ಶಿಕ್ಷಣ ಕ್ಷೇತ್ರದ ಸೇವೆಗೆ ಗೌರವದ ಗರಿ: ಪ್ರಾಚಾರ್ಯ ರತ್ನ ಪ್ರೊ. ಶ್ರೀಕಂಠಯ್ಯ ಅವರಿಗೆ ಸನ್ಮಾನ
ಬೆಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ದಶಕಗಳ ಕಾಲ ಗಣನೀಯ ಸೇವೆ ಸಲ್ಲಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿರುವ ಹಾಗೂ ರಾಜ್ಯದ ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ ಪುರಸ್ಕೃತ ರಾಜಾಜಿನಗರ ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ಕೆಟಿಎಸ್ವಿ ಪ್ರಾಂಶುಪಾಲರಾದ ಪ್ರಾಚಾರ್ಯ ರತ್ನ ಪ್ರೊ. ಶ್ರೀಕಂಠಯ್ಯ ಅವರನ್ನು ಭಾನುವಾರ ಬೆಂಗಳೂರಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಶ್ರೀ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಪ್ರಾಚಾರ್ಯ ರತ್ನ ಶ್ರೀಕಂಠಯ್ಯ ಅಭಿನಂದನಾ ಸಮಿತಿ ವತಿಯಿಂದ ಆಯೋಜಿಸಿದ್ದ ಸಮಾರಂಭವನ್ನು ನಾಡೋಜ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ಅವರು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಪ್ರೊ. ಶ್ರೀಕಂಠಯ್ಯ ಅವರು ಹಸಿವನ್ನು ನೀಗಿಸಿಕೊಂಡು, ಅವಮಾನಗಳನ್ನು ಸಹಿಸಿಕೊಂಡು ಸಾಧನೆಯ ಹಾದಿಯಲ್ಲಿ ಮುನ್ನಡೆದಿರುವುದು ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು.
ಕೆಟಿಎಸ್ವಿ ಸಂಸ್ಥೆಯು ಸೇವಾ ಮನೋಭಾವದಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿದೆ. ಶಿಕ್ಷಣವನ್ನು ಎಂದಿಗೂ ವಾಣಿಜ್ಯ ಉದ್ದೇಶದಿಂದ ನೋಡದೆ, ಎಲ್ಲ ವರ್ಗದ ಮಕ್ಕಳಿಗೂ ಅಕ್ಷರ ಕಲಿಸುವ ಕಾರ್ಯ ಮಾಡುತ್ತಿದೆ. ಈ ಸಂಸ್ಥೆಗೆ ನಾನೂ ಅಭಾರಿಯಾಗಿದ್ದೇನೆ ಎಂದು ತಿಳಿಸಿದರು.
ಶೈಕ್ಷಣಿಕ ಕ್ಷೇತ್ರದಲ್ಲಿ ನೀಡಲಾಗುವ ಅತ್ಯುತ್ತಮ ಶಿಕ್ಷಕ ಹಾಗೂ ಪ್ರಾಂಶುಪಾಲ ಪ್ರಶಸ್ತಿಗಳು ಸುಮ್ಮನೆ ದೊರೆಯುವುದಿಲ್ಲ. ಅರ್ಹರನ್ನು ಗುರುತಿಸಿ, ಅವರ ಹಿನ್ನೆಲೆ ಹಾಗೂ ಸೇವೆಯನ್ನು ಪರಿಗಣಿಸಿ ನೀಡಲಾಗುವ ಇಂತಹ ಪ್ರಶಸ್ತಿಗಳಿಗೆ ಬೆಲೆ ಕಟ್ಟಲಾಗದು ಎಂದು ಪುಟ್ಟಣ್ಣ ಹೇಳಿದರು.
ಪ್ರೊ. ಶ್ರೀಕಂಠಯ್ಯ ಅವರು ಶಿಕ್ಷಕರು, ಉಪನ್ಯಾಸಕರು, ಪಾಲಕರು ಹಾಗೂ ವಿದ್ಯಾರ್ಥಿಗಳ ವಿಶ್ವಾಸ ಗಳಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾಮಾಣಿಕತೆ, ನಂಬಿಕೆ ಹಾಗೂ ಬದ್ಧತೆಯಿಂದ ಸೇವೆ ಸಲ್ಲಿಸುತ್ತಿರುವ ಅವರಿಗೆ ರಾಜ್ಯದ ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ ಲಭಿಸಿರುವುದು ಅರ್ಹ ಗೌರವವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರೊ. ಶ್ರೀಕಂಠಯ್ಯ ಅವರ ಸೇವೆ ಇತರರಿಗೆ ಮಾದರಿಯಾಗಿದೆ. ಅವರ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಉತ್ತಮ ಸಾಧಕರಾಗಿ ಹೊರಹೊಮ್ಮಬೇಕು ಎಂದು ಸಲಹೆ ನೀಡಿದರು.
ಸೇವೆಗೆ ದೊರೆಯುವ ಪ್ರಶಸ್ತಿಗಳು ವ್ಯಕ್ತಿಯ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಸಮುದ್ರದಷ್ಟೇ ವಿಶಾಲವಾಗಿರುವ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ರಾಜಾಜಿನಗರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕಂಠಯ್ಯ ಅವರಿಗೆ ದೊರೆತಿರುವ ಗೌರವ ಸಂತಸದ ವಿಚಾರ ಎಂದು ಹೇಳಿದರು.
ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿ ತೋರಿದ ಶ್ರೀಕಂಠಯ್ಯ: ಶ್ರೀಕಾಂತ್
ಕೆಪಿಸಿಸಿ ಹಿಂದುಳಿದ ವರ್ಗದ ಉಪಾಧ್ಯಕ್ಷ ಹಾಗೂ ಕೆಎಕೆಟಿಎಸ್ ಅಧ್ಯಕ್ಷರಾದ ಶ್ರೀಕಾಂತ್ ಮಾತನಾಡಿ, ಪ್ರೊ. ಶ್ರೀಕಂಠಯ್ಯ ಅವರ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದಿರುವ ಸಾವಿರಾರು ವಿದ್ಯಾರ್ಥಿಗಳು ಇಂದು ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಮಾಜದಲ್ಲಿ ತಮ್ಮದೇ ಆದ ಸ್ಥಾನ ಗಳಿಸಿದ್ದಾರೆ ಎಂದು ಹೇಳಿದರು.
ತಮ್ಮ ವಿದ್ಯಾರ್ಥಿ ಜೀವನವನ್ನು ಸ್ಮರಿಸಿಕೊಂಡ ಶ್ರೀಕಾಂತ್, ತಾವು ವಿದ್ಯಾರ್ಥಿಯಾಗಿದ್ದಾಗ ಅಕ್ಷರ ಕಲಿಯುವ ಬಗ್ಗೆ ಹೆಚ್ಚಿನ ಆಸಕ್ತಿ ಇರಲಿಲ್ಲ. ಆದರೆ ಗುರುಗಳ ಮೆಚ್ಚಿನ ವಿದ್ಯಾರ್ಥಿಯಾಗಿದ್ದೆ ಎಂದು ಹೇಳಿದರು.
ಶ್ರೀಕಂಠಯ್ಯ ಅವರ ಸಾವಿರಾರು ವಿದ್ಯಾರ್ಥಿಗಳು ಒಗ್ಗೂಡಿ ಈ ಅಭಿನಂದನಾ ಸಮಾರಂಭವನ್ನು ಆಯೋಜಿಸಿರುವುದು ಅವರ ಸಾಧನೆ, ಯಶಸ್ಸು ಹಾಗೂ ಆದರ್ಶಗಳನ್ನು ಇಡೀ ರಾಜ್ಯಕ್ಕೆ ಪರಿಚಯಿಸುವ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಜಂಟಿ ನಿರ್ದೇಶಕ ಎಲ್. ಮುತ್ತುರಾಜು, ಉದ್ಯಮಿ ಎಂ.ಕೆ. ಚಂದ್ರಶೇಖರ್, ಬಿಡಿಎ ಸದಸ್ಯ ಪಿ. ಗಾಂಧಿ, ಮಾಗಡಿ ಟಿಎಪಿಸಿಎಂ ಅಧ್ಯಕ್ಷ ರಮೇಶ್, ಕೆಎಕೆಟಿಎಸ್ ಕಾರ್ಯಾಧ್ಯಕ್ಷ ಅರ್ಜುನ್, ಗೌರವ ಕಾರ್ಯದರ್ಶಿ ಕೆಂಪಯ್ಯ, ಗೌರವಾಧ್ಯಕ್ಷ ಬಿ. ನರಸಿಂಹಮೂರ್ತಿ, ಅಧ್ಯಕ್ಷ ಎಸ್.ಕೆ. ಸಿದ್ದಯ್ಯ ಸೇರಿದಂತೆ ಕರ್ನಾಟಕ ಅಗ್ನಿವಂಶ ಕ್ಷತ್ರಿಯ ತಿಗಳರ ಸಂಘ, ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ, ಉಪನ್ಯಾಸಕರ ಸಂಘ ಸೇರಿದಂತೆ ವಿವಿಧ ಶೈಕ್ಷಣಿಕ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.








