ಧಾರವಾಡ: ದೇಶಭಕ್ತಿಯ ಸಂಕೇತವಾದ ತಿರಂಗಾ ಯಾತ್ರೆಗೆ ಅಡ್ಡಿಪಡಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಆಕ್ರೋಶದ ಗುಡುಗು ಹಾಕಿದ್ದಾರೆ. ಬೆಂಗಳೂರಿನಲ್ಲಿ ಯಾತ್ರೆಗೆ ಅನುಮತಿ ನಿರಾಕರಿಸಿದ ಬೆನ್ನಲ್ಲೇ ತೀವ್ರವಾಗಿ ಪ್ರತಿಕ್ರಿಯಿಸಿರುವ ಅವರು,ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ನೇರ ಸವಾಲು ಹಾಕಿದ್ದು, ತಾಕತ್ತಿದ್ದರೆ ನಮ್ಮ ಮೇಲೆ ಎಫ್ಐಆರ್ ದಾಖಲಿಸಿ ಎಂದು ಘರ್ಜಿಸಿದ್ದಾರೆ.
ಬೆಂಗಳೂರಿನಲ್ಲಿ ತಿರಂಗಾ ಯಾತ್ರೆ ನಡೆಸಲು ಮುಂದಾದಾಗ ಪೊಲೀಸರು ಭದ್ರತೆಯ ನೆಪವೊಡ್ಡಿ ಅನುಮತಿ ನಿರಾಕರಿಸಿದ್ದರು. ಈ ಕ್ರಮವನ್ನು ಖಂಡಿಸಿ ಧಾರವಾಡದ ವಿವೇಕಾನಂದ ವೃತ್ತದಲ್ಲಿ ನಡೆದ ಬೃಹತ್ ತಿರಂಗಾ ಯಾತ್ರೆಯಲ್ಲಿ ಮಾತನಾಡಿದ ಸೂಲಿಬೆಲೆ, ಸರ್ಕಾರದ ಧೋರಣೆಯನ್ನು ಕಟುವಾಗಿ ಟೀಕಿಸಿದರು.
ರಾಜ್ಯದ ಮೂಲೆ ಮೂಲೆಯಲ್ಲೂ ತಿರಂಗಾ ಹಾರಾಡಲಿದೆ
ಬೆಂಗಳೂರಿನಲ್ಲಿ ನಮಗೆ ಅವಕಾಶ ಕೊಡದಿದ್ದರೆ ಏನಂತೆ? ನಾವು ರಾಜ್ಯದ ಪ್ರತಿಯೊಂದು ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ತಿರಂಗಾ ಯಾತ್ರೆ ನಡೆಸಿಯೇ ತೀರುತ್ತೇವೆ. ದೇಶಭಕ್ತಿಯನ್ನು ಸಾರುವ ಈ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ತಾಕತ್ತು ಯಾರಿಗೂ ಇಲ್ಲ. ಪೊಲೀಸರ ಮೂಲಕ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಬೇಕಿದ್ದರೆ ಕೇಸ್ ಹಾಕಿ, ಜೈಲಿಗಾದರೂ ಕಳುಹಿಸಿ, ನಾವು ಮಣಿಯುವುದಿಲ್ಲ ಎಂದು ಅವರು ಗುಡುಗಿದ್ದಾರೆ.
ನಮ್ಮದು ದೇಶಪ್ರೇಮಿ ಜೆನ್ ಜಿ ಗಳ ಹೋರಾಟ
ನಮ್ಮ ಈ ಯಾತ್ರೆಯು ಯಾವುದೇ ರಾಜಕೀಯ ಉದ್ದೇಶ ಹೊಂದಿಲ್ಲ ಅಥವಾ ಸಮಾಜದಲ್ಲಿ ಯಾರಿಗೂ ತೊಂದರೆ ಉಂಟು ಮಾಡುವ ಉದ್ದೇಶವನ್ನೂ ಹೊಂದಿಲ್ಲ. ಇದು ಕೇವಲ ಭಾರತದ ಅಸ್ಮಿತೆಯನ್ನು ಎತ್ತಿ ಹಿಡಿಯುವ ಕಾರ್ಯಕ್ರಮವಾಗಿದೆ. ನಮ್ಮದು ಕಾಕ್ರೋಚ್ ಗಳಂತಹ ಹೋರಾಟವಲ್ಲ, ನಾವು ಹೆಮ್ಮೆಯ ದೇಶಪ್ರೇಮಿ ಜೆನ್ ಜಿ ಗಳು ಎಂದು ಯುವಜನತೆಗೆ ಕರೆ ನೀಡಿದರು.
ಬೆಂಗಳೂರಿನಲ್ಲಿ ಅನುಮತಿ ನಿರಾಕರಿಸಿದ್ದು ಬಲಪಂಥೀಯ ಸಂಘಟನೆಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ದೇಶಭಕ್ತಿಯ ಯಾತ್ರೆಗೆ ಭದ್ರತೆಯ ಕೊರತೆಯ ನೆಪ ಹೇಳುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಎದ್ದಿದ್ದವು. ಈಗ ಸೂಲಿಬೆಲೆ ಅವರ ಈ ಬಹಿರಂಗ ಸವಾಲು ಸರ್ಕಾರ ಮತ್ತು ಯುವ ಬ್ರಿಗೇಡ್ ನಡುವಿನ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದೆ. ಸಚಿವರು ಈ ಸವಾಲನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಈಗ ಕುತೂಹಲ ಮೂಡಿಸಿದೆ.







