ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ಕಿಚ್ಚು ಈಗ ಮಂಡ್ಯ ನಾಯಕರ ನಡುವಿನ ನೇರ ಸಮರಕ್ಕೆ ನಾಂದಿ ಹಾಡಿದೆ. ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಸತತವಾಗಿ ಸ್ಟಿಂಗ್ ಆಪರೇಷನ್ ಬಗ್ಗೆ ಮಾತನಾಡುತ್ತಿರುವುದಕ್ಕೆ ಸಚಿವ ಚಲುವರಾಯಸ್ವಾಮಿ ಅವರು ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಕುಮಾರಸ್ವಾಮಿ ಅವರಿಗೆ ಸರಿಯಾದ ನಿದ್ದೆ ಇಲ್ಲದಂತಿದೆ ಅವರನ್ನು ಒಮ್ಮೆ ವೈದ್ಯರ ಬಳಿ ತೋರಿಸಿ ಆರೋಗ್ಯ ತಪಾಸಣೆ ಮಾಡಿಸುವುದು ಒಳಿತು ಎಂದು ಅವರು ಕಿಡಿಕಾರಿದ್ದಾರೆ.
ನಿದ್ದೆ ಇಲ್ಲದ ಕುಮಾರಸ್ವಾಮಿಗೆ ವೈದ್ಯರ ಅಗತ್ಯವಿದೆ
ಕುಮಾರಸ್ವಾಮಿ ಅವರು ದಿನಬೆಳಗಾದರೆ ಸ್ಟಿಂಗ್ ಆಪರೇಷನ್ ಅದು ಇದು ಎಂದು ಬಡಬಡಿಸುತ್ತಿದ್ದಾರೆ. ಅವರಿಗೆ ಎಷ್ಟು ನಿದ್ದೆ ಬರುತ್ತಿದೆಯೋ ಏನೋ ಗೊತ್ತಿಲ್ಲ. ಅವರ ಮಾನಸಿಕ ಸ್ಥಿತಿ ಹೇಗಿದೆ ಎಂಬುದನ್ನು ಒಮ್ಮೆ ವೈದ್ಯರು ಪರೀಕ್ಷಿಸಬೇಕು. ಈ ರಾಜ್ಯದಲ್ಲಿ ಭೀಕರ ಬರಗಾಲವಿದೆ ಕುಡಿಯುವ ನೀರಿನ ಸಮಸ್ಯೆ ಇದೆ ಮತ್ತು ಜನರ ಬದುಕು ಸಂಕಷ್ಟದಲ್ಲಿದೆ. ಇದರ ಬಗ್ಗೆ ಮಾತನಾಡದ ಕುಮಾರಸ್ವಾಮಿ ಅವರಿಗೆ ಕೇವಲ ರಾಜಕೀಯ ಪಿತೂರಿಗಳೇ ಮುಖ್ಯವಾಗಿವೆ. ಜನರಿಗೆ ಇವರ ಈ ಸ್ಟಿಂಗ್ ಆಪರೇಷನ್ ನಾಟಕಗಳು ಬೇಕಾಗಿಲ್ಲ ಎಂದು ಚಲುವರಾಯಸ್ವಾಮಿ ಲೇವಡಿ ಮಾಡಿದರು.
ಪಾಪದ ಹುಡುಗ ಪ್ರಜ್ವಲ್ ಬಗ್ಗೆ ಅನುಕಂಪ ಹೆಣ್ಣುಮಕ್ಕಳ ಬಗ್ಗೆ ಯಾಕಿಲ್ಲ
ಹಾಸನದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ಪ್ರಸ್ತಾಪಿಸಿದ ಚಲುವರಾಯಸ್ವಾಮಿ ಕುಮಾರಸ್ವಾಮಿ ಅವರಿಗೆ ಪ್ರಜ್ವಲ್ ರೇವಣ್ಣ ಮೇಲೆ ಅಪಾರ ಸಹಾನುಭೂತಿ ಇದೆ. ಅವನನ್ನು ಪಾಪದ ಹುಡುಗ ಎಂದು ಕರೆಯುವ ಕುಮಾರಸ್ವಾಮಿ ಅವರಿಗೆ ಆ ಸಂತ್ರಸ್ತ ಹೆಣ್ಣುಮಕ್ಕಳ ಕಣ್ಣೀರು ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು. ನಾವು ಅಸಭ್ಯ ವಿಚಾರ ಎಂದು ಹಾಸನದ ವಿಷಯ ಬಿಟ್ಟುಬಿಟ್ಟಿದ್ದೇವೆ. ಆದರೆ ಇವರೇ ಪದೇ ಪದೇ ಆ ವಿಷಯ ಎತ್ತಿಕೊಂಡು ಪೆನ್ ಡ್ರೈವ್ ಹಂಚಿ ಅನ್ಯಾಯ ಮಾಡಿದರು ಎಂದು ರೋದಿಸುತ್ತಿದ್ದಾರೆ. ಇದು ಸಂತ್ರಸ್ತ ಮಹಿಳೆಯರಿಗೆ ಮಾಡುವ ದೊಡ್ಡ ಅಪಮಾನ ಎಂದು ಆಕ್ರೋಶ ಹೊರಹಾಕಿದರು.
ಪಾಪ ಅಲ್ಲಿಯೂ ಇಲ್ಲ ಇಲ್ಲಿಯೂ ಇಲ್ಲ
ಜನತಾ ದಳದ ನಾಯಕರು ಅಧಿಕಾರಕ್ಕಾಗಿ ಎಲ್ಲೆಂದರಲ್ಲಿ ಹಾರುತ್ತಾರೆ. ಅವರಿಗೆ ಪವರ್ ಎಲ್ಲಿರುತ್ತದೋ ಅಲ್ಲಿ ಇರಬೇಕು ಎಂಬ ಹಪಹಪಿ ಇದೆ. ಹೋಗಿ ಹೋಗಿ ಈಗ ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ ಆದರೆ ಅಲ್ಲಿಯೂ ಅವರಿಗೆ ಬೆಲೆ ಇಲ್ಲ ಇಲ್ಲಿ ರಾಜ್ಯದಲ್ಲಿಯೂ ಅಧಿಕಾರವಿಲ್ಲ ಎಂಬಂತಾಗಿದೆ. ಎರಡೂ ಕಡೆ ಇಲ್ಲದ ಪರಿಸ್ಥಿತಿಯಲ್ಲಿ ಅವರು ಕಂಗಾಲಾಗಿದ್ದಾರೆ. ಅಸೆಂಬ್ಲಿ ನಡೆದಾಗಲೂ ಬರಗಾಲದ ಬಗ್ಗೆ ಚರ್ಚಿಸದೆ ಕೇವಲ ರಾಜಕೀಯ ಲಾಭಕ್ಕಾಗಿ ಸಮಯ ವ್ಯರ್ಥ ಮಾಡಿದರು ಎಂದು ವಿಜಯೇಂದ್ರ ಮತ್ತು ಅಶೋಕ್ ವಿರುದ್ಧವೂ ಕಿಡಿಕಾರಿದರು.
ತನಿಖೆಗೆ ನಮಗಿಂತ ದೊಡ್ಡ ಸರ್ಕಾರ ಅವರದ್ದೇ ಇದೆ
ಸಿದ್ದರಾಮಯ್ಯ ಸರ್ಕಾರದ ಮೇಲಿನ ಆರೋಪಗಳನ್ನು ಸಿಬಿಐಗೆ ನೀಡುವ ಕುರಿತು ಮಾತನಾಡಿದ ಚಲುವರಾಯಸ್ವಾಮಿ ನಮಗಿಂತ ದೊಡ್ಡ ಸರ್ಕಾರ ಅಂದರೆ ಕೇಂದ್ರದಲ್ಲಿ ಅವರದೇ ಸರ್ಕಾರ ಇದೆ ಅಲ್ವಾ ಏನಾದರೂ ಇದ್ದರೆ ಮಾಡಿಸಿಕೊಳ್ಳಲಿ ಎಂದರು. ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಲಿದೆ. ಮುಖ್ಯಮಂತ್ರಿಗಳು ಮತ್ತು ಎಲ್ಲಾ ಸಚಿವರು ಸೇರಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ತನಿಖೆಯ ಅವಶ್ಯಕತೆ ಇಲ್ಲ ಎಂದು ನನಗನ್ನಿಸುತ್ತಿದೆ. ಅಕಸ್ಮಾತ್ ಏನಾದರೂ ಅಕ್ರಮ ಇದ್ದರೆ ಅದು ಮಾಧ್ಯಮಗಳಲ್ಲಿ ಬಂದೇ ಬರುತ್ತದೆ ಆಗ ಸರ್ಕಾರ ಕಣ್ಣು ಮುಚ್ಚಿ ಕುಳಿತುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.








