ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ರಾಜಕೀಯ ಜೀವನದ ಸುತ್ತ ಈಗ ವಿವಾದಗಳ ಸುನಾಮಿ ಎದ್ದಿದೆ. ಸ್ವಪಕ್ಷದ ನಾಯಕರ ವಿರುದ್ಧವೇ ತೊಡೆ ತಟ್ಟಿರುವ ಅವರು, ಇದೀಗ ಮತ್ತೊಂದು ಸ್ಫೋಟಕ ಸತ್ಯ ಬಯಲು ಮಾಡುವ ಮೂಲಕ ಕಾಂಗ್ರೆಸ್ ಪಾಳಯದಲ್ಲಿ ಭೂಕಂಪ ಸೃಷ್ಟಿಸಿದ್ದಾರೆ. ನಾನು ರಾಜಕೀಯ ಉಳಿವಿಗಾಗಿ ಮತ್ತು ವೋಟಿಗಾಗಿ ಸುಮಾರು 30 ಜನ ಪ್ರಭಾವಿ ನಾಯಕರಿಗೆ ಕೋಟಿ ಕೋಟಿ ರೂಪಾಯಿ ಹಣ ಕೊಟ್ಟಿದ್ದೇನೆ ಎಂದು ಹೇಳುವ ಮೂಲಕ ಭ್ರಷ್ಟಾಚಾರದ ಮತ್ತು ಲೂಟಿಯ ಹೊಸ ಆಯಾಮವನ್ನು ತೆರೆದಿಟ್ಟಿದ್ದಾರೆ.
ಹಣ ಕೇಳೋರಿಗೇ ಇಲ್ಲಿ ಹೆಚ್ಚು ಮರ್ಯಾದೆ ಪ್ರದೀಪ್ ಈಶ್ವರ್ ಆಕ್ರೋಶ
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅಸಮಾಧಾನ ಹೊರಹಾಕಿದ ಪ್ರದೀಪ್ ಈಶ್ವರ್, ನಾಯಕರ ವೈಯಕ್ತಿಕ ಹಣದ ದಾಹಕ್ಕೆ ತಾವು ಬಲಿಯಾಗಿರುವುದಾಗಿ ಹೇಳಿದ್ದಾರೆ. ಪಕ್ಷದ ಕೆಲಸಕ್ಕೆ ಹಣ ಕೇಳಿದರೆ ಕೊಡಬಹುದು, ಆದರೆ ಇಲ್ಲಿ ಪ್ರತಿಯೊಬ್ಬ ನಾಯಕನೂ ವೈಯಕ್ತಿಕ ಕಷ್ಟಕ್ಕೆ ಎಂದು ಹೇಳಿ ಲಕ್ಷ ಲಕ್ಷ ಹಣ ಪೀಕುತ್ತಿದ್ದಾರೆ. ಒಮ್ಮೆ ಕಾಲ್ ರಿಸೀವ್ ಮಾಡಬೇಕಾದರೂ 10 ಲಕ್ಷ ರೂಪಾಯಿ ಬೇಡಿಕೆ ಇಡುತ್ತಾರೆ. ಪ್ರಭಾವಿ ನಾಯಕರು ಟ್ರಿಪ್ ಗೆ ಹೋದರೆ ಅಥವಾ ಶಿರಡಿಗೆ ಹೋದರೆ ವಿಮಾನದ ಟಿಕೆಟ್ ಕೂಡ ನನ್ನ ಜೇಬಿನಿಂದಲೇ ಕೊಡಬೇಕು. ಹೀಗೆ ಕೋಟಿ ಕೋಟಿ ಸುರಿದು ಈಗ ನಾನು ಸುಸ್ತಾಗಿದ್ದೇನೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಸುಧಾಕರ್ ಬಣದಿಂದ ಪ್ರದೀಪ್ ಈಶ್ವರ್ ಅಮಾನತಿಗೆ ಪಟ್ಟು
ಪ್ರದೀಪ್ ಈಶ್ವರ್ ಅವರ ಈ ಸರಣಿ ಹೇಳಿಕೆಗಳಿಂದ ಕೆರಳಿರುವ ಚಿಂತಾಮಣಿ ಶಾಸಕ ಡಾ ಎಂ ಸಿ ಸುಧಾಕರ್ ಬೆಂಬಲಿಗರು ಈಗ ಉಗ್ರ ಸ್ವರೂಪದ ಹೋರಾಟಕ್ಕೆ ಇಳಿದಿದ್ದಾರೆ. ಪ್ರದೀಪ್ ಈಶ್ವರ್ ಅವರನ್ನು ಕೂಡಲೇ ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸಬೇಕು ಮತ್ತು ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ. ಚಿಂತಾಮಣಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ್, ಪ್ರದೀಪ್ ಈಶ್ವರ್ ಒಬ್ಬ ಅಹಂಕಾರಿ ಶಾಸಕ. ತಮ್ಮನ್ನು ಬೆಳೆಸಿದ ಸುಧಾಕರ್ ಅವರ ವಿರುದ್ಧವೇ ಆಸ್ತಿ ಬಯಲು ಮಾಡುತ್ತೇನೆ ಎಂದು ಹೇಳುವುದು ಅವರ ಕೃತಘ್ನತೆಯನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಪ್ರದೀಪ್ ಗೆ ಟಿಕೆಟ್ ನೀಡಬೇಡಿ ಹೈಕಮಾಂಡ್ ಗೆ ಮನವಿ
ಚಿಕ್ಕಬಳ್ಳಾಪುರ ಕಾಂಗ್ರೆಸ್ ನಲ್ಲಿ ಎದ್ದಿರುವ ಈ ಭಿನ್ನಮತ ಈಗ ಕೆಪಿಸಿಸಿ ಅಧ್ಯಕ್ಷ ಮತ್ತು ಮುಖ್ಯಮಂತ್ರಿಗಳ ಅಂಗಳಕ್ಕೆ ತಲುಪಿದೆ. ಪ್ರದೀಪ್ ಈಶ್ವರ್ ಅವರ ನಡವಳಿಕೆಯಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆ ಹಾಳಾಗುತ್ತಿದೆ. ಆದ್ದರಿಂದ 2028 ರ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡಲೇಬಾರದು ಎಂದು ಸುಧಾಕರ್ ಬಣದ ಮುಖಂಡರು ಪಟ್ಟು ಹಿಡಿದಿದ್ದಾರೆ. ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ವರ್ತಿಸುತ್ತಿರುವ ಶಾಸಕರ ವಿರುದ್ಧ ಶಿಸ್ತು ಕ್ರಮ ಜರುಗಿಸದಿದ್ದರೆ ಪಕ್ಷಕ್ಕೆ ದೊಡ್ಡ ಮಟ್ಟದ ಹಿನ್ನಡೆಯಾಗಲಿದೆ ಎಂದು ಎಚ್ಚರಿಸಿದ್ದಾರೆ.
ರಾಜಕೀಯ ಕುರುಕ್ಷೇತ್ರವಾಗಿ ಬದಲಾದ ಚಿಕ್ಕಬಳ್ಳಾಪುರ ಜಿಲ್ಲೆ
ಒಂದು ಕಾಲದಲ್ಲಿ ಗುರು ಮತ್ತು ಶಿಷ್ಯನಂತಿದ್ದ ಸುಧಾಕರ್ ಮತ್ತು ಪ್ರದೀಪ್ ಈಶ್ವರ್ ಈಗ ಪರಮ ಶತ್ರುಗಳಂತೆ ವರ್ತಿಸುತ್ತಿದ್ದಾರೆ. ಪ್ರದೀಪ್ ಈಶ್ವರ್ ಅವರ ಹಣಕಾಸಿನ ವ್ಯವಹಾರದ ಹೇಳಿಕೆಯು ಇಡೀ ಕಾಂಗ್ರೆಸ್ ಸರ್ಕಾರದ ಇಮೇಜ್ ಗೆ ಧಕ್ಕೆ ತರುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ನಾಯಕರಿಗೆ ಕೋಟಿ ಕೋಟಿ ಹಣ ಸಂದಾಯವಾಗಿದೆ ಎಂಬ ಶಾಸಕರ ಮಾತೇ ಈಗ ವಿರೋಧ ಪಕ್ಷಗಳಿಗೆ ದೊಡ್ಡ ಅಸ್ತ್ರವಾಗಿದೆ. ಹೈಕಮಾಂಡ್ ನಾಯಕರು ಮಧ್ಯಪ್ರವೇಶಿಸಿ ಈ ಬಿಕ್ಕಟ್ಟನ್ನು ಶಮನಗೊಳಿಸುತ್ತಾರೆಯೇ ಅಥವಾ ಈ ಒಡಕು ಪಕ್ಷದ ಪತನಕ್ಕೆ ಕಾರಣವಾಗುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.







