ದೇಶದ ರಾಜಕೀಯ ರಣಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ನಡುವೆ ಮತಗಳ್ಳತನದ ಆರೋಪಗಳ ಮಹಾಯುದ್ಧವೇ ನಡೆಯುತ್ತಿದೆ. ಮೋದಿ ಅವರು ಮತ ಕಳ್ಳತನ ಮಾಡಿ ಅಕ್ರಮವಾಗಿ ಪ್ರಧಾನಿಯಾಗಿದ್ದಾರೆ ಎಂದು ಕಾಂಗ್ರೆಸ್ ಮತ್ತು ಸಿಜೆಪಿ ನಾಯಕರು ದೆಹಲಿಯ ಬೀದಿಗಳಲ್ಲಿ ಹೋರಾಡುತ್ತಿದ್ದಾರೆ. ಆದರೆ ಇತ್ತ ಮೋದಿಯವರ ತವರು ನೆಲ ಗುಜರಾತ್ ನ ಗಾಂಧಿನಗರದ ಜನತೆ ಮಾತ್ರ ಪ್ರತಿಪಕ್ಷಗಳ ಎಲ್ಲ ಆರೋಪಗಳನ್ನು ಗಾಳಿಗೆ ತೂರಿ ಮತ್ತೆ ಬಿಜೆಪಿಯ ಕೈ ಹಿಡಿದಿದ್ದಾರೆ.
ಗಾಂಧಿನಗರದ ಗದ್ದುಗೆ ಮೇಲೆ ಮತ್ತೆ ಕೇಸರಿ ಪತಾಕೆ
ಗಾಂಧಿನಗರ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು ಬಿಜೆಪಿಯು ಪ್ರತಿಪಕ್ಷಗಳನ್ನು ಧೂಳೀಪಟ ಮಾಡಿದೆ. ಒಟ್ಟು 44 ಸ್ಥಾನಗಳ ಪೈಕಿ ಬಿಜೆಪಿ ಬರೋಬ್ಬರಿ 38 ಸ್ಥಾನಗಳಲ್ಲಿ ಭರ್ಜರಿ ಜಯ ದಾಖಲಿಸುವ ಮೂಲಕ ತನ್ನ ಅಧಿಕಾರವನ್ನು ಉಳಿಸಿಕೊಂಡಿದೆ. ಮೋದಿಯವರನ್ನು ಅಕ್ರಮ ಪ್ರಧಾನಿ ಎಂದು ಟೀಕಿಸುತ್ತಿದ್ದ ರಾಹುಲ್ ಗಾಂಧಿ ತಂಡಕ್ಕೆ ಈ ಫಲಿತಾಂಶ ದೊಡ್ಡ ಮುಖಭಂಗ ತಂದಿದೆ.
ಶೂನ್ಯಕ್ಕೆ ಶರಣಾದ ಆಪ್ ಕಾಂಗ್ರೆಸ್ ಗೆ ಅಲ್ಪ ಏರಿಕೆ
ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಸ್ಥಾನವನ್ನು ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಂಡಿದೆ. 2021ರ ಚುನಾವಣೆಯಲ್ಲಿ ಕೇವಲ 2 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 5 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಇನ್ನು ಕಳೆದ ಬಾರಿ ಒಂದು ಸ್ಥಾನ ಗೆದ್ದು ಖಾತೆ ತೆರೆದಿದ್ದ ಆಮ್ ಆದ್ಮಿ ಪಾರ್ಟಿ ಈ ಬಾರಿ ಒಂದೂ ಸ್ಥಾನ ಗೆಲ್ಲಲಾಗದೆ ಸಂಪೂರ್ಣವಾಗಿ ಮಕಾಡೆ ಮಲಗಿದೆ. ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ.
ಮೋದಿಯವರ ಸ್ಟ್ರೈಕ್ ರೇಟ್ ನಲ್ಲಿ ಅಲ್ಪ ಕುಸಿತ
ಆರೋಪಗಳ ಸುರಿಮಳೆಯ ನಡುವೆಯೂ ಬಿಜೆಪಿ ಜಯಭೇರಿ ಬಾರಿಸಿದೆಯಾದರೂ ಕಳೆದ ಬಾರಿಗೆ ಹೋಲಿಸಿದರೆ ಸ್ಥಾನಗಳ ಸಂಖ್ಯೆಯಲ್ಲಿ ಸ್ವಲ್ಪ ಕುಸಿತ ಕಂಡಿದೆ. 2021ರಲ್ಲಿ ಬಿಜೆಪಿ 44 ಸ್ಥಾನಗಳ ಪೈಕಿ 41 ಸ್ಥಾನಗಳನ್ನು ಗೆದ್ದು ದಾಖಲೆ ನಿರ್ಮಿಸಿತ್ತು. ಆದರೆ ಈ ಬಾರಿ ಆ ಸಂಖ್ಯೆ 38ಕ್ಕೆ ಇಳಿಕೆಯಾಗಿದೆ. ಇದು ಪ್ರತಿಪಕ್ಷಗಳ ನಿರಂತರ ಹೋರಾಟ ಮತ್ತು ವಿವಾದಗಳ ಅಲ್ಪ ಪ್ರಭಾವವಿರಬಹುದು ಎಂಬ ವಿಶ್ಲೇಷಣೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ರಾಹುಲ್ ಗಾಂಧಿ ಹೋರಾಟಕ್ಕೆ ಜನರ ಉತ್ತರವೇ ಇದು
ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಮತ್ತು ಮತಯಂತ್ರಗಳ ಅಕ್ರಮದ ಬಗ್ಗೆ ರಾಹುಲ್ ಗಾಂಧಿ ದೇಶವ್ಯಾಪಿ ಆಂದೋಲನ ರೂಪಿಸುತ್ತಿದ್ದಾರೆ. ಆದರೆ ಗಾಂಧಿನಗರದ ಫಲಿತಾಂಶವು ಜನರು ಇಂದಿಗೂ ಮೋದಿಯವರ ನಾಯಕತ್ವ ಮತ್ತು ಬಿಜೆಪಿಯ ಅಭಿವೃದ್ಧಿ ಮಂತ್ರದ ಮೇಲೆಯೇ ವಿಶ್ವಾಸ ಇಟ್ಟಿದ್ದಾರೆ ಎಂಬುದನ್ನು ಸಾರಿ ಹೇಳುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಕೂಡ ರಾಹುಲ್ ಗಾಂಧಿಯವರ ಆರೋಪಗಳಿಗಿಂತ ಜನರ ತೀರ್ಪು ದೊಡ್ಡದು ಎಂಬ ಮಾತುಗಳು ಸದ್ದು ಮಾಡುತ್ತಿವೆ.
ಗಾಂಧಿನಗರದ ಜೊತೆಗೆ ತಾರಾ ಮತ್ತು ಒಖಾ ಮುನ್ಸಿಪಲ್ ಚುನಾವಣೆಗಳ ಫಲಿತಾಂಶವೂ ಶೀಘ್ರವೇ ಹೊರಬೀಳಲಿದ್ದು ಅಲ್ಲಿಯೂ ಕಮಲ ಅರಳುವ ಸೂಚನೆಗಳು ಕಾಣಿಸುತ್ತಿವೆ. ಒಟ್ಟಾರೆಯಾಗಿ ಅಕ್ರಮ ಪ್ರಧಾನಿ ಎಂಬ ಆರೋಪಗಳ ನಡುವೆ ಸಿಕ್ಕ ಈ ಗೆಲುವು ಬಿಜೆಪಿಗೆ ಹೊಸ ಉತ್ಸಾಹ ನೀಡಿದೆ.








