ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಂಚು ರೂಪಿಸಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಗಂಭೀರ ಆರೋಪ ಮಾಡಿದ್ದಾರೆ. ಅಕ್ಟೋಬರ್ 10 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ಪಕ್ಷದ ಕಾರ್ಯಕರ್ತರಿಗೆ ಪೊಲೀಸರು ನೋಟಿಸ್ ನೀಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭಿಜಿತ್ ದೀಪ್ಕೆ, ಮಹಾರಾಷ್ಟ್ರದ ಚಂದ್ರಾಪುರ ಪೊಲೀಸರು ನಮ್ಮ ಕಾರ್ಯಕರ್ತರಿಗೆ ನೋಟಿಸ್ ಜಾರಿ ಮಾಡಿ ದೆಹಲಿಗೆ ಹೋಗದಂತೆ ತಡೆಯುತ್ತಿದ್ದಾರೆ. ಕೇವಲ ನೋಟಿಸ್ ನೀಡುವುದಷ್ಟೇ ಅಲ್ಲದೆ, ದೆಹಲಿ ಪ್ರಯಾಣಕ್ಕೆ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸುವ ಮೂಲಕ ಕಾರ್ಯಕರ್ತರನ್ನು ಮಾನಸಿಕವಾಗಿ ಕುಗ್ಗಿಸಲು ಯತ್ನಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದ್ದು, ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಎತ್ತಿ ತೋರಿಸುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಒಂದು ದೇಶ ಒಂದು ಚುನಾವಣೆ ಹೆಸರಲ್ಲಿ ಸರ್ವಾಧಿಕಾರ
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ದೀಪ್ಕೆ, ಇವರು ಹೇಳುವ ಒಂದು ದೇಶ ಒಂದು ಚುನಾವಣೆ ಕೇವಲ ಒಂದು ಮುಖವಾಡ ಅಷ್ಟೇ. ಇದರ ಹಿಂದಿರುವ ಅಸಲಿ ಉದ್ದೇಶ ದೇಶದಲ್ಲಿ ವಿರೋಧ ಪಕ್ಷಗಳೇ ಇಲ್ಲದಂತೆ ಮಾಡಿ ಒಂದು ದೇಶ ಒಂದು ರಾಜಕೀಯ ಪಕ್ಷ ಎನ್ನುವ ಸರ್ವಾಧಿಕಾರವನ್ನು ಜಾರಿಗೆ ತರುವುದಾಗಿದೆ ಎಂದು ಟೀಕಿಸಿದರು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಇಂತಹ ಪ್ರಯತ್ನಗಳನ್ನು ನಾವು ಸುಮ್ಮನೆ ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.
ಪ್ರತಿಭಟನೆ ಹಿಂಸಾತ್ಮಕವಾಗಲಿದೆ ಎಂದು ಪೊಲೀಸರಿಗೆ ತಿಳಿದಿದ್ದು ಹೇಗೆ
ಪೊಲೀಸರು ನೀಡಿರುವ ನೋಟಿಸ್ ನಲ್ಲಿ ಈ ಪ್ರತಿಭಟನೆ ಹಿಂಸಾತ್ಮಕವಾಗುವ ಸಾಧ್ಯತೆಯಿದೆ ಎಂದು ಉಲ್ಲೇಖಿಸಿರುವುದನ್ನು ದೀಪ್ಕೆ ಪ್ರಶ್ನಿಸಿದರು. ಪ್ರತಿಭಟನೆ ಆರಂಭವಾಗುವ ಮೊದಲೇ ಅದು ಹಿಂಸಾರೂಪ ತಾಳುತ್ತದೆ ಎಂದು ಪೊಲೀಸರಿಗೆ ಭವಿಷ್ಯ ಹೇಳಲು ಹೇಗೆ ಸಾಧ್ಯ? ಸರ್ಕಾರದ ಸೂಚನೆಯಂತೆ ಪೊಲೀಸರೇನಾದರೂ ಪ್ರತಿಭಟನೆಯಲ್ಲಿ ಹಿಂಸೆ ನಡೆಸಲು ಸಂಚು ರೂಪಿಸಿದ್ದಾರೆಯೇ ಎಂದು ಅವರು ಅನುಮಾನ ವ್ಯಕ್ತಪಡಿಸಿದರು. ನಾವು ಗಾಂಧಿ ಮತ್ತು ಅಂಬೇಡ್ಕರ್ ಅವರ ಅಹಿಂಸಾ ತತ್ವಗಳಲ್ಲಿ ನಂಬಿಕೆ ಇಟ್ಟವರು, ನಮ್ಮ ಹೋರಾಟ ಶಾಂತಿಯುತವಾಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಪಟ್ಟು
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮೇಲೆ ಗಂಭೀರ ಆರೋಪಗಳನ್ನು ಮಾಡಿರುವ ಸಿಜೆಪಿ, ಅವರ ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 10 ರಂದು ಜಂತರ್ ಮಂತರ್‌ನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದೆ. ಎಷ್ಟೇ ಅಡೆತಡೆಗಳು ಎದುರಾದರೂ ದೆಹಲಿಗೆ ಹೋಗಿಯೇ ತೀರುತ್ತೇವೆ ಎಂದು ದೀಪ್ಕೆ ಶಪಥ ಮಾಡಿದ್ದಾರೆ. ಕಾರ್ಯಕರ್ತರ ಧ್ವನಿಯನ್ನು ಅಡಗಿಸಲು ನೋಟಿಸ್ ಎಂಬ ಅಸ್ತ್ರ ಬಳಸುತ್ತಿರುವ ಸರ್ಕಾರದ ತಂತ್ರಗಳು ಈ ಬಾರಿ ಫಲ ನೀಡುವುದಿಲ್ಲ ಎಂದು ಅವರು ಗುಡುಗಿದ್ದಾರೆ.








