ವಾಷಿಂಗ್ಟನ್: ಅಮೆರಿಕದ ಪ್ರಮುಖ ಮಾಧ್ಯಮ ಸಂಸ್ಥೆಗಳು ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಸಂಘರ್ಷ ಈಗ ಹೊಸ ತಿರುವು ಪಡೆದುಕೊಂಡಿದೆ. ತಮ್ಮ ವಿರುದ್ಧ ನಿರಂತರವಾಗಿ ಅಪಪ್ರಚಾರ ನಡೆಸುತ್ತಿರುವ ಟಿವಿ ಚಾನೆಲ್‌ಗಳಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿರುವ ಟ್ರಂಪ್, ಈಗ ಅಧಿಕೃತವಾಗಿ ತಮ್ಮದೇ ಆದ ಟ್ರಂಪ್ ಟೀವಿ ಆರಂಭಿಸುವ ಮೂಲಕ ಮಾಧ್ಯಮ ಲೋಕದಲ್ಲಿ ಸಂಚಲನ ಮೂಡಿಸಿದ್ದಾರೆ. ಮಾಧ್ಯಮಗಳ ಬಹಿಷ್ಕಾರಕ್ಕೆ ಬಗ್ಗದ ಟ್ರಂಪ್, ಈಗ ನೇರವಾಗಿ ಜನರನ್ನು ತಲುಪಲು ಹೊಸ ಹಾದಿ ಕಂಡುಕೊಂಡಿದ್ದಾರೆ.
ಹಿಂದೆ ಸಾಮಾಜಿಕ ಜಾಲತಾಣಗಳಾದ ಟ್ವಿಟರ್ ಮತ್ತು ಫೇಸ್‌ಬುಕ್ ಡೊನಾಲ್ಡ್ ಟ್ರಂಪ್ ಅವರ ಮೇಲೆ ನಿರ್ಬಂಧ ಹೇರಿದಾಗ, ಅವರು ಸಿಡಿದೆದ್ದು ಟ್ರುತ್ ಸೋಷಿಯಲ್ ಎಂಬ ತಮ್ಮದೇ ಆದ ವೇದಿಕೆಯನ್ನು ಸೃಷ್ಟಿಸಿದ್ದರು. ಈಗ ಅದೇ ಹಾದಿಯಲ್ಲಿ ಸಾಗಿರುವ ಅವರು, ಟಿವಿ ಮಾಧ್ಯಮಗಳ ಏಕಸ್ವಾಮ್ಯವನ್ನು ಮುರಿಯಲು ಟ್ರಂಪ್ ಟೀವಿ ಎಂಬ ಯೂಟ್ಯೂಬ್ ಸ್ಟ್ರೀಮಿಂಗ್ ಫ್ಲಾಟ್‌ಫಾರ್ಮ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.
ಮಾಧ್ಯಮಗಳ ಬಹಿಷ್ಕಾರಕ್ಕೆ ಟ್ರಂಪ್ ನೀಡಿದ ಭರ್ಜರಿ ಟಕ್ಕರ್
ತಮ್ಮ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿವೆ ಮತ್ತು ಪಕ್ಷಪಾತ ಮಾಡುತ್ತಿವೆ ಎಂದು ಆರೋಪಿಸಿ ಸಿಎನ್‌ಎನ್ ಸೇರಿದಂತೆ ಮೂರು ಪ್ರಮುಖ ವಾಹಿನಿಗಳಿಗೆ ಟ್ರಂಪ್ ಶ್ವೇತಭವನ ಪ್ರವೇಶಿಸದಂತೆ ನಿರ್ಬಂಧ ಹೇರಿದ್ದರು. ಈ ಕ್ರಮದಿಂದ ಕೆರಳಿದ ಅಮೆರಿಕದ ಬಹುತೇಕ ಟಿವಿ ಚಾನೆಲ್‌ಗಳು ಟ್ರಂಪ್ ಅವರ ಶ್ವೇತಭವನದ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಿರಲು ನಿರ್ಧರಿಸಿದ್ದವು. ಮಾಧ್ಯಮಗಳ ಈ ಸಂಘಟಿತ ಹೋರಾಟಕ್ಕೆ ತಲೆಬಾಗದ ಟ್ರಂಪ್, ಈಗ ದಿನದ 24 ಗಂಟೆಯೂ ತಮ್ಮ ಅಧ್ಯಕ್ಷೀಯ ಕಾರ್ಯಕ್ರಮಗಳ ಎಕ್ಸ್‌ಕ್ಲೂಸಿವ್ ಪ್ರಸಾರಕ್ಕಾಗಿ ಸ್ವಂತ ವಾಹಿನಿಯನ್ನೇ ಸಜ್ಜುಗೊಳಿಸಿದ್ದಾರೆ.
ಇನ್ನು ಮುಂದೆ ಟ್ರಂಪ್ ಅವರ ಪ್ರತಿಯೊಂದು ಭಾಷಣ, ನಿರ್ಧಾರ ಮತ್ತು ಶ್ವೇತಭವನದ ಮಹತ್ವದ ವಿದ್ಯಮಾನಗಳು ಯಾವುದೇ ಕತ್ತರಿ ಇಲ್ಲದೆ ನೇರವಾಗಿ ಟ್ರಂಪ್ ಟೀವಿ ಮೂಲಕ ವಿಶ್ವದಾದ್ಯಂತ ಪ್ರಸಾರವಾಗಲಿವೆ. ಇದು ಅಮೆರಿಕದ ಸಾಂಪ್ರದಾಯಿಕ ಮಾಧ್ಯಮಗಳಿಗೆ ಭಾರಿ ಹೊಡೆತ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮಾಧ್ಯಮಗಳ ಹಂಗಿಲ್ಲದೆ ಅಧಿಕಾರ ನಡೆಸಲು ಹೊರಟಿರುವ ಟ್ರಂಪ್ ಅವರ ಈ ನಡೆ ಜಾಗತಿಕ ರಾಜಕಾರಣದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.








