ಬೆಂಗಳೂರು: ಅಮೋಘ ಆಟ ಪ್ರದರ್ಶಿಸಿದ ಅರವಿಂದ ಅವೇಂಜರ್ಸ್ ತಂಡವು ಬಿ ಝೆಡ್ ಕಪ್ ಮೀಡಿಯಾ ಕ್ರಿಕೆಟ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
9ಡ್ರೀಮ್ಸ್ ಸಂಸ್ಥೆ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅರವಿಂದ ಅವೇಂಜರ್ಸ್ ತಂಡವು ದೇವ್ ಬ್ಯಾಟಲರ್ಸ್ ತಂಡವನ್ನು 21 ರನ್‌ಗಳ ಅಂತರದಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಜಿಕೆವಿಕೆ ಮೈದಾನದಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅರವಿಂದ ಅವೇಂಜರ್ಸ್ ತಂಡವು ನಿಗದಿತ 5 ಓವರ್‌ಗಳಲ್ಲಿ 59 ರನ್‌ಗಳ ಸವಾಲಿನ ಮೊತ್ತ ದಾಖಲಿಸಿತು.
60 ರನ್‌ಗಳ ಗುರಿ ಬೆನ್ನಟ್ಟಿದ ದೇವ್ ಬ್ಯಾಟಲರ್ಸ್ ತಂಡವು ಅರವಿಂದ ಅವೇಂಜರ್ಸ್ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿ, ನಿಗದಿತ 5 ಓವರ್‌ಗಳಲ್ಲಿ 38 ರನ್‌ಗಳಿಗೆ ಸೀಮಿತವಾಯಿತು. ಪರಿಣಾಮ ಅರವಿಂದ ಅವೇಂಜರ್ಸ್ ತಂಡ 21 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಚಾಂಪಿಯನ್ ಅರವಿಂದ ಅವೇಂಜರ್ಸ್ ಹಾಗೂ ರನ್ನರ್‌ಅಪ್ ದೇವ್ ಬ್ಯಾಟಲರ್ಸ್ ತಂಡಗಳಿಗೆ ಮಾಜಿ ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಹಾಗೂ ವಸತಿ ಸಚಿವರ ಮಾಧ್ಯಮ ಸಲಹೆಗಾರ ಲಕ್ಷ್ಮೀನಾರಾಯಣ್ ಅವರು ಟ್ರೋಫಿ ವಿತರಿಸಿದರು.
ಟೂರ್ನಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದವು. ಪತ್ರಕರ್ತರು, ಜನಪ್ರತಿನಿಧಿಗಳ ಮಾಧ್ಯಮ ಸಲಹೆಗಾರರು, ಪೊಲೀಸ್ ಅಧಿಕಾರಿಗಳು ಹಾಗೂ ಕಲಾವಿದರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಟೂರ್ನಿಯಲ್ಲಿ ಪಾಲ್ಗೊಂಡು ಕ್ರಿಕೆಟ್ ಆಟದ ಸೊಬಗನ್ನು ಹೆಚ್ಚಿಸಿದರು.








