ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅಹಿಂದ ವರ್ಗದ ಏಕೈಕ ಧ್ರುವತಾರೆ ಎಂದು ಬಿಂಬಿತವಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದ ಕೋಟೆಯಲ್ಲಿ ಈಗ ದೊಡ್ಡ ಬಿರುಕು ಕಾಣಿಸಿಕೊಂಡಿದೆ. ಭವಿಷ್ಯದ ಅಹಿಂದ ನಾಯಕ ಎಂದೇ ಗುರುತಿಸಿಕೊಂಡಿದ್ದ ಸಚಿವ ಸತೀಶ್ ಜಾರಕಿಹೊಳಿ ಮತ್ತು ಸಿದ್ದರಾಮಯ್ಯ ಅವರ ನೆರಳಿನಂತಿದ್ದ ಜಮೀರ್ ಅಹ್ಮದ್ ಖಾನ್ ಅವರನ್ನು ವ್ಯವಸ್ಥಿತವಾಗಿ ಸೈಡ್ ಲೈನ್ ಮಾಡಲಾಗಿದೆಯೇ ಎಂಬ ಪ್ರಶ್ನೆ ಈಗ ರಾಜಕೀಯ ಪಡಸಾಲೆಯಲ್ಲಿ ಸಂಚಲನ ಮೂಡಿಸಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಹಿಂದುಳಿದ ವರ್ಗಗಳ ಮಹಾ ಒಕ್ಕೂಟದ ಸಮಾವೇಶ ಈ ಅನುಮಾನಗಳಿಗೆ ಈಗ ಪುಷ್ಟಿ ನೀಡಿದೆ. ಈ ಬೃಹತ್ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ರಾರಾಜಿಸಿದರೆ, ಅವರ ಅತ್ಯಾಪ್ತರಾಗಿದ್ದ ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್ ಖಾನ್ ಮತ್ತು ಎಚ್ ಸಿ ಮಹದೇವಪ್ಪ ಅವರಿಗೆ ವೇದಿಕೆಯ ಮೇಲೆ ಜಾಗವಿರಲಿ, ಕನಿಷ್ಠ ಆಹ್ವಾನವೂ ಸಿಕ್ಕಿರಲಿಲ್ಲ ಎನ್ನುವುದು ಈಗ ಅಸಲಿ ಚರ್ಚೆಗೆ ಕಾರಣವಾಗಿದೆ.
ಬದಲಾದ ಸಮೀಕರಣ ಸಿದ್ದರಾಮಯ್ಯ ಸಿಟ್ಟಿಗೆ ಕಾರಣವಾಯಿತೇ ಆಪ್ತರ ನಡೆ
ಒಂದು ಕಾಲದಲ್ಲಿ ಸಿದ್ದರಾಮಯ್ಯ ಅವರ ಪರಮಾಪ್ತರಾಗಿದ್ದ ಸತೀಶ್ ಜಾರಕಿಹೊಳಿ ಅವರು ಮುಂದಿನ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಸ್ವತಃ ಯತೀಂದ್ರ ಸಿದ್ದರಾಮಯ್ಯ ಅವರೇ ಹೊಗಳಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸತೀಶ್ ಜಾರಕಿಹೊಳಿ ಅವರು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಜೊತೆಗೆ ಹೆಚ್ಚು ಆಪ್ತತೆ ಬೆಳೆಸಿಕೊಂಡಿರುವುದು ಸಿದ್ದರಾಮಯ್ಯ ಅವರ ಕೆಂಗಣ್ಣಿಗೆ ಗುರಿಯಾಗಿದೆ ಎನ್ನಲಾಗುತ್ತಿದೆ. ತಮ್ಮ ಕ್ಯಾಂಪ್ ನಲ್ಲಿದ್ದುಕೊಂಡೇ ವಿರೋಧಿ ಬಣದ ಜೊತೆಗೆ ಕೈಜೋಡಿಸಿದ ನಾಯಕರಿಗೆ ಪಾಠ ಕಲಿಸಲು ಸಿದ್ದರಾಮಯ್ಯ ತಂತ್ರ ರೂಪಿಸಿದ್ದಾರೆಯೇ ಎಂಬ ಮಾತುಗಳು ಕೇಳಿಬರುತ್ತಿವೆ.
ಆಹ್ವಾನವೇ ಇಲ್ಲ ಅಂದಮೇಲೆ ಹೋಗುವುದು ಹೇಗೆ ಸತೀಶ್ ಜಾರಕಿಹೊಳಿ
ತಮ್ಮನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿರುವ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಈ ಕಾರ್ಯಕ್ರಮಕ್ಕೂ ನನಗೂ ಸಂಬಂಧವಿಲ್ಲ, ಆಹ್ವಾನ ನೀಡದ ಜಾಗಕ್ಕೆ ನಾನು ಹೋಗುವುದಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ. ಅಹಿಂದ ಒಡೆಯಲು ನಮ್ಮ ಸುತ್ತಮುತ್ತಲೇ ಕೆಲವು ಜನರಿದ್ದಾರೆ, ಇದು ಎಷ್ಟು ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡೋಣ ಎಂದು ಹೇಳುವ ಮೂಲಕ ಹೊಸ ಸ್ಟ್ರ್ಯಾಟಜಿ ರೂಪಿಸುವ ಸೂಚನೆಯನ್ನು ಜಾರಕಿಹೊಳಿ ನೀಡಿದ್ದಾರೆ.
ಒಡಕು ಮೂಡಿಸುವವರ ಬಗ್ಗೆ ಎಚ್ಚರಿಕೆ
ಯತೀಂದ್ರ ಸಿದ್ದರಾಮಯ್ಯ ಅವರು ನನ್ನ ಪರವಾಗಿ ಮಾತನಾಡಿದ್ದಾರೆ ಎಂಬ ಸತ್ಯವನ್ನು ನೆನಪಿಸಿರುವ ಸತೀಶ್ ಜಾರಕಿಹೊಳಿ, ಪಕ್ಷದ ಒಳಗೆ ಒಡಕು ಮೂಡಿಸಲು ಶಕ್ತಿಗಳು ಕೆಲಸ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹಿರಿಯ ನಾಯಕರ ನಡುವಿನ ಈ ಶೀತಲ ಸಮರ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಅಹಿಂದ ವೋಟ್ ಬ್ಯಾಂಕ್ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.








