ಕನ್ನಡದ ಹಿರಿಯ ನಟಿ ಬಿ. ಶಾಂತಮ್ಮ ಇನ್ನಿಲ್ಲ
ಮೈಸೂರು, ಜುಲೈ 19: ಕನ್ನಡದ ಹಿರಿಯ ನಟಿ ಬಿ. ಶಾಂತಮ್ಮ ಅವರು ತಮ್ಮ ಪುತ್ರಿಯ ಮನೆಯಲ್ಲಿ ಇಂದು ನಿಧನ ಹೊಂದಿದ್ದರು. ಅವರಿಗೆ 95 ವರ್ಷ ವಯಸ್ಸಾಗಿತ್ತು ಮತ್ತು ಅವರು ಹೃದಯ ಸಂಬಂಧಿ ಹಾಗೂ ಮರೆವಿನ ಸಮಸ್ಯೆಯಿಂದ ಬಳಲುತ್ತಿದ್ದರು.
ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯ ಸುಮಾರು 450ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಶಾಂತಮ್ಮ 1956ರಲ್ಲಿ ಚಿತ್ರರಂಗವನ್ನು ಪ್ರವೇಶಿಸಿದ್ದರು. ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್, ಅಂಬರೀಷ್, ರಜನಿಕಾಂತ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಹಲವಾರು ನಾಯಕ ನಟರ ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದ್ದ ಶಾಂತಮ್ಮ ಪೋಷಕ ಪಾತ್ರ ನಿರ್ವಹಣೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಜೊತೆಗೆ ಹಲವಾರು ಧಾರಾವಾಹಿಗಳಲ್ಲೂ ಶಾಂತಮ್ಮ ನಟಿಸಿದ್ದರು.
ಮೈಸೂರಿನ ಮಗಳ ಮನೆಯಲ್ಲಿದ್ದ ಶಾಂತಮ್ಮ ಅವರ ಆರೋಗ್ಯ ಸ್ಥಿತಿ ಶನಿವಾರ ರಾತ್ರಿ ತೀರಾ ಹದಗೆಟ್ಟಿದ್ದು, ಆಸ್ಪತ್ರೆಯಲ್ಲಿ ಸಕಾಲದಲ್ಲಿ ಬೆಡ್ ಸಿಗದೇ ಚಿಕಿತ್ಸೆ ಸಿಗುವುದೂ ತಡವಾಯಿತು. ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲು ಮಾಡುವ ಹೊತ್ತಿಗೆ ಮಧ್ಯರಾತ್ರಿ 1 ಗಂಟೆಯಾಗಿದ್ದು, ಇವತ್ತು ಸಂಜೆ 5.30 ರ ವೇಳೆಗೆ ಅವರು ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು. ಶಾಂತಮ್ಮ ಅವರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ವರದಿ ಬಂದ ಬಳಿಕ ಮೃತದೇಹದ ಅಂತ್ಯಕ್ರಿಯೆಯನ್ನು ನಡೆಸಲಾಗುವುದು ಎಂದು ಅವರ ಪುತ್ರಿ ಮಾಹಿತಿ ನೀಡಿದ್ದಾರೆ.
ಚಿತ್ರರಂಗ ಪ್ರವೇಶ : ಶಾಂತಮ್ಮ ಅವರ ತವರು ಮನೆಯಲ್ಲಿ ನಟನೆಗೆ ಅವಕಾಶ ಇರಲಿಲ್ಲ. ಶಾಂತಮ್ಮ ಅವರ ಪತಿ ಗೋಕಾಕ್ ಕಂಪೆನಿಯಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿದ್ದರು. ಹೀಗಾಗಿ ಅಲ್ಲಿದ್ದವರೊಬ್ಬರು ನಿಮ್ಮ ಪತ್ನಿ ಚೆನ್ನಾಗಿದ್ದಾರೆ, ನಟಿಸಬಹುದಲ್ಲವಾ ಎಂದು ಕೇಳಿದ್ದರಂತೆ. ಆಗ ಶಾಂತಮ್ಮ ಅವರ ಪತಿ, ನನ್ನ ಪತ್ನಿ ಒಪ್ಪಿದರೆ ನನ್ನದೇನೂ ಅಭ್ಯಂತರವೇನಿಲ್ಲ ಎಂದಿದ್ದರು. ಹೀಗೆ ಪತಿಯ ಪ್ರೋತ್ಸಾಹದಿಂದ ಅವರು ಚಿತ್ರರಂಗ ಪ್ರವೇಶಿಸಿದರು.
ಕೆಲ ವರ್ಷಗಳ ಹಿಂದೆ ಮಗ ಮತ್ತು ಮಗಳು ಕ್ಯಾನ್ಸರ್ ಚಿಕಿತ್ಸೆಯ ಸಲುವಾಗಿ ನಟಿ ಶಾಂತಮ್ಮ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಏನಾದರೂ ಸಹಾಯ ಸಿಗುತ್ತದೆಯೇ ಎಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಚಾರಿಸಿದ್ದರು. ಅವರು ಶಾಂತಮ್ಮ ಅವರಿಗೆ ಸಹಾಯ ಮಾಡುವ ಆಶ್ವಾಸನೆ ನೀಡಿದ್ದರು. ದುನಿಯಾ ವಿಜಯ್ ಹಾಗೂ ರಾಧಿಕಾ ಕುಮಾರಸ್ವಾಮಿ ಸಹ ಶಾಂತಮ್ಮ ಅವರ ಮಕ್ಕಳ ಚಿಕಿತ್ಸೆಗೆ ತಲಾ 50 ಸಾವಿರ 1 ಲಕ್ಷ ಹಣ ಸಹಾಯ ಮಾಡಿದ್ದರು.
ಶಾಂತಮ್ಮ ಅವರ ಮಗಳ ಮದುವೆಗೆ ಅಂಬರೀಶ್, ಶಂಕರ್‌ನಾಗ್ ಸಹಾಯ ಮಾಡಿದ್ದರು. ರಾಜ್‌ಕುಮಾರ್ ಕುಟುಂಬದ ಜೊತೆಗೆ ಶಾಂತಮ್ಮ ಅವರಿಗೆ ಉತ್ತಮ ಒಡನಾಟವಿತ್ತು.