ಭಾರತೀಯ ಕ್ರಿಕೆಟ್ ರಂಗದಲ್ಲಿ ಈಗ ಮಹತ್ವದ ಬದಲಾವಣೆಯೊಂದು ನಡೆಯುವ ಲಕ್ಷಣಗಳು ಗೋಚರಿಸುತ್ತಿವೆ. ಟೀಮ್ ಇಂಡಿಯಾದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರ ಅಧಿಕಾರಾವಧಿ ಮುಕ್ತಾಯದ ಹಂತಕ್ಕೆ ತಲುಪಿದ್ದು, ಬಿಸಿಸಿಐ ಈಗಾಗಲೇ ಹೊಸ ಸಾರಥಿಯ ಹುಡುಕಾಟ ಆರಂಭಿಸಿದೆ. ಜುಲೈ 2023ರಲ್ಲಿ ಜವಾಬ್ದಾರಿ ವಹಿಸಿಕೊಂಡಿದ್ದ ಅಗರ್ಕರ್ ಅವರ ಒಪ್ಪಂದವು ಅಕ್ಟೋಬರ್ 4ಕ್ಕೆ ಕೊನೆಗೊಳ್ಳಲಿದ್ದು, ಅವರ ಸ್ಥಾನಕ್ಕೆ ಇಬ್ಬರು ದಿಗ್ಗಜ ಕ್ರಿಕೆಟಿಗರ ಹೆಸರುಗಳು ಕೇಳಿಬರುತ್ತಿವೆ.
ವಿಶ್ವಕಪ್ ವಿಜೇತ ಆಯ್ಕೆಗಾರನಿಗೆ ಟೆಸ್ಟ್ ಸೋಲಿನ ಹಿನ್ನಡೆ
ಅಜಿತ್ ಅಗರ್ಕರ್ ಅವರ ಅಧಿಕಾರಾವಧಿಯು ಏರಿಳಿತಗಳಿಂದ ಕೂಡಿತ್ತು. ಅವರ ನೇತೃತ್ವದ ಆಯ್ಕೆ ಸಮಿತಿಯ ಅವಧಿಯಲ್ಲೇ ಭಾರತ ತಂಡ 2024 ಮತ್ತು 2026ರ ಟಿ20 ವಿಶ್ವಕಪ್ ಜಯಿಸಿ ಇತಿಹಾಸ ನಿರ್ಮಿಸಿತು. ಅಲ್ಲದೆ 2025ರ ಚಾಂಪಿಯನ್ಸ್ ಟ್ರೋಫಿ ಮತ್ತು ಏಷ್ಯಾಕಪ್ ಗೆಲುವು ಕೂಡ ಅಗರ್ಕರ್ ಅವರ ಸಾಧನೆಯ ಪಟ್ಟಿಯಲ್ಲಿದೆ. ಆದರೆ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಕಂಡ ಯಶಸ್ಸು ಟೆಸ್ಟ್ ಕ್ರಿಕೆಟ್ನಲ್ಲಿ ಮರೀಚಿಕೆಯಾಯಿತು. ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸೋಲು ಹಾಗೂ ತವರಿನಲ್ಲೇ ಅನುಭವಿಸಿದ ಹೀನಾಯ ಕ್ಲೀನ್ ಸ್ವೀಪ್ ಹಿನ್ನಡೆ ಅಗರ್ಕರ್ ಅವರ ನಿರ್ಗಮನಕ್ಕೆ ಒಂದು ಕಾರಣ ಎನ್ನಲಾಗುತ್ತಿದೆ.
ರೋಹಿತ್ ಕೊಹ್ಲಿ ಭವಿಷ್ಯದ ಕುರಿತ ಹೇಳಿಕೆ
ಅಗರ್ಕರ್ ಅವರ ಅಧಿಕಾರಾವಧಿ ವಿಸ್ತರಣೆಯಾಗದಿರಲು ಮುಖ್ಯ ಕಾರಣ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಭವಿಷ್ಯದ ಕುರಿತು ಅವರು ನೀಡಿದ ಹೇಳಿಕೆ ಎನ್ನಲಾಗಿದೆ. 2027ರ ಏಕದಿನ ವಿಶ್ವಕಪ್ನಲ್ಲಿ ಈ ಇಬ್ಬರು ದಿಗ್ಗಜರು ಆಡುವ ಬಗ್ಗೆ ಅಗರ್ಕರ್ ಸಂಶಯ ವ್ಯಕ್ತಪಡಿಸಿದ್ದರು. ಇದು ಬಿಸಿಸಿಐ ಮತ್ತು ಹಿರಿಯ ಆಟಗಾರರ ನಡುವೆ ಭಿನ್ನಾಭಿಪ್ರಾಯ ಮೂಡಲು ಕಾರಣವಾಯಿತು. ರೋಹಿತ್ ಮತ್ತು ಕೊಹ್ಲಿ ತಾವು ವಿಶ್ವಕಪ್ ಆಡಲು ಸಿದ್ಧ ಎಂದು ಹೇಳುತ್ತಿದ್ದರೂ, ಅಗರ್ಕರ್ ಅವರ ಅಡ್ಡಗೋಡೆಯ ಮೇಲಿನ ದೀಪದಂತ ಹೇಳಿಕೆಗಳು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದವು. ಇದೇ ಕಾರಣಕ್ಕೆ ಅಗರ್ಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮುಂದಿನ ಮುಖ್ಯ ಆಯ್ಕೆಗಾರ ಯಾರು?
ಅಜಿತ್ ಅಗರ್ಕರ್ ನಿರ್ಗಮನದ ಬೆನ್ನಲ್ಲೇ ಬಿಸಿಸಿಐ ಹೊಸ ಆಯ್ಕೆಗಾರರ ನೇಮಕಕ್ಕೆ ಸಜ್ಜಾಗಿದೆ. ಈ ರೇಸ್ನಲ್ಲಿ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ಮತ್ತು ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಅವರ ಹೆಸರುಗಳು ಬಲವಾಗಿ ಕೇಳಿಬರುತ್ತಿವೆ. ಪ್ರಗ್ಯಾನ್ ಓಜಾ ಈಗಾಗಲೇ ಆಯ್ಕೆ ಸಮಿತಿಯ ಸದಸ್ಯರಾಗಿ ಅನುಭವ ಹೊಂದಿದ್ದರೆ, ಪಾರ್ಥಿವ್ ಪಟೇಲ್ ದೇಶಿ ಕ್ರಿಕೆಟ್ ಮತ್ತು ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ತಂಡದೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಈ ಇಬ್ಬರಲ್ಲಿ ಯಾರು ಟೀಮ್ ಇಂಡಿಯಾದ ಮುಂದಿನ ಭವಿಷ್ಯವನ್ನು ರೂಪಿಸಲಿದ್ದಾರೆ ಎಂಬ ಕುತೂಹಲ ಈಗ ಮನೆಮಾಡಿದೆ.








