ಪಟ್ನಾ: ಕೇಂದ್ರ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಕುರಿತು ದೇಶಾದ್ಯಂತ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಬಿಹಾರದ ಮಾಜಿ ಸಚಿವ ಹಾಗೂ ವಿಕಾಸಶೀಲ ಇನ್ಸಾನ್ ಪಾರ್ಟಿ ಮುಖ್ಯಸ್ಥ ಮುಕೇಶ್ ಸಾಹನಿ ಅವರು ಅಕ್ಷರಶಃ ಬಾಂಬ್ ಸಿಡಿಸಿದ್ದಾರೆ. ಚುನಾವಣಾ ಆಯೋಗದ ಕಾರ್ಯವೈಖರಿಯಿಂದ ತೀವ್ರ ಆಕ್ರೋಶಗೊಂಡಿರುವ ಅವರು, ಒಂದು ವೇಳೆ ನನಗೆ ಒಂದು ಕೊಲೆಗಾಗಿ ಕಾನೂನಿನಿಂದ ಕ್ಷಮಾದಾನ ಸಿಕ್ಕರೆ ನಾನು ಮೊದಲು ಗುಂಡು ಹಾರಿಸುವುದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದಾರೆ.
ಚುನಾವಣಾ ಆಯೋಗ ಬಿಜೆಪಿಯ ಗುಲಾಮ ಸಂಸ್ಥೆಯೇ?
ಸುದ್ದಿಗಾರರೊಂದಿಗೆ ಮಾತನಾಡಿದ ಮುಕೇಶ್ ಸಾಹನಿ, ಚುನಾವಣಾ ಆಯೋಗವು ಸ್ವತಂತ್ರವಾಗಿ ಕೆಲಸ ಮಾಡುತ್ತಿಲ್ಲ, ಬದಲಾಗಿ ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಕಟುವಾಗಿ ಟೀಕಿಸಿದರು. ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಕೇವಲ ಒಂದು ಪಕ್ಷದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿರುವ ಜ್ಞಾನೇಶ್ ಕುಮಾರ್ ಅವರಿಗೆ ಕನಿಷ್ಠ ನಾಚಿಕೆಯೂ ಇಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. ಸಂವಿಧಾನದ ಜೊತೆ ಚೆಲ್ಲಾಟವಾಡುತ್ತಿರುವ ಇಂತಹ ಅಧಿಕಾರಿಗಳಿಗೆ ಕಾಲವೇ ತಕ್ಕ ಪಾಠ ಕಲಿಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.
2029 ರಲ್ಲಿ ಜ್ಞಾನೇಶ್ ಕುಮಾರ್ ಜೈಲು ಸೇರುವುದು ಗ್ಯಾರಂಟಿ
ದೇಶದ ರಾಜಕೀಯ ಪರಿಸ್ಥಿತಿ ಬದಲಾಗಲಿದೆ ಎಂದು ಭವಿಷ್ಯ ನುಡಿದಿರುವ ಸಾಹನಿ, 2029 ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ಆ ದಿನ ಈ ಭ್ರಷ್ಟ ಅಧಿಕಾರಿಗಳ ಅಟ್ಟಹಾಸ ಕೊನೆಯಾಗಲಿದೆ. ಅಧಿಕಾರ ಬದಲಾದ ತಕ್ಷಣ ಜ್ಞಾನೇಶ್ ಕುಮಾರ್ ಅವರನ್ನು ಕಂಬಿಗಳ ಹಿಂದೆ ತಳ್ಳುವುದು ನಮ್ಮ ಮೊದಲ ಕೆಲಸ ಎಂದು ಗುಡುಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಯಾರೇ ಇವರ ರಕ್ಷಣೆಗೆ ಬಂದರೂ ಅದು ಸಾಧ್ಯವಿಲ್ಲ, ಬದಲಾಗಿ ಮೋದಿ ಕೂಡ ಜೈಲು ಪಾಲಾಗಬಹುದು ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಚುನಾವಣಾ ಆಯೋಗದ ಒಳಗಿನ ಒಳಜಗಳದ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ವರದಿಯೇ ಸಾಹನಿ ಅವರ ಈ ಆಕ್ರೋಶಕ್ಕೆ ಮೂಲ ಕಾರಣವಾಗಿದೆ. ಆಯೋಗದ ಇಬ್ಬರು ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ ಸುಮಾರು 14 ಬಾರಿ ಪ್ರಮುಖ ನಿರ್ಧಾರಗಳನ್ನು ವಿರೋಧಿಸಿ ಲಿಖಿತವಾಗಿ ಅಸಮಾಧಾನ ದಾಖಲಿಸಿದ್ದಾರೆ ಎಂಬ ಅಂಶ ಈಗ ಬಯಲಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲದಿರುವುದು ಮತ್ತು ಮುಖ್ಯ ಆಯುಕ್ತರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿರುವುದು ಈ ಮೂಲಕ ಸಾಬೀತಾಗಿದೆ ಎಂದು ಸಾಹನಿ ಪ್ರತಿಪಾದಿಸಿದ್ದಾರೆ.
ಒಬ್ಬ ಸಾಂವಿಧಾನಿಕ ಮುಖ್ಯಸ್ಥರ ಮೇಲೆ ಗುಂಡು ಹಾರಿಸುವ ಮಾತನ್ನಾಡಿರುವ ಮುಕೇಶ್ ಸಾಹನಿ ಅವರ ನಡೆಗೆ ಈಗ ಕಾನೂನಿನ ಸಂಕೋಲೆ ಬೀಳುವ ಸಾಧ್ಯತೆಯಿದೆ. ರಾಜಕೀಯ ವಿರೋಧ ಮಾಡುವುದು ಪ್ರಜಾಪ್ರಭುತ್ವದ ಹಕ್ಕು, ಆದರೆ ಹತ್ಯೆಯಂತಹ ಪ್ರಚೋದನಾಕಾರಿ ಹೇಳಿಕೆ ನೀಡುವುದು ಅಪರಾಧ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.








