ಧಾರವಾಡ: ಪ್ರೀತಿಗೆ ಜಾತಿ ಧರ್ಮದ ಹಂಗಿಲ್ಲ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. ಕಳೆದ ಒಂದು ವರ್ಷದಿಂದ ಲವ್ ಜಿಹಾದ್ ಆರೋಪ ಮತ್ತು ತೀವ್ರ ವಿರೋಧ ಎದುರಿಸುತ್ತಿದ್ದ ಉತ್ತರ ಕರ್ನಾಟಕದ ಖ್ಯಾತ ಯೂಟ್ಯೂಬರ್ ಖ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ ಮತ್ತು ಗಾಯತ್ರಿ ದಂಪತಿಯ ಬಾಳಿನಲ್ಲಿ ಈಗ ಹೊಸ ಬೆಳಕು ಮೂಡಿದೆ. ಮಗುವಿನ ಜನನದ ಸಂಭ್ರಮವು ಮುನಿಸಿಕೊಂಡಿದ್ದ ಕುಟುಂಬಗಳನ್ನು ಒಂದು ಮಾಡಿದ್ದು, ಇಷ್ಟು ದಿನ ದ್ವೇಷ ಕಾರುತ್ತಿದ್ದವರು ಈಗ ಪ್ರೀತಿಯಿಂದ ಒಂದಾಗಿದ್ದಾರೆ.
ಲವ್ ಜಿಹಾದ್ ಆರೋಪಕ್ಕೆ ಬಿದ್ದಿತ್ತು ಬ್ರೇಕ್
ಯೂಟ್ಯೂಬ್ ಕಾಮಿಡಿ ವಿಡಿಯೋಗಳ ಮೂಲಕ ಮನೆಮಾತಾಗಿದ್ದ ಖ್ವಾಜಾ ಶಿರಹಟ್ಟಿ, ಧಾರವಾಡದ ಗಾಯತ್ರಿ ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಕಳೆದ ವರ್ಷ ಈ ಮದುವೆಯು ದೊಡ್ಡ ಮಟ್ಟದ ವಿವಾದ ಸೃಷ್ಟಿಸಿತ್ತು. ಗಾಯತ್ರಿ ಪೋಷಕರು ಇದು ಲವ್ ಜಿಹಾದ್ ಎಂದು ಆರೋಪಿಸಿ, ಖ್ವಾಜಾ ಹಿಂದೂ ಎಂದು ಸುಳ್ಳು ದಾಖಲೆ ನೀಡಿ ಮದುವೆಯಾಗಿದ್ದಾನೆ ಎಂದು ಪೊಲೀಸ್ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು, ಗಾಯತ್ರಿಯ ಸ್ವಇಚ್ಛೆಯ ಹೇಳಿಕೆ ಮತ್ತು ವಿವಾಹ ಪ್ರಮಾಣಪತ್ರದ ಆಧಾರದ ಮೇಲೆ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದರು. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಂಘಟನೆಗಳ ಮಟ್ಟದಲ್ಲಿ ದಂಪತಿಗಳ ವಿರುದ್ಧ ದೊಡ್ಡ ಮಟ್ಟದ ಆಕ್ರೋಶ ಮುಂದುವರಿದಿತ್ತು.
ಸಂಕಷ್ಟ ಮರೆಸಿದ ಮಗುವಿನ ಆಗಮನ
ಎಲ್ಲಾ ಕಹಿ ಘಟನೆಗಳನ್ನು ಮರೆತು ಈಗ ಕಾಲ ಬದಲಾಗಿದೆ. ದಂಪತಿಗೆ ಸುಂದರ ಮಗು ಜನಿಸಿದ್ದು, ಈ ಸುದ್ದಿಯು ಗಾಯತ್ರಿಯ ತವರು ಮನೆಯವರ ಕಲ್ಲಾದ ಮನಸ್ಸನ್ನು ಕರಗಿಸಿದೆ. ಮಗಳನ್ನು ತೊರೆದಿದ್ದ ಪೋಷಕರು ಮತ್ತು ಕುಟುಂಬಸ್ಥರು, ಮಗುವನ್ನು ನೋಡಲು ಖ್ವಾಜಾ ಮನೆಗೆ ಆಗಮಿಸಿದ್ದಾರೆ. ಅಷ್ಟೇ ಅಲ್ಲದೆ, ತವರಿನಿಂದ ಉಡುಗೊರೆಯಾಗಿ ತಂದ ತೊಟ್ಟಿಲನ್ನು ಮಗುವಿಗೆ ನೀಡಿ, ಹಿಂದೂ ಸಂಪ್ರದಾಯದಂತೆಯೇ ತೊಟ್ಟಿಲು ಶಾಸ್ತ್ರವನ್ನು ನೆರವೇರಿಸಿ ಹರಸಿದ್ದಾರೆ. ಈ ಮೂಲಕ ಜಿಹಾದ್ ಎಂಬ ಹಣೆಪಟ್ಟಿಯಿದ್ದ ಜಾಗದಲ್ಲಿ ಕೇವಲ ಪ್ರೀತಿ ಮಾತ್ರ ಉಳಿದಿದೆ.
ಸೆಪ್ಟೆಂಬರ್ 9ಕ್ಕೆ ನಾಮಕರಣ ಸಂಭ್ರಮ
ಮಗುವಿನ ಆಗಮನದಿಂದ ಸಂಭ್ರಮದಲ್ಲಿರುವ ಮುಕಳೆಪ್ಪ ದಂಪತಿ, ಮಗುವಿನ ನಾಮಕರಣ ಶಾಸ್ತ್ರವನ್ನು ಅತ್ಯಂತ ಅದ್ಧೂರಿಯಾಗಿ ಮಾಡಲು ನಿರ್ಧರಿಸಿದ್ದಾರೆ. ಸೆಪ್ಟೆಂಬರ್ 9 ರಂದು ಇಂದು ಧಾರವಾಡದ ರಾಯಲ್ ಹಾಲ್ ನಲ್ಲಿ ಈ ಸಮಾರಂಭ ನಡೆಯಲಿದೆ. ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಮಾನಿಗಳಿಗೆ ಆಹ್ವಾನ ನೀಡಿರುವ ದಂಪತಿ, ಮದುವೆಗೆ ನಿಮ್ಮನ್ನು ಕರೆಯಲು ಸಾಧ್ಯವಾಗಿರಲಿಲ್ಲ, ಈ ನಾಮಕರಣಕ್ಕಾದರೂ ಕುಟುಂಬ ಸಮೇತ ಬಂದು ಹರಸಿ ಎಂದು ವಿನಂತಿಸಿದ್ದಾರೆ.
ಸಂಪ್ರದಾಯಕ್ಕೆ ಗೌರವ ನೀಡಿದ ಮುಕಳೆಪ್ಪ
ವಿಶೇಷವೆಂದರೆ, ಗಾಯತ್ರಿ ಮದುವೆಯ ನಂತರವೂ ತಮ್ಮ ಮೂಲ ಸಂಪ್ರದಾಯಗಳನ್ನು ಮುಂದುವರಿಸುತ್ತಿದ್ದಾರೆ. ಈ ಹಿಂದೆ ಖ್ವಾಜಾ ಅವರು ತಮ್ಮ ಪತ್ನಿಗೆ ಹಿಂದೂ ಸಂಪ್ರದಾಯದಂತೆಯೇ ಸೀಮಂತ ಶಾಸ್ತ್ರ ಮಾಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈಗ ತೊಟ್ಟಿಲು ಶಾಸ್ತ್ರವೂ ಹಿಂದೂ ಪದ್ಧತಿಯಂತೆಯೇ ನಡೆದಿದ್ದು, ಇದು ಎರಡು ಸಂಸ್ಕೃತಿಗಳ ನಡುವಿನ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ತವರು ಮನೆಯವರ ಆಗಮನದಿಂದ ಗಾಯತ್ರಿ ಮುಖದಲ್ಲಿ ಹೊಸ ಕಳೆ ಬಂದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ದಂಪತಿಗೆ ಈಗ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.








