ಬೆಂಗಳೂರು: ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಅತ್ಯಂತ ಪ್ರಭಾವಿ ಮತ್ತು ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಅನಿರೀಕ್ಷಿತವಾಗಿ ಅಧಿಕಾರದಿಂದ ಕೆಳಗಿಳಿದ ಹಾದಿಯ ಬಗ್ಗೆ ಈಗ ಸ್ಫೋಟಕ ಚರ್ಚೆಗಳು ಆರಂಭವಾಗಿವೆ. ಸಿದ್ದರಾಮಯ್ಯ ಅವರನ್ನು ಕೇವಲ ರಾಜಕೀಯ ಕಾರಣಗಳಿಗಾಗಿ ಬದಲಿಸಲಾಗಿಲ್ಲ, ಬದಲಾಗಿ ಅವರ ವಿರುದ್ಧ ಒಂದು ವ್ಯವಸ್ಥಿತ ಮತ್ತು ರಹಸ್ಯವಾದ ಸ್ಟಿಂಗ್ ಆಪರೇಷನ್ ನಡೆಸುವ ಮೂಲಕ ಬ್ಲ್ಯಾಕ್ ಮೇಲ್ ಮಾಡಿ ರಾಜೀನಾಮೆ ಪಡೆಯಲಾಯಿತು ಎಂಬ ಆರೋಪ ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಇಡೀ ವಿವಾದದ ಮಧ್ಯೆ ಸ್ವತಃ ಸಿದ್ದರಾಮಯ್ಯ ಅವರು ವಹಿಸಿರುವ ಮೌನವು ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಕುಮಾರಸ್ವಾಮಿ ಎಸೆದ ಸ್ಟಿಂಗ್ ಬಾಂಬ್ ಮತ್ತು ದೆಹಲಿ ರಹಸ್ಯ
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಈ ವಿವಾದಕ್ಕೆ ಮೊದಲ ಕಿಡಿ ಹಚ್ಚಿದ್ದಾರೆ. ಸಿದ್ದರಾಮಯ್ಯ ಅವರನ್ನು ಸಂಪುಟ ವಿಸ್ತರಣೆಯ ಚರ್ಚೆಗೆ ಎಂದು ನಂಬಿಸಿ ದೆಹಲಿಗೆ ಕರೆಯಿಸಿಕೊಳ್ಳಲಾಗಿತ್ತು. ಆದರೆ ಅಲ್ಲಿ ಹೈಕಮಾಂಡ್ ನಾಯಕರು ಮತ್ತು ಪ್ರಸ್ತುತ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸಿದ್ಧಪಡಿಸಿದ್ದ ಸ್ಟಿಂಗ್ ಆಪರೇಷನ್ ನ ವಿಡಿಯೋ ತೋರಿಸಿ ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲಾಯಿತು. ಗೌರವ ಉಳಿಸಿಕೊಳ್ಳಲು ತಕ್ಷಣವೇ ರಾಜೀನಾಮೆ ನೀಡುವಂತೆ ಅವರ ಮೇಲೆ ಒತ್ತಡ ಹೇರಲಾಯಿತು ಎಂದು ಕುಮಾರಸ್ವಾಮಿ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. ಸಿದ್ದರಾಮಯ್ಯ ಅಂತಹ ಹಿರಿಯ ನಾಯಕನಿಗೆ ಕಾಂಗ್ರೆಸ್ ಪಕ್ಷ ನೀಡಿದ ಉಡುಗೊರೆ ಇದೇನಾ ಎಂದು ಅವರು ಪ್ರಶ್ನಿಸಿದ್ದಾರೆ.
ಯತ್ನಾಳ್ ರಿಂದಲೂ ಬ್ಲ್ಯಾಕ್ ಮೇಲ್ ಆರೋಪಕ್ಕೆ ಪುಷ್ಟಿ
ಇದೇ ಹೊತ್ತಿನಲ್ಲಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ವಿಭಿನ್ನವಾದ ಆದರೆ ಅಷ್ಟೇ ಗಂಭೀರವಾದ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಚಾರವೊಂದನ್ನು ಮುಂದಿಟ್ಟುಕೊಂಡು ಅವರಿಗೆ ಬೆದರಿಕೆ ಹಾಕಲಾಗಿತ್ತು. ಈ ಬ್ಲ್ಯಾಕ್ ಮೇಲ್ ತಂತ್ರಕ್ಕೆ ಸಿದ್ದರಾಮಯ್ಯ ಅವರು ಬಲಿಯಾಗಬೇಕಾಯಿತು ಎಂದು ಅವರು ಹೇಳುವ ಮೂಲಕ ಕುಮಾರಸ್ವಾಮಿ ಅವರ ಆರೋಪಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ. ಇಬ್ಬರು ಪ್ರಮುಖ ನಾಯಕರು ಒಂದೇ ರೀತಿಯ ಆರೋಪ ಮಾಡುತ್ತಿರುವುದು ಸಂಶಯದ ಹುತ್ತವನ್ನು ಬೆಳೆಸಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಮೌನವೇಕೆ ಇದು ಸಮ್ಮತಿಯೇ ಅಥವಾ ಅಸಹಾಯಕತೆಯೇ
ಇಷ್ಟೆಲ್ಲಾ ಆರೋಪಗಳು ಕೇಳಿಬರುತ್ತಿದ್ದರೂ ಸಿದ್ದರಾಮಯ್ಯ ಅವರು ಮಾತ್ರ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಅವರ ಈ ನಿಗೂಢ ಮೌನವು ವಿರೋಧ ಪಕ್ಷಗಳಿಗೆ ಅಸ್ತ್ರವಾಗಿ ಪರಿಣಮಿಸಿದೆ. ಸಿದ್ದರಾಮಯ್ಯ ಅವರು ಮೌನವಾಗಿರುವುದು ಅಂದರೆ ಈ ಆರೋಪಗಳಲ್ಲಿ ಸತ್ಯಾಂಶವಿದೆ ಎಂದೇ ಅಥವಾ ಪಕ್ಷದ ಶಿಸ್ತಿಗೆ ಗೌರವ ಕೊಟ್ಟು ಅವರು ಸುಮ್ಮನಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ. ಸಾಮಾಜಿಕ ನ್ಯಾಯದ ಹರಿಕಾರ ಎಂದು ಕರೆಯಲ್ಪಡುವ ಸಿದ್ದರಾಮಯ್ಯ ಅವರು ಈ ಕಪ್ಪು ಚುಕ್ಕೆಯ ಬಗ್ಗೆ ಸ್ಪಷ್ಟನೆ ನೀಡದಿದ್ದರೆ ಅವರ ದೀರ್ಘಕಾಲದ ರಾಜಕೀಯ ಬದುಕಿಗೆ ಇದು ಮುಳುವಾಗುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಒಂದೆಡೆ ಡಿ ಕೆ ಶಿವಕುಮಾರ್ ಮತ್ತು ಕುಮಾರಸ್ವಾಮಿ ನಡುವೆ ಸ್ಟಿಂಗ್ ಆಪರೇಷನ್ ಗಳ ಕುರಿತು ವಾಕ್ಸಮರ ನಡೆಯುತ್ತಿದ್ದರೆ, ಮತ್ತೊಂದೆಡೆ ರಾಜ್ಯದ ಜನತೆ ಅಸಲಿ ಸತ್ಯ ಏನು ಎಂಬುದನ್ನು ತಿಳಿಯಲು ಕಾತುರರಾಗಿದ್ದಾರೆ. ಸಿದ್ದರಾಮಯ್ಯ ಅವರ ರಾಜೀನಾಮೆಯ ಹಿಂದಿನ ಅಸಲಿ ಕಥೆ ಏನು ಎಂಬುದು ಇನ್ನೂ ಕತ್ತಲಲ್ಲೇ ಉಳಿದಿದೆ. ಅಹಿಂದ ವರ್ಗದ ನಾಯಕನಿಗೆ ಅನ್ಯಾಯವಾಗಿದೆಯೇ ಅಥವಾ ಅಧಿಕಾರದ ಹಪಾಹಪಿಯಲ್ಲಿ ಸ್ವಪಕ್ಷೀಯರೇ ಬೆನ್ನಿಗೆ ಚೂರಿ ಹಾಕಿದ್ದಾರೆಯೇ ಎಂಬುದು ಮುಂಬರುವ ದಿನಗಳಲ್ಲಿ ಬಹಿರಂಗವಾಗಬೇಕಿದೆ.







