ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ನಮಗೆ ಕನಿಷ್ಠ ನಾಗರಿಕ ಪ್ರಜ್ಞೆ ಇರಬೇಕಲ್ಲವೇ? ಇತರರ ವೈಯಕ್ತಿಕ ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವುದು ಎಷ್ಟು ಸರಿ? ಇಂತಹ ಹತ್ತಾರು ಪ್ರಶ್ನೆಗಳನ್ನು ಹೊತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ, ಖ್ಯಾತ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರು ರೈಲು ಪ್ರಯಾಣದ ವೇಳೆ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಜನರ ಬೇಜವಾಬ್ದಾರಿಯುತ ವರ್ತನೆಗೆ ಬೇಸತ್ತ ಅವರು ದೇವರೇ ಈ ದೇಶವನ್ನು ಕಾಪಾಡಬೇಕು ಎಂದು ಅತ್ಯಂತ ನೋವಿನಿಂದ ನುಡಿದಿದ್ದಾರೆ.
5 ಗಂಟೆಗಳ ಕಾಲ ಕಿರಿಕಿರಿ
ತಮ್ಮ ರೈಲು ಪ್ರಯಾಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಶಿವಶ್ರೀ, ರೈಲಿನ ಬೋಗಿಯಲ್ಲಿದ್ದ ಮಧ್ಯವಯಸ್ಕರ ಗುಂಪೊಂದು ಮಾಡಿದ ಗಲಾಟೆಯನ್ನು ವಿವರಿಸಿದ್ದಾರೆ. ಸುಮಾರು 56 ಆಸನಗಳಿದ್ದ ಬೋಗಿಯಲ್ಲಿ 40 ಜನರ ದೊಡ್ಡ ಗುಂಪೊಂದು ಸತತ ಐದು ಗಂಟೆಗಳ ಕಾಲ ಜೋರಾಗಿ ಕಿರುಚುತ್ತಾ ಮಾತನಾಡುತ್ತಿತ್ತು. ಒಬ್ಬ ಕಲಾವಿದೆಯಾಗಿ ನಮಗೆ ಪ್ರಶಾಂತ ವಾತಾವರಣದ ಅಗತ್ಯವಿರುತ್ತದೆ, ಆದರೆ ಇಲ್ಲಿ ಕನಿಷ್ಠ ಮೌನಕ್ಕೂ ಜಾಗವಿರಲಿಲ್ಲ. ಒಬ್ಬರು ಇಬ್ಬರಾದರೆ ಸಹಿಸಬಹುದು, ಆದರೆ ಇಡೀ ಗುಂಪೇ ರೈಲನ್ನು ತಮ್ಮ ಮನೆಯಂತೆ ಭಾವಿಸಿ ವರ್ತಿಸುತ್ತಿರುವುದು ನಾಗರಿಕ ಸಮಾಜಕ್ಕೆ ಶೋಭೆಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಹ ಪ್ರಯಾಣಿಕರ ಕಿರಿಕಿರಿ ತಾಳಲಾರದೆ ಶಿವಶ್ರೀ ಅವರು ಟಿಟಿಇ ಬಳಿ ದೂರು ನೀಡಿದ್ದರು. ಟಿಟಿಇ ಬಂದು ಎಚ್ಚರಿಕೆ ನೀಡಿದಾಗ ಆ ಗುಂಪು ಆಡುತ್ತಿದ್ದ ಯುಎನ್ಒ ಆಟವನ್ನು ನಿಲ್ಲಿಸಿತು. ಆದರೆ ಕೆಲವೇ ನಿಮಿಷಗಳಲ್ಲಿ ಅದೇ ಟಿಟಿಇ ವಾಪಸ್ ಬಂದು ಆ ಗಲಾಟೆ ಮಾಡುತ್ತಿದ್ದವರ ಜೊತೆ ನಗುತ್ತಾ ತಮಾಷೆ ಮಾಡಲಾರಂಭಿಸಿದರು. ಈ ಘಟನೆಯನ್ನು ನೋಡಿದ ಶಿವಶ್ರೀ ಅವರಿಗೆ ತೀವ್ರ ಬೇಸರವಾಗಿದೆ. ಇಲ್ಲಿ ನಿಯಮ ಉಲ್ಲಂಘಿಸುವವರಿಗೂ ಮತ್ತು ನಿಯಮ ಪಾಲಿಸಬೇಕಾದವರಿಗೂ ಕನಿಷ್ಠ ಜವಾಬ್ದಾರಿಯ ಅರಿವಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ದೂರು ನೀಡಿದ ಮೇಲೆ ಆ ಗುಂಪು ಮತ್ತಷ್ಟು ಹಠಕ್ಕೆ ಬಿದ್ದಂತೆ ಜೋರಾಗಿ ಬಾಲಿವುಡ್ ಹಾಡುಗಳನ್ನು ಹಾಡುವ ಮೂಲಕ ಉದ್ದೇಶಪೂರ್ವಕವಾಗಿ ಇತರರಿಗೆ ಕಿರಿಕಿರಿ ಉಂಟುಮಾಡಿದೆ.
ದೇವರೇ ಈ ದೇಶವನ್ನು ಕಾಪಾಡಬೇಕು
ನಮ್ಮ ದೇಶದಲ್ಲಿ ನಾವು ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಯಾವಾಗ ಕಲಿಯುತ್ತೇವೆ? ಎಂದು ಶಿವಶ್ರೀ ಪ್ರಶ್ನಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಇತರರ ಜಾಗಕ್ಕೆ ಅತಿಕ್ರಮಣ ಮಾಡುವುದು ಮತ್ತು ಕಿರುಚುವುದು ಸಂಸ್ಕೃತಿಯಲ್ಲ. ಇಂತಹ ಬೇಜವಾಬ್ದಾರಿ ಜನರನ್ನು ಕಂಡರೆ ಮನಸ್ಸಿಗೆ ತುಂಬಾ ನೋವಾಗುತ್ತದೆ. ಒಂದು ರಾಷ್ಟ್ರವಾಗಿ ನಾವು ನಾಗರಿಕ ಪ್ರಜ್ಞೆಯ ಆಟದಲ್ಲಿ ಸಂಪೂರ್ಣವಾಗಿ ಸೋತಿದ್ದೇವೆ ಎಂದು ಅವರು ಮಾರ್ಮಿಕವಾಗಿ ಬರೆದಿದ್ದಾರೆ.
ಶಿವಶ್ರೀ ಅವರ ಈ ಪೋಸ್ಟ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಅನೇಕ ಜನರು ಸಾರ್ವಜನಿಕ ಸಾರಿಗೆಯಲ್ಲಿ ತಮಗಾದ ಇಂತಹದೇ ಕರಾಳ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಗುಂಪು ಗುಂಪಾಗಿ ಪ್ರಯಾಣಿಸುವವರಿಗೆ ರೈಲ್ವೆ ಇಲಾಖೆ ಪ್ರತ್ಯೇಕ ಬೋಗಿಗಳ ವ್ಯವಸ್ಥೆ ಮಾಡಬೇಕು ಮತ್ತು ಅತಿಯಾಗಿ ಗಲಾಟೆ ಮಾಡುವವರಿಗೆ ಭಾರೀ ದಂಡ ವಿಧಿಸಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಶಿವಶ್ರೀ ಅವರು ಎತ್ತಿರುವ ಈ ಧ್ವನಿ ಈಗ ರೈಲು ಪ್ರಯಾಣದ ಮೌಲ್ಯಗಳ ಬಗ್ಗೆ ಗಂಭೀರ ಚರ್ಚೆಗೆ ನಾಂದಿ ಹಾಡಿದೆ.








