಷೇತ್ರದ ಜನ ನನ್ನ ಕೈ ಬಿಟ್ಟಿಲ್ಲ. ನಾನು ಹಿಂದೆ ಬಿಜೆಪಿಗೆ ಹೋದಾಗ ಜೆಡಿಎಸ್ ಮೂರನೇ ಸ್ಥಾನಕ್ಕೆ ಕುಸಿದಿತ್ತು ಎಂಬ ಕಹಿ ಸತ್ಯವನ್ನು ನೆನಪಿಸುವ ಮೂಲಕ ಕುಮಾರಸ್ವಾಮಿ ಅವರ ಭ್ರಮೆಯನ್ನು ಹಳಿಯುವಂತೆ ಮಾಡಿದರು.
ನಾನು ಏಕಾಂಗಿಯಲ್ಲ ಜನರಿದ್ದಾರೆ
ಕ್ಷೇತ್ರದ ಜನರ ಮೇಲೆ ತಮಗೆ ಅಪಾರ ನಂಬಿಕೆ ಇದೆ ಎಂದು ಹೇಳಿದ ಜಿಟಿಡಿ, ರಾಜಕೀಯವಾಗಿ ನನ್ನನ್ನು ಏಕಾಂಗಿ ಮಾಡಲು ಸಾಧ್ಯವಿಲ್ಲ. ಸಾಯುವ ತನಕ ಜನರ ಸೇವೆ ಮಾಡುತ್ತೇನೆ. ಮುಂದಿನ ಚುನಾವಣೆಯಲ್ಲಿ ಏನು ಮಾಡಬೇಕು ಎಂಬುದನ್ನು ಕ್ಷೇತ್ರದ ಜನರನ್ನೇ ಕೇಳಿ ಅವರ ಇಚ್ಛೆಯಂತೆ ನಿರ್ಧರಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ಜಿಟಿಡಿ ಅವರ ಈ ಹೇಳಿಕೆಗಳು ಜೆಡಿಎಸ್ ಪಾಳಯದಲ್ಲಿ ದೊಡ್ಡ ಕಂಪನ ಸೃಷ್ಟಿಸಿದ್ದು, ಮೈಸೂರು ಭಾಗದಲ್ಲಿ ಪಕ್ಷದ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.








