ಮುಂದಿನ ಶೈಕ್ಷಣಿಕ ವರ್ಷದಿಂದ ಶಿಕ್ಷಕರ ದಿನಾಚರಣೆಯಂದು ಆದರ್ಶ ಶಿಕ್ಷಕ ಅಥವಾ ಉತ್ತಮ ಶಿಕ್ಷಕರ ಆದರ್ಶ ಎಂಬ ಪರಿಕಲ್ಪನೆಯನ್ನು ಜಾರಿಗೆ ತರಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಪರಿಕಲ್ಪನೆಗೆ ತಗಲಬಹುದೆಂದು ಅಂದಾಜಿಸಲಾಗಿರುವ ವೆಚ್ಚದ ಮಾಹಿತಿಯನ್ನು ಹಣಕಾಸು ಇಲಾಖೆಗೆ ಸಲ್ಲಿಸಿದ್ದು, ಬಜೆಟ್ ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.
ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಜಿಲ್ಲಾ ಉಪನಿರ್ದೇಶಕರ ಸಲಹೆ ಸೂಚನೆಗಳೊಂದಿಗೆ ಕಲಿಕಾ ಆದರ್ಶ ಮತ್ತು ವೈಯಕ್ತಿಕ ಆದರ್ಶ ಎರಡನ್ನೂ ಗಮನದಲ್ಲಿಟ್ಟುಕೊಂಡು, ಆದರ್ಶ ಶಿಕ್ಷಕರನ್ನು ಗುರುತಿಸಿ ಅವರಿಂದ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಹೇಗೆ ಸುಧಾರಿಸಬಹುದು ಎಂಬ ಅಂಶಗಳನ್ನು ಕ್ರೋಡೀಕರಿಸಲಾಗುವುದು. ನಂತರ ಇಲಾಖೆಯಿಂದ ಮುಂದಿನ ದಿನಗಳಲ್ಲಿ ಗುರುತಿಸಲಾದ ಆದರ್ಶ ಶಿಕ್ಷಕರ ನವೀನ ಕ್ರಮಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ








