ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಹೊಸ ಬಾಂಬ್ ಸಿಡಿದಿದೆ. ಅದು ಕೂಡ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಒಳಗಿನಿಂದಲೇ! ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒಕ್ಕಲಿಗ ಸಮುದಾಯದ ಅಪ್ರತಿಮ ನಾಯಕ ಎಂದು ಬಿಂಬಿಸಿಕೊಳ್ಳುತ್ತಿರುವ ಬೆನ್ನಲ್ಲೇ, ಹಿರಿಯ ಶಾಸಕ ಕೆ.ಎನ್. ರಾಜಣ್ಣ ಅವರು ನೀಡಿರುವ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಒಕ್ಕಲಿಗರು ಮತ ಹಾಕುವಾಗ ಡಿ.ಕೆ. ಶಿವಕುಮಾರ್ ಅವರ ಮುಖ ನೋಡುವುದಿಲ್ಲ, ಬದಲಾಗಿ ಇಂದಿಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮುಖ ನೋಡಿಯೇ ಮತ ಹಾಕುತ್ತಾರೆ ಎಂದು ರಾಜಣ್ಣ ಗುಡುಗಿದ್ದಾರೆ.
ಡಿಕೆಶಿ ಸಿಎಂ ಆದರೂ ಮತ ಬರಲ್ಲ
ಒಕ್ಕಲಿಗ ಮತಬ್ಯಾಂಕ್ ಕುರಿತು ಸತ್ಯದರ್ಶನ ಮಾಡಿಸಿರುವ ಕೆ.ಎನ್. ರಾಜಣ್ಣ, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿರುವುದರಿಂದ ಎಲ್ಲ ಒಕ್ಕಲಿಗರು ಕಾಂಗ್ರೆಸ್ಗೆ ಮತ ಹಾಕಿಬಿಡುತ್ತಾರೆ ಎಂಬುದು ಸುಳ್ಳು. ಅಧಿಕಾರಿಗಳ ಮೂಲಕ ಬೈಪಾಸ್ ಹಾದಿಯಲ್ಲಿ ಕೇವಲ ಒಂದು ಐದು ಪರ್ಸೆಂಟ್ ಮತಗಳು ಹೆಚ್ಚುವರಿಯಾಗಿ ಬರಬಹುದು ಅಷ್ಟೆ. ಆದರೆ ಗೆಲುವಿಗೆ ಬೇಕಾದ ನೈಜ ಮತಗಳು ಇಂದಿಗೂ ದೇವೇಗೌಡರ ಪಾಲೇ ಆಗಲಿವೆ. ಇದು ಸದ್ಯದ ವಾಸ್ತವ ಸ್ಥಿತಿ ಎಂದು ರಾಜಣ್ಣ ವಿಶ್ಲೇಷಿಸಿದ್ದಾರೆ. ಇದು ಡಿ.ಕೆ. ಶಿವಕುಮಾರ್ ಅವರಿಗೆ ಸಮುದಾಯದ ಮೇಲಿರುವ ಹಿಡಿತದ ಬಗ್ಗೆ ನೇರ ಸವಾಲು ಹಾಕಿದಂತಿದೆ.
ಸಿದ್ದರಾಮಯ್ಯ ಯಾಕೆ ಹಿಂದೆ ಸರಿಯಬೇಕು?
ಇತ್ತೀಚೆಗೆ ಸಿದ್ದರಾಮಯ್ಯನವರು ನನ್ನ ಮಾತು ನಡೆಯುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಜಣ್ಣ, ಸಿದ್ದರಾಮಯ್ಯನವರು ಈಗಲೂ ಪ್ರಶ್ನಾತೀತ ನಾಯಕರು. ಅವರು ನೇಪಥ್ಯಕ್ಕೆ ಸರಿಯುವ ಅಥವಾ ಅಸಹಾಯಕರಾಗುವ ಅಗತ್ಯವಿಲ್ಲ. ರಾಜಕಾರಣದಲ್ಲಿ ಏರಿಳಿತಗಳು ಸಹಜ. ಆದರೆ ಈಗ ಎಲ್ಲವೂ ಡಿ.ಕೆ. ಶಿವಕುಮಾರ್ ಅವರೇ ನೋಡಿಕೊಳ್ಳುತ್ತಿದ್ದಾರೆ ಎಂಬ ಭಾವನೆ ಇರಬಹುದು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕುರುಬರ ವೋಟು ಪೂರ್ತಿ ಬಂದಿತ್ತಾ? ಇಲ್ಲ ತಾನೇ? ಹಾಗೆಯೇ ಡಿ.ಕೆ. ಶಿವಕುಮಾರ್ ಇದ್ದಾಗ ಒಕ್ಕಲಿಗರು ವೋಟ್ ಹಾಕ್ತಾರೆ ಅಂತ ಹೇಳೋಕೆ ಆಗಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.
ಒಕ್ಕಲಿಗ ನಾಯಕನ ಪರೀಕ್ಷೆ ಚುನಾವಣೆಯಲ್ಲಿ
ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಬಲ ಸಮುದಾಯದ ನಾಯಕ ಎಂದು ಮುಂದೆ ಮಾಡಿದ್ದೇವೆ. ಆದರೆ ಜನರು ಅವರನ್ನು ನಾಯಕ ಎಂದು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬುದು ಬರುವ ಚುನಾವಣೆಯಲ್ಲಿ ಮಾತ್ರ ನಿರ್ಧಾರವಾಗಲಿದೆ. ನಾಯಕತ್ವದ ಅಸಲಿ ಪರೀಕ್ಷೆ ನಡೆಯುವುದು ಅಖಾಡದಲ್ಲಿ ಮಾತ್ರ ಎಂದು ರಾಜಣ್ಣ ಹೇಳುವ ಮೂಲಕ ಡಿಕೆಶಿಗೆ ವಾರ್ನಿಂಗ್ ನೀಡಿದ್ದಾರೆ. ಇನ್ನು ಅಹಿಂದ ಸಂಘಟನೆಯ ಬಗ್ಗೆ ಮಾತನಾಡಿದ ಅವರು, ಈ ಸಂಘಟನೆ ಇನ್ನು ಪ್ರೀ ಮೆಚ್ಯೂರ್ ಹಂತದಲ್ಲಿದೆ, ಮುಂದೆ ಜನಾದೇಶಕ್ಕೆ ತಕ್ಕಂತೆ ಹೆಜ್ಜೆ ಇಡುತ್ತೇವೆ ಎಂದಿದ್ದಾರೆ.
ಅಪೆಕ್ಸ್ ಬ್ಯಾಂಕ್ ಚುನಾವಣೆಯ ಹಿನ್ನಡೆಯಿಲ್ಲ
ತಮ್ಮ ವೈಯಕ್ತಿಕ ರಾಜಕೀಯ ಭವಿಷ್ಯದ ಬಗ್ಗೆಯೂ ಸ್ಪಷ್ಟನೆ ನೀಡಿದ ರಾಜಣ್ಣ, ಅಪೆಕ್ಸ್ ಬ್ಯಾಂಕ್ ಚುನಾವಣೆ ಮುಗಿದ ಅಧ್ಯಾಯ. ಸಿದ್ದರಾಮಯ್ಯನವರು ನನಗೆ ಬೆಂಬಲ ನೀಡಲು ಪ್ರಯತ್ನಿಸಿದರು, ಆದರೆ ಅದು ಯಶಸ್ವಿಯಾಗಲಿಲ್ಲ. ಅದಕ್ಕಾಗಿ ಸಿದ್ದರಾಮಯ್ಯ ವೀಕ್ ಆಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ನನಗೆ ಯಾವುದೇ ಹಿನ್ನಡೆಯಾಗಿಲ್ಲ ಮತ್ತು ಮುಂದೆ ನಾನು ಸಕ್ರಿಯವಾಗಿ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದ್ದಾರೆ. ರಾಜಣ್ಣ ಅವರ ಈ ಸರಣಿ ಹೇಳಿಕೆಗಳು ಕಾಂಗ್ರೆಸ್ ನ ಇಬ್ಬರು ದಿಗ್ಗಜ ನಾಯಕರ ನಡುವಿನ ಶೀತಲ ಸಮರವನ್ನು ಬೀದಿಗೆ ತಂದಿದೆ.








