ಹುಬ್ಬಳ್ಳಿ: ಕರ್ನಾಟಕ ಬಿಜೆಪಿಯ ಅಂಗಳದಲ್ಲಿ ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿದ್ದ ಕೆಸರೆರಚಾಟ, ಪರಸ್ಪರ ವಾಗ್ದಾಳಿ ಮತ್ತು ಶೀತಲ ಸಮರಕ್ಕೆ ಈಗ ದಿಢೀರ್ ವಿರಾಮ ಸಿಕ್ಕಿದೆಯೇ ಎಂಬ ಅನುಮಾನ ಮೂಡಿದೆ. ಪರಸ್ಪರ ಮುಖ ನೋಡಲು ಇಷ್ಟಪಡದ, ಮಾಧ್ಯಮಗಳ ಮುಂದೆ ಒಬ್ಬರನ್ನೊಬ್ಬರು ಕಟುವಾಗಿ ಟೀಕಿಸುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಉಚ್ಚಾಟಿತ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ಅನಿರೀಕ್ಷಿತ ಭೇಟಿ ಈಗ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.
ತಾಲೂಕಿನ ಛಬ್ಬಿ ಗ್ರಾಮದ ಪತ್ರಕರ್ತರೊಬ್ಬರ ನಿವಾಸದಲ್ಲಿ ಭಾನುವಾರ ನಡೆದ ಈ ಹೈವೋಲ್ಟೇಜ್ ಚಹಾ ಕೂಟ ಕೇವಲ ಕುಶಲೋಪರಿ ವಿಚಾರಣೆಗೆ ಸೀಮಿತವಾಗಿರಲಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ವಾದ. ಅಸಲಿಗೆ ನಡೆದಿದ್ದೇನು ಎಂದರೆ, ಧಾರವಾಡದ ವರೂರಿನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ ಮುಗಿಸಿ ಯತ್ನಾಳ್ ಅವರು ಪತ್ರಕರ್ತರ ಮನೆಗೆ ಮೊದಲಿಗೇ ಆಗಮಿಸಿದ್ದರು. ಇದೇ ವೇಳೆ ಹುಬ್ಬಳ್ಳಿಯಲ್ಲಿ ಪರಿಷತ್ ಚುನಾವಣೆ ಪ್ರಚಾರ ಮುಗಿಸಿದ ವಿಜಯೇಂದ್ರ ಕೂಡ ಅದೇ ಮನೆಗೆ ಬಂದರು.
ಯತ್ನಾಳ್ ಕುಳಿತಿದ್ದ ಕೊಠಡಿಯೊಳಗೆ ಪ್ರವೇಶಿಸಿದ ವಿಜಯೇಂದ್ರ, ಮುಗುಳ್ನಗುತ್ತಲೇ ಆರಾಮ ಇದ್ದೀರಾ ಅಣ್ಣಾ ಎಂದು ಯತ್ನಾಳ್ ಅವರನ್ನು ಉದ್ದೇಶಿಸಿ ಮಾತನಾಡಿದರು. ವಿಜಯೇಂದ್ರ ಅವರ ಈ ಸೌಜನ್ಯದ ನುಡಿಗೆ ಅಷ್ಟೇ ನಯವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ಹಾ ಆರಾಮ ನೋಡ್ರಿ, ನೀವು ಹೇಗಿದ್ದೀರಿ ಎಂದು ಮರುಪ್ರಶ್ನೆ ಹಾಕಿದರು. ಅಲ್ಲಿಗೆ ಮುಗಿಯದ ಈ ಭೇಟಿ, ಸುಮಾರು 30 ನಿಮಿಷಗಳ ಕಾಲ ಏಕಾಂತದ ಮಾತುಕತೆಗೆ ನಾಂದಿ ಹಾಡಿತು.
ಯತ್ನಾಳ್ ಅವರು ವಿಜಯೇಂದ್ರ ಮತ್ತು ಬಿಎಸ್ ಯಡಿಯೂರಪ್ಪ ಅವರ ಕುಟುಂಬ ರಾಜಕಾರಣದ ವಿರುದ್ಧ ನಿರಂತರವಾಗಿ ಯುದ್ಧ ಸಾರುತ್ತಾ ಬಂದವರು. ಇಂತಹ ಸಂದರ್ಭದಲ್ಲಿ ಇಬ್ಬರೂ ನಾಯಕರು ಅಕ್ಕಪಕ್ಕ ಕುಳಿತು 30 ನಿಮಿಷಗಳ ಕಾಲ ಚರ್ಚೆ ನಡೆಸಿರುವುದು ಬಿಜೆಪಿಯೊಳಗಿನ ಭಿನ್ನಮತ ಶಮನದ ಮುನ್ಸೂಚನೆಯೇ ಅಥವಾ ಇದೊಂದು ಆಕಸ್ಮಿಕ ಭೇಟಿಯೇ ಎಂಬ ಚರ್ಚೆ ಈಗ ಗಲ್ಲಿ ಗಲ್ಲಿಯಲ್ಲೂ ನಡೆಯುತ್ತಿದೆ. ಯತ್ನಾಳ್ ಅವರನ್ನು ಪಕ್ಷಕ್ಕೆ ಮತ್ತೆ ಕರೆತರುವ ಬಗ್ಗೆ ಹೈಕಮಾಂಡ್ ಸೂಚನೆ ನೀಡಿದೆಯೇ ಅಥವಾ ರಾಜ್ಯ ನಾಯಕತ್ವದ ಮಟ್ಟದಲ್ಲಿ ಹೊಂದಾಣಿಕೆಯ ಮಂತ್ರ ಜಪಿಸಲಾಗುತ್ತಿದೆಯೇ ಎಂಬುದು ಸದ್ಯದ ಕುತೂಹಲ. ಈ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದು, ಕಮಲ ಪಾಳೆಯದ ಮುಂದಿನ ನಡೆಗಳ ಮೇಲೆ ಇಡೀ ರಾಜ್ಯದ ಕಣ್ಣು ನೆಟ್ಟಿದೆ.








