* ಗ್ರೀನ್ ಎನರ್ಜಿ ಕ್ಷೇತ್ರಕ್ಕೆ 1 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ, 3 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿ: ಅನಂತ್ ಅಂಬಾನಿ ಘೋಷಣೆ
* “ನನ್ನನ್ನು ಆಂಧ್ರದ ಮಗನೆಂದು ಭಾವಿಸಿ”-ತೆಲುಗಿನಲ್ಲಿ ಮಾತನಾಡಿದ ಅನಂತ್
* ರೈತರು ತಮ್ಮ ಜಮೀನುಗಳಿಗೆ ತಾವೇ ‘ಸಿಇಒ’ಗಳು; ‘ಅನ್ನದಾತ’ರನ್ನು ಇಂಧನ ಪೂರೈಕೆದಾರರನ್ನಾಗಿಯೂ ಪರಿವರ್ತಿಸುವ ಗುರಿ
ಮದನಪಲ್ಲಿ, ಅಕ್ಟೋಬರ್ 02, 2026: ಆಂಧ್ರಪ್ರದೇಶದ ಹಸಿರು ಇಂಧನ (ಗ್ರೀನ್ ಎನರ್ಜಿ) ಕ್ಷೇತ್ರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯು ಬರೋಬ್ಬರಿ 1 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯಡಿ ರಾಜ್ಯಾದ್ಯಂತ ಬಯೋಗ್ಯಾಸ್ ಘಟಕಗಳನ್ನು ( ಸಿಬಿಜಿ) ಘಟಕಗಳನ್ನು ಸ್ಥಾಪಿಸಲಾಗುವುದು. ಮುಂಬರುವ ದಶಕಗಳಲ್ಲಿ ಈ ಹೂಡಿಕೆಯು ರಾಜ್ಯದಲ್ಲಿ 3 ಲಕ್ಷಕ್ಕೂ ಅಧಿಕ ಉದ್ಯೋಗಗಳನ್ನು ಸೃಷ್ಟಿಸುವುದಲ್ಲದೆ, ಸುಮಾರು 60,000 ಕೋಟಿ ರೂ. ಆದಾಯ ತಂದುಕೊಡಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ತಿಳಿಸಿದ್ದಾರೆ. ಈ ಬಯೋಗ್ಯಾಸ್ ಘಟಕಗಳಲ್ಲಿ ಆಹಾರ ತ್ಯಾಜ್ಯ, ಕೃಷಿ ತ್ಯಾಜ್ಯಗಳನ್ನು ಬಳಸಿ ಬಯೋಗ್ಯಾಸ್ ಉತ್ಪಾದಿಸಲಾಗುವುದು. ಅದನ್ನು ಸಾರಿಗೆ, ಉದ್ದಿಮೆ ಮತ್ತು ವಾಣಿಜ್ಯೋದ್ದೇಶಕ್ಕೆ ಬಳಸಲಾಗುವುದು.
” ರೈತ ಸಮುದಾಯ ಹಾಗೂ ದೇಶದ ಇಂಧನ ಅಗತ್ಯತೆಗಳ ಕುರಿತು ಮಾತನಾಡಿದ ಅನಂತ್ ಅಂಬಾನಿ, ಇಂದು ಭಾರತದ ಆಹಾರ ಭದ್ರತೆಯನ್ನು ಗಟ್ಟಿಗೊಳಿಸುತ್ತಿರುವ ರೈತರೇ, ನಾಳಿನ ದೇಶದ ಇಂಧನ ಭದ್ರತೆಯಲ್ಲೂ ಪ್ರಮುಖ ಪಾತ್ರ ವಹಿಸಬಲ್ಲರು ಎಂದರು. ರೈತರನ್ನು ಕೇವಲ ‘ಅನ್ನದಾತ’ರನ್ನಾಗಿ ಮಾತ್ರವಲ್ಲದೆ, ಭವಿಷ್ಯದ ” ಇಂಧನ ದಾತʼʼರನ್ನಾಗಿ ಪರಿವರ್ತಿಸುವ ದಿಟ್ಟ ಹೆಜ್ಜೆ ಇದಾಗಿದೆʼʼ ಎಂದು ಅವರು ಬಣ್ಣಿಸಿದರು.
ಮದನಪಲ್ಲಿಯ ರಾಯಲಸೀಮೆ ತೋಟಗಾರಿಕೆ ಕೇಂದ್ರ ಇಂಡಿಯನ್ ಸ್ಕೂಲ್ ಆಫ್ ಅಗ್ರಿಕಲ್ಚರ್ ಸಂಸ್ಥೆಯ ಶಂಕುಸ್ಥಾಪನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ನಾರಾ ಲೋಕೇಶ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ (ಎಐ), ಡ್ರೋನ್ಗಳು ಮತ್ತು ರೋಬೋಟಿಕ್ಸ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ರೈತರು ಹೆಚ್ಚಿನ ಲಾಭ ಪಡೆಯಬಹುದು. ಇಂಡಿಯನ್ ಸ್ಕೂಲ್ ಆಫ್ ಅಗ್ರಿಕಲ್ಚರ್ ಸಂಸ್ಥೆಯ ತರಬೇತಿಯನ್ನು ಜಿಯೊ ಆಪ್ನಲ್ಲಿ ವರ್ಚುವಲ್ ತರಗತಿಗಳ ಮೂಲಕ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಲಕ್ಷಾಂತರ ರೈತರಿಗೆ ತಲುಪಿಸಲಾಗುವುದು ಎಂದರು. ಜೊತೆಗೆ, ‘ಜಿಯೋ ಕೃಷಿ’ ವೇದಿಕೆಯ ತಂತ್ರಜ್ಞಾನವನ್ನು ರೈತರು ಬಳಸಿಕೊಳ್ಳಲು ಅನುಕೂಲ ಕಲ್ಪಿಸುವುದಾಗಿಯೂ ತಿಳಿಸಿದರು.
“ಭಾರತವು ಜಗತ್ತಿಗೆ ಹಲವಾರು ಕಂಪನಿಗಳ ಸಿಇಒಗಳನ್ನು ನೀಡಿದೆ. ಈಗ ನಾವು ರೈತರನ್ನು ಅವರವರ ಜಮೀನಿಗೆ ಅವರೇ ‘ಸಿಇಒ’ಗಳನ್ನಾಗುವಂತೆ ಮಾಡಬೇಕು” ಎಂದು ಅನಂತ್ ಹೇಳಿದರು. ಯುವಕರು ಹೆಮ್ಮೆಯಿಂದ ಆಯ್ಕೆ ಮಾಡಿಕೊಳ್ಳುವಂತಹ ವೃತ್ತಿಪರ ಹಾಗೂ ಗೌರವಾನ್ವಿತ ಕ್ಷೇತ್ರವಾಗಿ ಕೃಷಿಯನ್ನು ರೂಪಿಸಬೇಕಿದೆ ಎಂದರು. ತಮ್ಮ ಭಾಷಣದ ಕೊನೆಯಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಉದ್ದೇಶಿಸಿ ತೆಲುಗಿನಲ್ಲಿ, “ನನ್ನು ಆಂಧ್ರ ಬಿಡ್ಡಗ ಭಾವಿಂಚಂಡಿ” (ನನ್ನನ್ನು ಆಂಧ್ರದ ಮಗನೆಂದು ಭಾವಿಸಿ) ಎಂದು ಹೇಳಿದರು. ರಾಜ್ಯ ಸರ್ಕಾರ ಹಾಗೂ ರೈತರೊಂದಿಗೆ ಕೈಜೋಡಿಸಿ ರಿಲಯನ್ಸ್ ಈ ಸಹಭಾಗಿತ್ವವನ್ನು ಯಶಸ್ವಿಯಾಗಿ ಮುನ್ನಡೆಸಲಿದೆ ಎಂದು ಅವರು ಭರವಸೆ ನೀಡಿದರು.






