ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಸ್ವಚ್ಛತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಕಂದಾಯ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ನೀಡಿದ್ದ ಖಡಕ್ ಹೇಳಿಕೆಗೆ ಈಗ ಖ್ಯಾತ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರಿಂದ ದೊಡ್ಡ ಬೆಂಬಲ ವ್ಯಕ್ತವಾಗಿದೆ. ನಗರವನ್ನು ಸ್ವಚ್ಛವಾಗಿಡದಿದ್ದರೆ ಪೌರಕಾರ್ಮಿಕರ ಸೇವೆಯನ್ನು ಖಾಯಂಗೊಳಿಸುವ ಅಗತ್ಯವಿಲ್ಲ ಎಂಬ ಸಚಿವರ ನಿಲುವನ್ನು ಉದ್ಯಮಿ ಸಮರ್ಥಿಸಿಕೊಂಡಿದ್ದಾರೆ.
ಸಚಿವ ಕೃಷ್ಣಬೈರೇಗೌಡ ಅವರು ಹೊರಮಾವು, ಬಂಜಾರ ಲೇಔಟ್, ಅಗರ ಕೆರೆ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಸ್ವಚ್ಛತಾ ಕಾರ್ಯದ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಪೌರಕಾರ್ಮಿಕರ ಸಂಘಟನೆಗಳ ಪದಾಧಿಕಾರಿಗಳು ಸಚಿವರನ್ನು ಭೇಟಿ ಮಾಡಿ, ತಮ್ಮ ಸೇವೆಯನ್ನು ಸರ್ಕಾರಿ ನೌಕರಿಯಾಗಿ ಖಾಯಂಗೊಳಿಸಬೇಕು ಎಂದು ಮನವಿ ಸಲ್ಲಿಸಿದರು. ಆದರೆ, ಈ ಬೇಡಿಕೆಗೆ ಸಚಿವರು ತೋರಿದ ಪ್ರತಿಕ್ರಿಯೆ ಈಗ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ.
ಕೆಲಸ ಮಾಡದವರಿಗೆ ಖಾಯಂ ಭಾಗ್ಯವಿಲ್ಲ
ಪೌರಕಾರ್ಮಿಕರ ಬೇಡಿಕೆಯನ್ನು ತಳ್ಳಿಹಾಕಿದ ಸಚಿವರು, ಶೇಕಡಾ 30 ರಷ್ಟು ಕಾರ್ಮಿಕರು ಕೆಲಸಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ. ಕೆಲಸಕ್ಕೆ ಬಂದವರು ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುತ್ತಿಲ್ಲ. ಇದರಿಂದ ನಗರದ ರಸ್ತೆಗಳು ಕಸದ ತೊಟ್ಟಿಯಾಗುತ್ತಿವೆ ಮತ್ತು ಸಾರ್ವಜನಿಕರಿಂದ ನಾವು ಬೈಗುಳ ಕೇಳಬೇಕಾಗಿದೆ ಎಂದು ಅಸಮಾಧಾನ ಹೊರಹಾಕಿದರು. ನಗರವು ಗಬ್ಬೆದ್ದು ನಾರುತ್ತಿರುವಾಗ ಜವಾಬ್ದಾರಿಯುತವಾಗಿ ಕೆಲಸ ಮಾಡದವರನ್ನು ಖಾಯಂಗೊಳಿಸಲು ಹೇಗೆ ಸಾಧ್ಯ ಎಂದು ಸಚಿವರು ಪ್ರಶ್ನಿಸಿದರು.
ಕಿರಣ್ ಮಜುಂದಾರ್ ಶಾ ಬೆಂಬಲ
ಸಚಿವರ ಈ ಹೇಳಿಕೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ಸಚಿವರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಪೌರಕಾರ್ಮಿಕರು ಮೊದಲು ಜವಾಬ್ದಾರಿಯುತವಾಗಿ ಕೆಲಸ ಮಾಡಲಿ, ನಗರ ಸ್ವಚ್ಛವಾಗಿರದಿದ್ದರೆ ಉದ್ಯೋಗ ಖಾಯಂ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಈ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಪರ ಮತ್ತು ವಿರೋಧದ ಚರ್ಚೆಗೆ ನಾಂದಿ ಹಾಡಿದೆ. ಕೆಲವರು ಸಚಿವರ ನಿಲುವನ್ನು ಬೆಂಬಲಿಸಿ ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದಿದ್ದರೆ, ಇನ್ನು ಕೆಲವರು ಅಲ್ಪ ವೇತನಕ್ಕೆ ದುಡಿಯುವ ಕಾರ್ಮಿಕರನ್ನು ಬಿಲಿಯನೇರ್ ಉದ್ಯಮಿಗಳು ಟೀಕಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹವಾನಿಯಂತ್ರಿತ ಕೊಠಡಿಗಳಲ್ಲಿ ಕೂತು ದುಡಿಯುವ ವರ್ಗವನ್ನು ಟೀಕಿಸುವ ಬದಲು, ಮೂಲಸೌಕರ್ಯ ಮತ್ತು ಗುತ್ತಿಗೆದಾರರ ಭ್ರಷ್ಟಾಚಾರವನ್ನು ಪ್ರಶ್ನಿಸಿ ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ.
ಇದೇ ವೇಳೆ, ಬೆಂಗಳೂರಿನ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾರ್ವಜನಿಕರಿಂದ ಹಲವು ಸಲಹೆಗಳು ಕೇಳಿಬಂದಿವೆ. ಹಸಿ ಕಸ ಮತ್ತು ಒಣ ಕಸ ವಿಂಗಡಣೆಯನ್ನು ಕಡ್ಡಾಯಗೊಳಿಸಬೇಕು, ಕಸ ಸಂಗ್ರಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವ ಮೂಲಕ ವ್ಯವಸ್ಥಿತ ಮಾರುಕಟ್ಟೆ ಸೃಷ್ಟಿಸಬೇಕು ಮತ್ತು ಉತ್ತಮ ಕೆಲಸ ಮಾಡುವ ಕಾರ್ಮಿಕರಿಗೆ ಮಾತ್ರ ಪ್ರೋತ್ಸಾಹ ನೀಡಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಸಚಿವರ ಈ ಕಠಿಣ ನಿಲುವು ನಗರದ ಸ್ವಚ್ಛತೆಯಲ್ಲಿ ಬದಲಾವಣೆ ತರುತ್ತದೆಯೇ ಅಥವಾ ಕಾರ್ಮಿಕರ ಹೋರಾಟಕ್ಕೆ ಕಾರಣವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.








