ಮಂಗಳೂರು: ಕರಾವಳಿಯ ಹೆಬ್ಬಾಗಿಲು ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಈಗ ಮಹತ್ವದ ಬದಲಾವಣೆಯೊಂದು ಗಾಳಿ ಬೀಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯನ್ನು ಇನ್ಮುಂದೆ ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಐತಿಹಾಸಿಕ ಬದಲಾವಣೆಯ ಕುರಿತು ಸಾರ್ವಜನಿಕರ ಅಭಿಪ್ರಾಯಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದ್ದು, ಯಾವುದೇ ತಕರಾರು ಬಾರದಂತೆ ಎಚ್ಚರಿಕೆ ಹೆಜ್ಜೆ ಇಡಲು ಸರ್ಕಾರ ಮುಂದಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಂಗಳೂರು ಬ್ರ್ಯಾಂಡ್ ಬೆಳಗಲು ಪ್ಲಾನ್
ಸಚಿವ ಸಂಪುಟ ಸಭೆಯ ಬಳಿಕ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಜಿಲ್ಲೆಯಾಗಿ ಬದಲಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು. ಮಂಗಳೂರು ನಗರವು ಕೇವಲ ರಾಜ್ಯಕ್ಕೆ ಸೀಮಿತವಾಗದೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ದೊಡ್ಡ ಬ್ರ್ಯಾಂಡ್ ಹೊಂದಿದೆ. ಪ್ರವಾಸೋದ್ಯಮ, ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಮಂಗಳೂರು ಹೆಸರೇ ಚಾಲ್ತಿಯಲ್ಲಿದೆ. ಈ ಕಾರಣದಿಂದ ಜಿಲ್ಲೆಯ ಹೆಸರನ್ನು ಬದಲಿಸುವುದು ಆಡಳಿತಾತ್ಮಕವಾಗಿ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಪೂರಕವಾಗಿದೆ ಎಂಬುದು ಸರ್ಕಾರದ ವಾದವಾಗಿದೆ.
ಜನರ ಅಭಿಪ್ರಾಯಕ್ಕೆ ಒಂದು ತಿಂಗಳ ಗಡುವು
ಜಿಲ್ಲೆಯ ಹೆಸರು ಬದಲಾವಣೆಯಂತಹ ಸೂಕ್ಷ್ಮ ವಿಚಾರದಲ್ಲಿ ಯಾವುದೇ ವಿವಾದ ಸೃಷ್ಟಿಯಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಜನರ ಮುಂದೆ ಈ ಪ್ರಸ್ತಾಪವನ್ನು ಇಟ್ಟಿದೆ. ಒಂದು ತಿಂಗಳ ಕಾಲ ಸಾರ್ವಜನಿಕರು ತಮ್ಮ ಸಲಹೆ ಮತ್ತು ತಕರಾರುಗಳನ್ನು ಸಲ್ಲಿಸಲು ಅವಕಾಶ ನೀಡಲಾಗುವುದು. ಜನರ ಭಾವನೆಗಳನ್ನು ಅರಿತ ನಂತರವೇ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು. ದಕ್ಷಿಣ ಕನ್ನಡ ಎಂಬ ಹೆಸರು ಈ ಹಿಂದೆ ಹೇಗೆ ಬಂತು ಎಂಬ ಚರ್ಚೆಗೆ ನಾವು ಹೋಗುವುದಿಲ್ಲ, ಆದರೆ ಮುಂದಿನ ದಿನಗಳಲ್ಲಿ ಮಂಗಳೂರು ಜಿಲ್ಲೆ ಎಂಬ ಹೆಸರೇ ಸ್ಥಿರವಾಗಬೇಕು ಎಂಬುದು ಸರ್ಕಾರದ ಆಶಯವಾಗಿದೆ.
ಮಂಗಳೂರು ಜಿಲ್ಲೆ ಎಂದು ಮರುನಾಮಕರಣಕ್ಕೆ ಕಾರಣವೇನು
ದಕ್ಷಿಣ ಕನ್ನಡ ಎಂಬ ಹೆಸರು ಆಡಳಿತಾತ್ಮಕವಾಗಿ ಸ್ವಲ್ಪ ಗೊಂದಲಕಾರಿಯಾಗಿದೆ ಎಂಬ ಅಭಿಪ್ರಾಯ ಹಲವು ದಿನಗಳಿಂದ ಕೇಳಿಬರುತ್ತಿತ್ತು. ಮಂಗಳೂರು ಎಂಬುದು ಸಾಂಸ್ಕೃತಿಕವಾಗಿ ಮತ್ತು ಭೌಗೋಳಿಕವಾಗಿ ಜನರಿಗೆ ಹತ್ತಿರವಾಗಿದೆ. ವಿಮಾನ ನಿಲ್ದಾಣದಿಂದ ಹಿಡಿದು ಬಂದರಿನವರೆಗೆ ಎಲ್ಲವನ್ನೂ ಮಂಗಳೂರು ಎಂದೇ ಗುರುತಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಅಸ್ಮಿತೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಹೆಸರು ಬದಲಾವಣೆಯ ಅಸ್ತ್ರವನ್ನು ಸರ್ಕಾರ ಬಳಸಿದೆ. ಈ ಹೆಸರು ಬದಲಾವಣೆಯ ನಿರ್ಧಾರ ಈಗ ಕರಾವಳಿ ಭಾಗದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.








