ಚಿಕ್ಕಬಳ್ಳಾಪುರ: ಜಿಲ್ಲಾ ಕಾಂಗ್ರೆಸ್ ರಾಜಕಾರಣದಲ್ಲಿ ಹತ್ತಿಕೊಂಡಿರುವ ಕಿಚ್ಚು ಈಗ ಅಕ್ಷರಶಃ ಮಹಾಭಾರತದ ಕುರುಕ್ಷೇತ್ರವಾಗಿ ಬದಲಾಗಿದೆ. ಒಂದು ಕಾಲದಲ್ಲಿ ಮಾಜಿ ಸಚಿವ ಡಾ ಎಂ ಸಿ ಸುಧಾಕರ್ ಅವರನ್ನು ರಾಜಕೀಯ ಗುರು ಎಂದು ಕರೆಯುತ್ತಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಈಗ ಅವರ ವಿರುದ್ಧವೇ ಬಹಿರಂಗ ಸಮರ ಸಾರಿದ್ದಾರೆ. ಸುಧಾಕರ್ ಅವರನ್ನು ಚಿಂತಾಮಣಿಯ ದೊಣ್ಣೆ ನಾಯಕ ಎಂದು ಕರೆದಿರುವ ಪ್ರದೀಪ್ ಈಶ್ವರ್, ಅಕ್ರಮ ಆಸ್ತಿಗಳ ದಾಖಲೆ ಬಿಡುಗಡೆ ಮಾಡುವ ಎಚ್ಚರಿಕೆ ನೀಡುವ ಮೂಲಕ ಕಾಂಗ್ರೆಸ್ ಪಾಳಯದಲ್ಲಿ ದೊಡ್ಡ ಭೂಕಂಪ ಸೃಷ್ಟಿಸಿದ್ದಾರೆ.
ನಾನು ಕೆ ಹೆಚ್ ಮುನಿಯಪ್ಪನಲ್ಲ, ಎಚ್ಚರಿಕೆ ಇರಲಿ
ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ಮಾಜಿ ಸಚಿವ ಸುಧಾಕರ್ ವಿರುದ್ಧ ಆಕ್ರೋಶ ಹೊರಹಾಕಿರುವ ಪ್ರದೀಪ್ ಈಶ್ವರ್, ಹಳೆಯ ರಾಜಕೀಯ ಇತಿಹಾಸವನ್ನು ಕೆದಕಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಹಿರಿಯ ನಾಯಕ ಕೆ ಹೆಚ್ ಮುನಿಯಪ್ಪ ಅವರ ಕುಟುಂಬಕ್ಕೆ ಟಿಕೆಟ್ ತಪ್ಪಿಸಲು ನೀವು ಹಠಕ್ಕೆ ಬಿದ್ದಿದ್ದೀರಿ. ಶಿಡ್ಲಘಟ್ಟದ ರಾಜುಗೌಡರ ರಾಜಕೀಯ ಭವಿಷ್ಯವನ್ನು ವಿನಾಕಾರಣ ಹಾಳು ಮಾಡಿದ್ದೀರಿ. ಆದರೆ ನೆನಪಿರಲಿ, ಕೆ ಹೆಚ್ ಮುನಿಯಪ್ಪನವರು ಸೌಮ್ಯ ಸ್ವಭಾವದವರು, ಆದರೆ ನಾನು ಹಾಗಲ್ಲ. ನನ್ನ ಮೇಲೆ ಒಂದು ಕಲ್ಲು ಬಿದ್ದರೆ ನಾನು ಹತ್ತು ಕಲ್ಲುಗಳನ್ನು ಬಿಸಾಡುವ ವ್ಯಕ್ತಿತ್ವದವನು ಎಂದು ಪ್ರದೀಪ್ ಈಶ್ವರ್ ಗುಡುಗಿದ್ದಾರೆ.
ಬರಿ ವಾಗ್ದಾಳಿ ಮಾಡುವುದಷ್ಟೇ ಅಲ್ಲದೆ, ಪ್ರದೀಪ್ ಈಶ್ವರ್ ಅವರು ಸಚಿವ ಸುಧಾಕರ್ ಅವರ ವಿರುದ್ಧ ಭ್ರಷ್ಟಾಚಾರದ ಬಾಂಬ್ ಸಿಡಿಸಿದ್ದಾರೆ. ಚಿಂತಾಮಣಿಯ ಪ್ರಭಾವಿ ನಾಯಕ ಹೈದರಾಬಾದ್ನಲ್ಲಿ ಬೃಹತ್ ಡಯಾಗ್ನಾಸ್ಟಿಕ್ ಸೆಂಟರ್ ಕಟ್ಟಿದ್ದಾರೆ ಮತ್ತು ಮುಂಬೈನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಕಮರ್ಷಿಯಲ್ ಕಾಂಪ್ಲೆಕ್ಸ್ ಖರೀದಿಸಿದ್ದಾರೆ. ಈ ಎಲ್ಲಾ ಅಕ್ರಮಗಳ ಬಗ್ಗೆ ನನ್ನ ಬಳಿ ಮಾಹಿತಿ ಇದೆ. ಇದರ ಜೊತೆಗೆ ಬೆಂಗಳೂರಿನ ಪ್ರತಿಷ್ಠಿತ ಕುಟುಂಬದ ಕುಡಿಯೊಬ್ಬ ನನ್ನ ವಿರುದ್ಧ ಕೆಲವರನ್ನು ಎತ್ತಿಕಟ್ಟುತ್ತಿದ್ದಾನೆ, ಅವನ ಆಸ್ತಿ ವಿವರಗಳನ್ನೂ ಶೀಘ್ರವೇ ಬಯಲು ಮಾಡುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಚಿಕ್ಕಬಳ್ಳಾಪುರಕ್ಕೆ ಬರಬೇಡಿ ಎಂದು ವಾರ್ನಿಂಗ್
ಸುಧಾಕರ್ ಬಣವು ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರದೀಪ್ ಈಶ್ವರ್ ವಿರುದ್ಧ ಕೆಪಿಸಿಸಿಗೆ ದೂರು ನೀಡಿದ್ದರಿಂದ ಶಾಸಕರು ಕೆಂಡಾಮಂಡಲವಾಗಿದ್ದಾರೆ. ಚಿಂತಾಮಣಿಯಲ್ಲಿ ರಾಜಕೀಯ ಮಾಡುತ್ತಿದ್ದ ನೀವು ಈಗ ಚಿಕ್ಕಬಳ್ಳಾಪುರಕ್ಕೆ ಪಾದಾರ್ಪಣೆ ಮಾಡುತ್ತಿದ್ದೀರಿ. ಆದರೆ ನನ್ನ ಕ್ಷೇತ್ರದಲ್ಲಿ ನಿಮ್ಮ ಬೇಳೆ ಬೇಯಲು ನಾನು ಬಿಡುವುದಿಲ್ಲ. ನಿಮ್ಮ ತಾಕತ್ತು ಎಷ್ಟಿದೆಯೋ ಅಷ್ಟು ತೋರಿಸಿ, ನಿಮ್ಮ ವಿರುದ್ಧ ನನ್ನ ಸಮರ ನಿರಂತರವಾಗಿರುತ್ತದೆ ಎಂದು ಅವರು ಲೆಟ್ಸ್ ಫೈಟ್ ಎಂದು ತೊಡೆ ತಟ್ಟಿದ್ದಾರೆ.
ಹೈಕಮಾಂಡ್ ಗೆ ದೊಡ್ಡ ತಲೆನೋವಾದ ಗುರು ಶಿಷ್ಯರ ಕಾಳಗ
ಸಾಮಾನ್ಯವಾಗಿ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧ ಪ್ರದೀಪ್ ಈಶ್ವರ್ ಗುಡುಗುತ್ತಿದ್ದರು. ಆದರೆ ಈಗ ಸ್ವತಃ ಕಾಂಗ್ರೆಸ್ ಸಚಿವರ ವಿರುದ್ಧವೇ ಸಮರಕ್ಕೆ ಇಳಿದಿರುವುದು ರಾಜ್ಯ ನಾಯಕರಿಗೆ ದೊಡ್ಡ ಮುಜುಗರ ತಂದಿದೆ. ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಈ ವಿವಾದಕ್ಕೆ ತೇಪೆ ಹಾಕಲು ಯತ್ನಿಸಿದರೂ, ಪ್ರದೀಪ್ ಈಶ್ವರ್ ಮಾತ್ರ ತಾವು ಅಂಜುವ ವ್ಯಕ್ತಿಯಲ್ಲ ಎಂದು ಸಾರುತ್ತಿದ್ದಾರೆ. ಅತಿ ಶೀಘ್ರದಲ್ಲೇ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಅವರು ಹೇಳಿರುವುದು ಸುಧಾಕರ್ ಬಣದಲ್ಲಿ ಆತಂಕ ಮೂಡಿಸಿದೆ.








