ಹಾಸನ: ವಿಶ್ವಪ್ರಸಿದ್ಧ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಜಾತ್ರೆಯ ಸಿದ್ಧತೆಗಾಗಿ ಅಧಿಕಾರಿಗಳು ಸಿದ್ಧಪಡಿಸಿರುವ ಖರ್ಚು ವೆಚ್ಚದ ಪಟ್ಟಿ ಕಂಡು ಜಿಲ್ಲಾ ಉಸ್ತುವಾರಿ ಸಚಿವ ಕೆ ಎಂ ಶಿವಲಿಂಗೇಗೌಡ ಅವರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಸಾರ್ವಜನಿಕರ ಹಣವನ್ನು ಇಷ್ಟೊಂದು ದುಂದುವೆಚ್ಚ ಮಾಡುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಜಿಲ್ಲಾಧಿಕಾರಿಗಳ ಸಮ್ಮುಖದಲ್ಲೇ ಅಧಿಕಾರಿಗಳ ಕ್ಲಾಸ್ ತಗೆದುಕೊಂಡಿದ್ದಾರೆ.
ಒಂದು ಕಂಟ್ರೋಲ್ ರೂಂಗೆ 50 ಲಕ್ಷ ರೂ ಟೆಂಡರ್ ಕೇಳಿ ಸಚಿವರು ಶಾಕ್
ಹಾಸನಾಂಬೆ ಉತ್ಸವದ ಸಿದ್ಧತಾ ಸಭೆಯಲ್ಲಿ ಭಾಗವಹಿಸಿದ್ದ ಸಚಿವರಿಗೆ ಅಧಿಕಾರಿಗಳು ವೆಚ್ಚದ ವಿವರ ನೀಡಿದರು. ಕೇವಲ ಒಂದು ಕಂಟ್ರೋಲ್ ರೂಂ ನಿರ್ಮಾಣಕ್ಕಾಗಿ 50 ಲಕ್ಷ ರೂಪಾಯಿಗಳ ಟೆಂಡರ್ ಕರೆಯಲಾಗಿದೆ ಎಂದು ಕೇಳಿದ ತಕ್ಷಣ ಸಚಿವರು ದಂಗಾದರು. 50 ಲಕ್ಷ ಅಂದ್ರೆ ಅರ್ಧ ಕೋಟಿ ರೀ, ಒಂದು ಕಂಟ್ರೋಲ್ ರೂಂಗೆ ಇಷ್ಟೊಂದು ಹಣನಾ? ರಾಜ್ಯದಲ್ಲಿ ಭೀಕರ ಬರಗಾಲವಿದೆ, ಜನ ಸಾಮಾನ್ಯರು ಈ ಬಗ್ಗೆ ಏನು ಮಾತನಾಡಿಕೊಳ್ಳುತ್ತಾರೆ ಎಂಬ ಕನಿಷ್ಠ ಜ್ಞಾನ ಬೇಡವೇ ಎಂದು ಸಚಿವರು ಪ್ರಶ್ನಿಸಿದರು. ಈ ವೇಳೆ ಜಿಲ್ಲಾಧಿಕಾರಿ ಲತಾಕುಮಾರಿ ಅವರು ಸಮರ್ಥನೆ ನೀಡಲು ಮುಂದಾದಾಗ, ಬೇಡದಿದ್ದರೆ ಪಟ್ಟಿಯಿಂದ ತೆಗೆದು ಹಾಕೋಣ ಎಂದು ಅಧಿಕಾರಿಗಳು ಸಬೂಬು ನೀಡಿದರು.
ಈ ಪಾಪದ ಕೆಲಸದಲ್ಲಿ ನಾನು ಪಾಲುದಾರನಾಗಲ್ಲ ಶಿವಲಿಂಗೇಗೌಡರ ಖಡಕ್ ಮಾತು
ಅಧಿಕಾರಿಗಳ ನಡೆಯಿಂದ ತೀವ್ರ ಅಸಮಾಧಾನಗೊಂಡ ಸಚಿವರು, ಜಾತ್ರೆ ಅದ್ದೂರಿಯಾಗಿ ನಡೆಯಬೇಕು ಎನ್ನುವುದು ನನಗೂ ಇಷ್ಟವಿದೆ. ಆದರೆ ಅತಿಯಾದ ದುಂದುವೆಚ್ಚವನ್ನು ನಾನು ಸಹಿಸುವುದಿಲ್ಲ. ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ನಾನು ಕೆಲಸ ಮಾಡುವುದಿಲ್ಲ. ಇಷ್ಟೊಂದು ಹಣ ಸುರಿದು ಜಾತ್ರೆ ಮಾಡುವುದು ಸರಿಯಲ್ಲ. ಒಂದು ವೇಳೆ ಇಷ್ಟೇ ಹಣ ಖರ್ಚು ಮಾಡಬೇಕು ಎಂದಾದರೆ ನಾನು ಈ ಪ್ರಕ್ರಿಯೆಯಿಂದಲೇ ದೂರ ಉಳಿಯುತ್ತೇನೆ. ಬೇಕಿದ್ದರೆ ಮುಖ್ಯಮಂತ್ರಿಗಳಿಗೆ ತಿಳಿಸಿ ನಾನು ವಾಪಸ್ ಹೋಗುತ್ತೇನೆ ಎಂದು ಗುಡುಗಿದರು. 4 ಕಡೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ 65 ಲಕ್ಷ ರೂಪಾಯಿ ವೆಚ್ಚದ ಬಗ್ಗೆಯೂ ಸಚಿವರು ಆಕ್ಷೇಪ ವ್ಯಕ್ತಪಡಿಸಿದರು.
ಎಐ ಟೆಕ್ನಾಲಜಿಗೆ 12 ಲಕ್ಷ ಮೀಸಲು ನನಗಂತೂ ಇದರ ಬಗ್ಗೆ ಗೊತ್ತಿಲ್ಲ
ಜಾತ್ರೆಯಲ್ಲಿ ಜನದಟ್ಟಣೆಯನ್ನು ನಿಯಂತ್ರಿಸಲು ಕೃತಕ ಬುದ್ಧಿಮತ್ತೆ ಅಂದರೆ ಎಐ ತಂತ್ರಜ್ಞಾನ ಬಳಸಲು 12 ಲಕ್ಷ ರೂಪಾಯಿ ಮೀಸಲಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಇದಕ್ಕೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ ಸಚಿವರು, ಈ ಎಐ ಬಗ್ಗೆ ನನಗೇನೂ ಗೊತ್ತಿಲ್ಲ. ನನಗೆ ಗೊತ್ತಿಲ್ಲದ ವಿಷಯದ ಬಗ್ಗೆ ನಾನು ಹೌದು ಎನ್ನುವುದಿಲ್ಲ. ನಿಮಗೆ ಬೇಕಿದ್ದರೆ ಮಾಡಿಕೊಳ್ಳಿ, ಆದರೆ ವೆಚ್ಚದ ಬಗ್ಗೆ ಎಚ್ಚರಿಕೆ ಇರಲಿ ಎಂದರು. ತಂತ್ರಜ್ಞಾನದ ಹೆಸರಿನಲ್ಲಿ ಅನಗತ್ಯವಾಗಿ ಹಣ ಪೋಲು ಮಾಡಬೇಡಿ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಗುತ್ತಿಗೆದಾರರ ಜೊತೆ ಚೌಕಾಸಿ ಮಾಡಿದ ಸಚಿವರು
ಸಭೆಯಲ್ಲೇ ಹಾಜರಿದ್ದ ಕಾಮಗಾರಿ ಗುತ್ತಿಗೆದಾರರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಇದು ದೇವರ ಕೆಲಸ, ಇಲ್ಲಿ ಲೂಟಿ ಮಾಡಲು ನೋಡಬೇಡಿ ಎಂದು ಎಚ್ಚರಿಸಿದರು. ಬಿಲ್ ಮೊತ್ತವನ್ನು ಕಡಿಮೆ ಮಾಡಿ ಕೆಲಸ ಮಾಡಿ ಎಂದು ಚೌಕಾಸಿ ನಡೆಸಿದ ಸಚಿವರು, ಒಂದು ವೇಳೆ ಕೆಲಸದ ಗುಣಮಟ್ಟದಲ್ಲಿ ವ್ಯತ್ಯಾಸವಾದರೆ ಅಥವಾ ಅಕ್ರಮ ನಡೆದರೆ ನಾನು ಬಿಲ್ ಪಾವತಿಗೆ ಸಹಿ ಹಾಕುವುದಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಒಟ್ಟಾರೆಯಾಗಿ ಹಾಸನಾಂಬೆ ಜಾತ್ರೆಯ ಬಜೆಟ್ ಈಗ ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವರ ನಡುವಿನ ಜಟಾಪಟಿಗೆ ಕಾರಣವಾಗಿದೆ.








