ನವದೆಹಲಿ: ಇತ್ತೀಚೆಗೆ ಫ್ಲೈದುಬೈ ವಿಮಾನದಲ್ಲಿ 9/11 ಮಾದರಿಯ ಭೀಕರ ಭಯೋತ್ಪಾದಕ ಸಂಚನ್ನು ತನ್ನ ಪ್ರಾಣದ ಹಂಗು ತೊರೆದು ತಡೆದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸಕ್ಕೆ ಇಡೀ ವಿಶ್ವವೇ ತಲೆಬಾಗಿ ಗೌರವಿಸುತ್ತಿದೆ. ಆದರೆ, ಈ ಐತಿಹಾಸಿಕ ಶೌರ್ಯದ ಬಗ್ಗೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಅವರ ಕುಟುಂಬ ಮೌನ ವಹಿಸಿರುವುದು ಈಗ ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ ಕಿಶನ್ ರೆಡ್ಡಿ ಅವರು ಈ ವಿಚಾರವಾಗಿ ರಾಹುಲ್ ಗಾಂಧಿ ವಿರುದ್ಧ ಕೆಂಡಾಮಂಡಲವಾಗಿದ್ದು, ಭಾರತೀಯರ ಶಕ್ತಿಯನ್ನು ಕೊಂಡಾಡಲು ಕಾಂಗ್ರೆಸ್ ನಾಯಕರಿಗೆ ಮನಸ್ಸಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಭಾರತೀಯ ಪೈಲಟ್ ಸಾಹಸದ ಬಗ್ಗೆ ಮೌನವೇಕೆ
ಟೆಲ್ ಅವೀವ್ ಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಓಮನ್ ಮೂಲದ ಸಹ ಪೈಲಟ್ ವಿಮಾನವನ್ನು ಕೆಡವಲು ಯತ್ನಿಸಿದಾಗ, ಸ್ಮಿತ್ ಮಚ್ಚರ್ ಅವರು ಪ್ರಾಣಾಪಾಯದ ನಡುವೆಯೂ ಹೋರಾಡಿ ನೂರಾರು ಪ್ರಯಾಣಿಕರ ಜೀವ ಉಳಿಸಿದ್ದರು. ಈ ಘಟನೆ ನಡೆದು ಎರಡು ದಿನ ಕಳೆದರೂ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ಕನಿಷ್ಠ ಒಂದು ಅಭಿನಂದನಾ ಸಂದೇಶವನ್ನೂ ನೀಡಿಲ್ಲ. ಪ್ರತಿಯೊಂದು ಸಣ್ಣ ವಿಚಾರಕ್ಕೂ ಟ್ವೀಟ್ ಮಾಡುವ ಮತ್ತು ಜಗತ್ತನ್ನು ಬದಲಾಯಿಸುವ ಮಾತನಾಡೋ ರಾಹುಲ್ ಗಾಂಧಿ ಅವರಿಗೆ ಒಬ್ಬ ವೀರ ಭಾರತೀಯನ ಬಗ್ಗೆ ಮಾತನಾಡಲು ಸಮಯವಿಲ್ಲವೇ ಎಂದು ಕಿಶನ್ ರೆಡ್ಡಿ ವ್ಯಂಗ್ಯವಾಡಿದ್ದಾರೆ.
ಭಾರತದ ಸಾಧನೆ ಜೀರ್ಣಿಸಿಕೊಳ್ಳಲು ನೆಹರು ಕುಟುಂಬಕ್ಕೆ ಆಗುತ್ತಿಲ್ಲ
ಸೋನಿಯಾ ಗಾಂಧಿ ಕುಟುಂಬದ ಅಸಲಿ ಸಮಸ್ಯೆ ಏನು ಎಂದು ಪ್ರಶ್ನಿಸಿರುವ ಕಿಶನ್ ರೆಡ್ಡಿ, ಭಾರತ ಮತ್ತು ಭಾರತೀಯರ ಬಗ್ಗೆ ಜಗತ್ತಿನಾದ್ಯಂತ ಶ್ಲಾಘನೆ ವ್ಯಕ್ತವಾದಾಗಲೆಲ್ಲಾ ಕಾಂಗ್ರೆಸ್ ನಾಯಕರಿಗೆ ಅದು ಏಕೆ ಇಷ್ಟವಾಗುವುದಿಲ್ಲ ಎಂದು ಕೇಳಿದ್ದಾರೆ. ಅಂತಾರಾಷ್ಟ್ರೀಯ ನಾಯಕರು ಒಬ್ಬ ಭಾರತೀಯನ ಧೈರ್ಯವನ್ನು ಹೊಗಳುತ್ತಿದ್ದರೆ, ಅದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದ ನೆಹರು ಕುಟುಂಬದ ವರ್ತನೆ ಹಳೆಯ ಚಾಳಿಯಾಗಿದೆ. ಇಂತಹ ಸಂಕುಚಿತ ಮನೋಭಾವದಿಂದಾಗಿಯೇ ಕಾಂಗ್ರೆಸ್ ಪಕ್ಷ ರಾಜಕೀಯವಾಗಿ ಕಣ್ಮರೆಯಾಗುತ್ತಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ಸಾಮಾಜಿಕ ಜಾಲತಾಣದಲ್ಲೂ ಕಾಣದ ಅಭಿನಂದನೆ
ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರು ದೇಶದ ಪ್ರತಿಯೊಂದು ವಿದ್ಯಮಾನದ ಮೇಲೆ ನಿಗಾ ಇಟ್ಟಿರುತ್ತಾರೆ. ಆದರೆ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಈ ಅದಮ್ಯ ಶೌರ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದೇ ಒಂದು ಪೋಸ್ಟ್ ಹಾಕಲು ಕೂಡ ಅವರಿಗೆ ಸಾಧ್ಯವಾಗಿಲ್ಲ. ದೇಶದ ಹೆಮ್ಮೆಯ ಮಗನ ಸಾಧನೆಯನ್ನು ಗುರುತಿಸುವ ಮತ್ತು ಪ್ರಶಂಸಿಸುವ ಸಾಮಾನ್ಯ ಜ್ಞಾನವೂ ನೆಹರು ಕುಟುಂಬಕ್ಕೆ ಇಲ್ಲದಿರುವುದು ಆಶ್ಚರ್ಯಕರವಾಗಿದೆ ಎಂದು ಕಿಶನ್ ರೆಡ್ಡಿ ಕಿಡಿಕಾರಿದ್ದಾರೆ.
ಯಾರು ಈ ವೀರ ಪೈಲಟ್ ಸ್ಮಿತ್ ಮಚ್ಚರ್
ಮೂಲತಃ ಗುಜರಾತ್ ನವರಾದ ಸ್ಮಿತ್ ಮಚ್ಚರ್, ನಂತರ ಮುಂಬೈನಲ್ಲಿ ನೆಲೆಸಿದ್ದರು. ಫ್ಲೈದುಬೈ ಸಂಸ್ಥೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು, ಇದಕ್ಕೂ ಮುನ್ನ ಭಾರತದ ಸ್ಪೈಸ್ಜೆಟ್ ಸಂಸ್ಥೆಯಲ್ಲಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಓಮನ್ ಮೂಲದ ಕೋ ಪೈಲಟ್ ನಡೆಸಿದ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಸ್ಮಿತ್, ಸದ್ಯ ದುಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವು ಬದುಕಿನ ನಡುವೆ ಹೋರಾಡಿ ದೇಶದ ಕೀರ್ತಿ ಹೆಚ್ಚಿಸಿದ ಈ ಪೈಲಟ್ ಗೆ ಈಗ ಭಾರತೀಯರೆಲ್ಲರೂ ಸಲಾಂ ಎನ್ನುತ್ತಿದ್ದಾರೆ.







