ರಾಜಕೀಯ ತಂತ್ರಗಾರಿಕೆಯಿಂದ ಈಗ ನೇರ ರಾಜಕಾರಣಕ್ಕೆ ಧುಮುಕಿರುವ ಜನ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಅವರು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿಯವರನ್ನು ದೇವರೆಂದು ಬಿಂಬಿಸಲು ಬಿಜೆಪಿ ಪಡುತ್ತಿರುವ ಪಾಡನ್ನು ನೋಡಿ ಹತಾಶೆಯಾಗಿದೆ ಎಂದು ಹೇಳಿರುವ ಅವರು, ಇದು ಬಿಜೆಪಿಯ ದುರಹಂಕಾರದ ಪರಮಾವಧಿ ಎಂದು ಬಣ್ಣಿಸಿದ್ದಾರೆ.
ಶ್ರೀರಾಮನಿಗೂ ಮೋದಿಯೇ ನೆಲೆ ನೀಡಿದರು ಎಂಬುದು ಅಹಂಕಾರದ ಮಾತು
ಬಿಹಾರದ ಬಿಜೆಪಿ ನಾಯಕರು ಇತ್ತೀಚೆಗೆ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಪ್ರಶಾಂತ್ ಕಿಶೋರ್, ಶ್ರೀರಾಮ ಕಳೆದ 400 ವರ್ಷಗಳಿಂದ ಟೆಂಟ್ನಲ್ಲಿ ನೆಲೆಸಿದ್ದ ಮತ್ತು ಮೋದಿಯವರು ರಾಮನಿಗೂ ಒಂದು ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಅಖಿಲ ಬ್ರಹ್ಮಾಂಡದ ಒಡೆಯನಾದ ಶ್ರೀರಾಮನಿಗೆ ಮರ್ತ್ಯದ ಮನುಷ್ಯನೊಬ್ಬ ನೆಲೆ ನೀಡಿದ ಎಂದು ಹೇಳುವುದು ಅವರ ಅಹಂಕಾರವನ್ನೇ ತೋರಿಸುತ್ತದೆ. ದೇವರು ಎಲ್ಲರಿಗೂ ನೆಲೆ ನೀಡುವವನೇ ಹೊರತು, ಒಬ್ಬ ರಾಜಕಾರಣಿ ದೇವರಿಗೆ ಮನೆ ನೀಡಲು ಸಾಧ್ಯವೇ ಎಂದು ಕಿಶೋರ್ ಪ್ರಶ್ನಿಸಿದ್ದಾರೆ.
ಮೂಲಭೂತ ಅಗತ್ಯಗಳನ್ನು ಮರೆಮಾಚುವ ತಂತ್ರ
ಜನರ ಮೂಲಭೂತ ಅಗತ್ಯಗಳಾದ ಉದ್ಯೋಗ ಮತ್ತು ಶಿಕ್ಷಣವನ್ನು ನೀಡುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಈ ವೈಫಲ್ಯವನ್ನು ಮುಚ್ಚಿಹಾಕಲು ಮೋದಿಯವರನ್ನು ದೇವರೆಂದು ಬಿಂಬಿಸುವ ಕೆಲಸ ನಡೆಯುತ್ತಿದೆ. ಚುನಾವಣಾ ರ್ಯಾಲಿಗಳಲ್ಲಿ ಹನುಮಂತನ ವೇಷಧಾರಿಯಿಂದ ನೃತ್ಯ ಮಾಡಿಸುವ ಮೂಲಕ ಧಾರ್ಮಿಕ ಭಾವನೆಗಳೊಂದಿಗೆ ಬಿಜೆಪಿ ಆಟವಾಡುತ್ತಿದೆ ಎಂದು ಅವರು ಆಕ್ರೋಶ ಹೊರಹಾಕಿದರು. ಜನರ ಹೊಟ್ಟೆ ತುಂಬಿಸುವ ಬಗ್ಗೆ ಮಾತನಾಡದವರು ದೇವರ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಬಾಂಕೀಪುರದ ಬಿಜೆಪಿ ಕೋಟೆಗೆ ಲಗ್ಗೆ ಇಟ್ಟ ಕಿಶೋರ್
ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ಬಾಂಕೀಪುರ ಕ್ಷೇತ್ರದಲ್ಲಿ ಪ್ರಶಾಂತ್ ಕಿಶೋರ್ ಅವರ ಅಭ್ಯರ್ಥಿ ಭರ್ಜರಿ ಜಯ ಸಾಧಿಸುವ ಮೂಲಕ ಬಿಜೆಪಿಗೆ ಅಚ್ಚರಿ ಮೂಡಿಸಿದ್ದಾರೆ. ಬಿಜೆಪಿ ಟಿಕೆಟ್ ನೀಡಿದರೆ ನಾಯಿ ಅಥವಾ ಬೆಕ್ಕು ಕೂಡ ಇಲ್ಲಿ ಗೆಲ್ಲುತ್ತದೆ ಎಂದು ಗರ್ವದಿಂದ ಹೇಳುತ್ತಿದ್ದ ಕಮಲ ನಾಯಕರಿಗೆ ಜನ ಸುರಾಜ್ ಪಾರ್ಟಿ ತಕ್ಕ ಪಾಠ ಕಲಿಸಿದೆ. ಈ ದುರಹಂಕಾರಕ್ಕೆ ಇದೇ ರೀತಿ ಅಕ್ಟೋಬರ್ 23 ರಂದು ನಡೆಯುವ ವಿಧಾನಪರಿಷತ್ ಚುನಾವಣೆಯಲ್ಲೂ ಬ್ರೇಕ್ ಹಾಕಬೇಕು ಎಂದು ಅವರು ಕರೆ ನೀಡಿದರು.
ಬಿಜೆಪಿಯ ಅತಿಕ್ರಮಣ ಮತ್ತು ಅಹಂಕಾರದ ರಾಜಕಾರಣವನ್ನು ಬಿಹಾರದ ಜನತೆ ಇನ್ನು ಮುಂದೆ ಸಹಿಸುವುದಿಲ್ಲ. ಶಿಕ್ಷಣ ಮತ್ತು ಉದ್ಯೋಗದ ಪರವಾಗಿ ಇರುವ ನಾಯಕತ್ವಕ್ಕೆ ಬೆಂಬಲ ನೀಡುವ ಕಾಲ ಬಂದಿದೆ ಎಂದು ಪ್ರಶಾಂತ್ ಕಿಶೋರ್ ಜನರಲ್ಲಿ ಮನವಿ ಮಾಡಿಕೊಂಡರು.








